ಮಹಿಳೆಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೇ 20ಕ್ಕೆ ಕಾಯ್ದಿರಿಸಿದೆ. ಈ ಮಧ್ಯೆ, ಅಲ್ಲಿಯವರೆಗೆ ಮಧ್ಯಂತರ ಜಾಮೀನು ಆದೇಶವನ್ನು ಮುಂದುವರಿಸಿದೆ.
ಎಚ್ ಡಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶೆ ಜೆ ಪ್ರೀತ್ ಅವರು ಇಂದು ನಡೆಸಿದರು.
“ನಿನ್ನೆ ಮಂಜೂರು ಮಾಡಿರುವ ಮಧ್ಯಂತರ ಜಾಮೀನು ಮೇ 20ರವರೆಗೆ ಮುಂದುವರಿಯಲಿದ್ದು, ಅಂದು ಜಾಮೀನು ಆದೇಶ ಪ್ರಕಟಿಸಲಾಗುವುದು” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರ ರೇವಣ್ಣ ಪರವಾಗಿ ವಾದಿಸಿದ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ಹೊಳೆನರಸೀಪುರದಲ್ಲಿ ದಾಖಲಿಸಿರುವ ದೂರು ಕ್ರಮಬದ್ಧವಾಗಿಲ್ಲ. ಸಿಆರ್‌ಪಿಸಿ ಸೆಕ್ಷನ್ 154ರ ಅಡಿ ಮಹಿಳಾ ಅಧಿಕಾರಿ ದೂರು ದಾಖಲಿಸಿಕೊಳ್ಳಬೇಕು. ಸಂತ್ರಸ್ತೆಯ ಹೇಳಿಕೆಯನ್ನು ವಿಡಿಯೋ ಮಾಡಬೇಕಿತ್ತು. ಮಹಿಳೆಯ ಘನತೆ ಕಾಪಾಡುವ ನಿಟ್ಟಿನಲ್ಲಿ ಕಾಯಿದೆಗೆ 2013ರಲ್ಲಿ ತಿದ್ದುಪಡಿ ತರಲಾಗಿದೆ. ಆದರೆ, ಇದನ್ನು ಪಾಲಿಸಲಾಗಿಲ್ಲ” ಎಂದರು.
“ಟೈಪ್ ಮಾಡಿರುವ ದೂರಿನ ಪ್ರತಿಗೆ ಸಂತ್ರಸ್ತೆ ಸಹಿ ಮಾಡಿ ನೀಡಿದ್ದಾರೆ. ಇಲ್ಲಿ ತಪ್ಪಾಗಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ ಆರೋಪ) ಅನ್ವಯಿಸಲಾಗಿದೆ. ಮೊದಲಿಗೆ ಜಾಮೀನುಸಹಿತ ಆರೋಪಗಳನ್ನು ಒಳಗೊಂಡ ಎಫ್‌ಐಆರ್ ದಾಖಲಿಸಲಾಗಿತ್ತು. ಆನಂತರ ಅತ್ಯಾಚಾರ ಆರೋಪ ಸೇರಿಸಲಾಗಿದೆ. ಲೋಕಸಭೆ ಎರಡನೇ ಹಂತದ ಮತದಾನ ಇರುವ ಸಂದರ್ಭದಲ್ಲಿ ಹೀಗೆಲ್ಲಾ ಮಾಡಲಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ” ಎಂದು ಪ್ರಬಲವಾಗಿ ಆಕ್ಷೇಪಿಸಿದರು.
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ನಾಯ್ಕ್ ಅವರು “ಆರೋಪಿಯು ಈ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸುವ ಮೂಲಕ ತಪ್ಪು ಹೆಜ್ಜೆ ಇರಿಸಿದ್ದಾರೆ. ಈ ಪ್ರಕರಣದಲ್ಲಿ ತಂದೆ–ಮಗ ಒಂದೇ ಹೆಣ್ಣನ್ನು ಬಳಸಿಕೊಂಡಿದ್ದಾರೆ. ಆಕೆಗೆ ಪದೇ ಪದೇ ಲೈಂಗಿಕ ಹಿಂಸೆ ನೀಡಿ ದೌರ್ಜನ್ಯ ಎಸಗಿದ್ದಾರೆ. ಹೀಗಾಗಿ, ಈ ಜಾಮೀನು ಅರ್ಜಿಯನ್ನು ಸತ್ರ ನ್ಯಾಯಾಲಯ ಪರಿಶೀಲಿಸಬೇಕು’ ಎಂದು ಕೋರಿದರು.
ಪ್ರಾಸಿಕ್ಯೂಷನ್ ಪರ ಹಾಜರಿದ್ದ ಮತ್ತೊಬ್ಬ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕಿ ಜಯ್ನಾ ಕೊಠಾರಿ ಅವರು “ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಎಂಬ ಪದಗಳನ್ನು ಅಷ್ಟು ಸರಳವಾಗಿ ವಿಶದೀಕರಿಸಲು ಆಗದು. ಈ ಜಾಮೀನು ಅರ್ಜಿ ಏನಿದ್ದರೂ ಸತ್ರ ನ್ಯಾಯಾಲಯದಲ್ಲೇ ಪರಿಶೀಲನೆಗೆ ಒಳಪಡಬೇಕು” ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮೇ 20ಕ್ಕೆ ಆದೇಶ ಕಾಯ್ದಿರಿಸಿದೆ. ಅಲ್ಲಿಯವರೆಗೆ ರೇವಣ್ಣಗೆ ಮಧ್ಯಂತರ ಜಾಮೀನು ಆದೇಶ ಮುಂದುವರಿಸಿದೆ.