Sexual Assault 
ಸುದ್ದಿಗಳು

ಮಹಿಳೆ ಪ್ರಚೋದನಕಾರಿ ಉಡುಗೆ ತೊಟ್ಟರೆ ಲೈಂಗಿಕ ಕಿರುಕುಳ ಪ್ರಕರಣ ಮೇಲ್ನೋಟಕ್ಕೆ ನಿಲ್ಲದು: ಕೇರಳ ನ್ಯಾಯಾಲಯ

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಮತ್ತು ಲೇಖಕ ಸಿವಿಕ್ ಚಂದ್ರನ್‌ಗೆ ನಿರೀಕ್ಷಣಾ ಜಾಮೀನು ನೀಡುವ ಸಂದರ್ಭದಲ್ಲಿ ಕೋಳಿಕ್ಕೋಡ್ ಸೆಷನ್ಸ್ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Bar & Bench

ಮಹಿಳೆ ಲೈಂಗಿಕ ಪ್ರಚೋದನಕಾರಿ ಉಡುಗೆ ಧರಿಸಿದ್ದರೆ ಐಪಿಸಿ ಸೆಕ್ಷನ್‌ 354 ಎ ಅಡಿ ಮೇಲ್ನೋಟಕ್ಕೆ ಲೈಂಗಿಕ ಕಿರುಕುಳದ ದೂರು ನಿಲ್ಲುವುದಿಲ್ಲ ಎಂದು ಕೋಳಿಕ್ಕೋಡ್‌ ಸೆಷನ್ಸ್‌ ನ್ಯಾಯಾಧೀಶರು ಹೇಳಿದ್ದಾರೆ [ಸಿವಿಕ್ ಚಂದ್ರನ್ ಅಲಿಯಾಸ್‌ ಸಿ ವಿ ಕುಟ್ಟನ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಸೆಕ್ಷನ್ 354 ರ ಅಡಿಯಲ್ಲಿ ಅಪರಾಧ ಮಾಡಲು ಕೆಲವು ಅನಪೇಕ್ಷಿತ ಲೈಂಗಿಕ ಬೆಳವಣಿಗೆಗಳು ನಡೆದಿರಬೇಕು ಆದರೆ ದೂರುದಾರರ ಛಾಯಾಚಿತ್ರಗಳು ಆಕೆ "ಪ್ರಚೋದನಕಾರಿ ಉಡುಗೆಗಳ ಮೂಲಕ ಪ್ರದರ್ಶಿತೆಯಾಗಿರುವುದನ್ನು" ತೋರಿಸುತ್ತವೆ ಎಂದು ಕೋಳಿಕ್ಕೋಡ್ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಎಸ್ ಕೃಷ್ಣ ಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.

“ಈ ಸೆಕ್ಷನ್‌ನಡಿ ಅಪರಾಧ ಎಂದು ಗುರುತಿಸಲು ದೈಹಿಕ ಸಂಪರ್ಕ ಮತ್ತು ಇಷ್ಟವಿಲ್ಲದ ಮತ್ತು ಸ್ಪಷ್ಟವಾದ ಲೈಂಗಿಕ ಅಭಿವ್ಯಕ್ತಿಗಳನ್ನು ಒಳಗೊಂಡಿರುವ ಬೆಳವಣಿಗೆಗಳು ನಡೆದಿರಬೇಕು. ಲೈಂಗಿಕ ಲಾಭಕ್ಕಾಗಿ ಬೇಡಿಕೆ ಅಥವಾ ವಿನಂತಿ ಇರಬೇಕು. ಲೈಂಗಿಕ ಛಾಯೆಯ ಮಾತುಗಳಿರಬೇಕು. ಆರೋಪಿ ಜಾಮೀನು ಅರ್ಜಿಯೊಂದಿಗೆ ಸಲ್ಲಿಸಿರುವ ಛಾಯಾಚಿತ್ರಗಳು ದೂರುದಾರೆಯೇ ಕೆಲ ಲೈಂಗಿಕ ಪ್ರಚೋದನಕಾರಿಯಾದ ಉಡುಪುಗಳನ್ನು ತೊಟ್ಟಿರುವುದನ್ನು ಬಹಿರಂಗಪಡಿಸುತ್ತದೆ. ಹಾಗಾಗಿ ಆರೋಪಿಗಳ ವಿರುದ್ಧ ಸೆಕ್ಷನ್ 354ಎ ಮೇಲ್ನೋಟಕ್ಕೆ ನಿಲ್ಲುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಮತ್ತು ಲೇಖಕ ಸಿವಿಕ್ ಚಂದ್ರನ್‌ಗೆ ನಿರೀಕ್ಷಣಾ ಜಾಮೀನು ನೀಡುವ ಸಂದರ್ಭದಲ್ಲಿ ಕೋಳಿಕ್ಕೋಡ್ ಸೆಷನ್ಸ್ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಎಪ್ಪತ್ತರ ಹರೆಯದ ದೈಹಿಕ ವಿಕಲಚೇತನ ಚಂದ್ರನ್ ದೂರುದಾರೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರಬಹುದು ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂದು ಸೆಷನ್ಸ್ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

"ದೈಹಿಕ ಸಂಪರ್ಕವಿದೆ ಎಂದು ಒಪ್ಪಿಕೊಂಡರೂ ಸಹ, 74 ವರ್ಷ ವಯಸ್ಸಿನ, ದೈಹಿಕವಾಗಿ ಅಂಗವೈಕಲ್ಯಕ್ಕೊಳಗಾಗಿರುವ ವ್ಯಕ್ತಿಯೊಬ್ಬರು ದೂರುದಾರರನ್ನು ಬಲವಂತವಾಗಿ ತನ್ನ ತೊಡೆಯ ಮೇಲೆ ಕೂರಿಸಿಕೊಂಡು, ಆಕೆಯ ಸ್ತನವನ್ನು ಲೈಂಗಿಕವಾಗಿ ಸ್ಪರ್ಶಿಸಿದ್ದಾರೆ ಎಂದು ನಂಬುವುದು ಅಸಾಧ್ಯ. ಹಾಗಾಗಿ ಇದು ಆರೋಪಿಗೆ ಜಾಮೀನು ನೀಡಬಹುದಾದ ಸೂಕ್ತ ಪ್ರಕರಣವಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಚಂದ್ರನ್‌ ಅವರ ಮನವಿಯನ್ನು ಪುರಸ್ಕರಿಸಿ ನಿರೀಕ್ಷಣಾ ಜಾಮೀನು ನೀಡಿತು.