Karnataka High Court 
ಸುದ್ದಿಗಳು

ಲೈಂಗಿಕ ದೌರ್ಜನ್ಯ ಸಂತ್ರಸ್ತರಿಗೆ ಪರಿಹಾರ: ₹15 ಕೋಟಿ ಬಿಡುಗಡೆ ನಿರ್ಧಾರ ತಿಳಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಎರಡನೇ ಕಂತಿನ 4 ಕೋಟಿ ರೂಪಾಯಿಗಳನ್ನು ಈ ವರ್ಷ ಜನವರಿ 27ರಂದು ಸರ್ಕಾರದಿಂದ ಬಿಡುಗಡೆ ಮಾಡಲಾಗಿದ್ದು, ಈ ಹಣ ಮಾರ್ಚ್‌ 5ರಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಖಾತೆಯಲ್ಲಿ ಜಮೆ ಆಗಿದೆ ಎಂದು ಮಾಹಿತಿ ನೀಡಿದರು.

Bar & Bench

ಸಂತ್ರಸ್ತರ ಪರಿಹಾರ ಯೋಜನೆಯಡಿ ಪರಿಹಾರ ವಿತರಿಸಲು 2022-23ನೇ ಸಾಲಿಗೆ ರೂ.15 ಕೋಟಿ ಬಿಡುಗಡೆ ಮಾಡಲು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಮನವಿ ಕುರಿತು ತನ್ನ ನಿರ್ಧಾರ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.

‘ಲೈಂಗಿಕ ದೌರ್ಜನ್ಯಗಳ ವಿರುದ್ಧ ಜನಾಂದೋಲನ’ (ಪಿಎಂಎಸ್‌ಎ) ಮಹಿಳಾ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಅರ್ಜಿ ವಿಚಾರಣೆಗೆ ಬಂದಾಗ ಅರ್ಜಿದಾರ ಸಂಘಟನೆ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲೆ ನಿಧಿಶ್ರೀ ಅವರು ಸಂತ್ರಸ್ತ ಪರಿಹಾರ ಯೋಜನೆಯಡಿ 2022-23ನೇ ಸಾಲಿಗೆ 15 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ 2022ರ ಜನವರಿ 1ರಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಸರ್ಕಾರ ನಿರ್ಧಾರ ತಿಳಿಸಬೇಕಿದೆ ಎಂದು ಪೀಠದ ಗಮನಕ್ಕೆ ತಂದರು.

ಈ ವೇಳೆ ಪೀಠವು 2022-23ನೇ ಸಾಲಿಗೆ 15 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬರೆದ ಪತ್ರದ ಕುರಿತು ಮೂರು ವಾರಗಳಲ್ಲಿ ತನ್ನ ನಿರ್ಧಾರ ತಿಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ ಪೀಠ ವಿಚಾರಣೆ ಮುಂದೂಡಿತು.

ಸರ್ಕಾರದ ಪರ ವಕೀಲರು, ಸಂತ್ರಸ್ತರ ಪರಿಹಾರ ಯೋಜನೆಯಡಿ 2021-22ನೇ ಸಾಲಿನ ಮೊದಲ ಕಂತಿನ 3.5 ಕೋಟಿ ರೂಪಾಯಿಗಳನ್ನು 2021ರ ಜೂನ್‌ 30ರಂದು ಬಿಡುಗಡೆ ಮಾಡಲಾಗಿತ್ತು. 2ನೇ ಕಂತಿನ 4 ಕೋಟಿ ರೂಪಾಯಿಗಳನ್ನು ಈ ವರ್ಷ ಜನವರಿ 27ರಂದು ಸರ್ಕಾರದಿಂದ ಬಿಡುಗಡೆ ಮಾಡಲಾಗಿದ್ದು, ಈ ಹಣ ಮಾರ್ಚ್‌ 5ರಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಖಾತೆಯಲ್ಲಿ ಜಮೆ ಆಗಿದೆ ಎಂದು ಮಾಹಿತಿ ನೀಡಿದರು.