A1
ಸುದ್ದಿಗಳು

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ಎಫ್ಐಆರ್ ದಾಖಲಾಗಿರುವುದನ್ನು ಗಮನಿಸಿ ಪ್ರಕರಣ ಮುಕ್ತಾಯಗೊಳಿಸಿದ ಸುಪ್ರೀಂ

ಅರ್ಜಿದಾರರ ಪರ ವಕೀಲರು ಪ್ರಕರಣ ಮುಕ್ತಾಯಗೊಳಿಸಲು ವಿರೋಧ ವ್ಯಕ್ತಪಡಿಸಿದರಾದರೂ ಪೀಠ ಈ ಕೋರಿಕೆ ಪರಿಗಣಿಸಲು ನಿರಾಕರಿಸಿತು.

Bar & Bench

ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಮುಕ್ತಾಯಗೊಳಿಸಿದೆ.

ಎಫ್‌ಐಆರ್‌ ದಾಖಲಿಸಿಕೊಂಡಿರುವುದರಿಂದ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಪ್ರಾರ್ಥನೆ ಈಡೇರಿದೆ ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ ಎಸ್‌ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಪ್ರಕರಣವನ್ನು ಮುಕ್ತಾಯಗೊಳಿಸಲು ನಿರ್ಧರಿಸಿತು.

ದೂರುದಾರರಿಗೆ ಭದ್ರತೆ ಒದಗಿಸುವಂತೆ ಈ ಹಿಂದೆ ನೀಡಿದ್ದ ನಿರ್ದೇಶನವನ್ನು ದೆಹಲಿ ಪೊಲೀಸರು ಪಾಲಿಸಿದ್ದಾರೆ ಎಂಬ ಅಂಶವನ್ನು ಕೂಡ ನ್ಯಾಯಾಲಯ ಇದೇ ವೇಳೆ ಗಮನಿಸಿತು. ಹೀಗಾಗಿ ತನ್ನೆದುರು ಇರುವ ಪ್ರಕರಣದ ವ್ಯಾಪ್ತಿ ಪರಿಗಣಿಸಿ ಈಗ ವಿಚಾರಣೆ ಮುಕ್ತಾಯಗೊಳಿಸುತ್ತಿರುವುದಾಗಿ ನ್ಯಾಯಾಲಯ ತಿಳಿಸಿತು.    

ಬೇರಾವುದೇ ಪರಿಹಾರ ಅಗತ್ಯವಿದ್ದರೆ ಅರ್ಜಿದಾರರು ಸೂಕ್ತ ನ್ಯಾಯವ್ಯಾಪ್ತಿ ಇರುವ ಮ್ಯಾಜಿಸ್ಟ್ರೀಯಲ್‌ ನ್ಯಾಯಾಲಯ ಅಥವಾ ಹೈಕೋರ್ಟ್‌ ಮೊರೆ ಹೋಗಬಹುದು ಎಂದು ಪೀಠ ವಿವರಿಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ನರೇಂದರ್‌ ಹೂಡಾ ಅವರು ಪ್ರಕರಣ ಮುಕ್ತಾಯಗೊಳಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರಾದರೂ ಪೀಠ ಈ ಕೋರಿಕೆ ಪರಿಗಣಿಸಲು ನಿರಾಕರಿಸಿತು.

“ಪ್ರಕರಣ ಮುಗಿದ ಕೂಡಲೇ ದೆಹಲಿ ಪೊಲೀಸರು ತನಿಖೆ ವಿಳಂಬಗೊಳಿಸುತ್ತಾರೆ ಎಂಬುದು ನನಗೆ ಖಚಿತವಾಗಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಯಬೇಕು” ಎಂದು ಅವರು ಕೋರಿದರು.

ಆಗ ಸಿಜೆಐ ಅವರು “ಅರ್ಜಿಯಲ್ಲಿ ಮಾಡಲಾದ ಮನವಿಗೆ ನ್ಯಾಯಾಲಯ ಸೀಮಿತವಾಗಿದ್ದು ಆ ಕೋರಿಕೆಯನ್ನು ಈಡೇರಿಸಲಾಗಿದೆ. ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶದಿಂದ ನೀವು ನೊಂದಿದ್ದರೆ ದೆಹಲಿ ಹೈಕೋರ್ಟ್‌ ಮೊರೆ ಹೋಗಬಹುದು” ಎಂದು ಸಿಜೆಐ ಪ್ರತಿಕ್ರಿಯಿಸಿದರು.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತತರ್‌ನಲ್ಲಿ ಕಳೆದ ಹಲವು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.