ಅಪ್ರಾಪ್ತ ಪುತ್ರಿಗೆ ತಂದೆಯೇ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಪಕ ತನಿಖೆ ನಡೆಸದ ಕೋರಮಂಗಲ ಪೊಲೀಸರ ವಿರುದ್ಧ ಈಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ತನಿಖಾಧಿಕಾರಿಯನ್ನು ಬದಲಿಸಿ ಬೇರೊಬ್ಬರನ್ನು ನೇಮಿಸಲು ಪೊಲೀಸ್ ಆಯುಕ್ತರಿಗೆ ಸೂಚಿಸಿದೆ. ಅಲ್ಲದೆ, 10 ವಾರಗಳಲ್ಲಿ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಿ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕು ಎಂದು ಆದೇಶಿಸಿದೆ.
ಪ್ರಕರಣದ ಸಂಬಂಧ ಹೆಚ್ಚಿನ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಸಂತ್ರಸ್ತೆಯ ತಾಯಿ (ಆರೋಪಿಯ ಪತ್ನಿ) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಪ್ರಕರಣ ಸಂಬಂಧ ಕೋರಮಂಗಲ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿನ ಹಲವು ದೋಷಗಳನ್ನು ಗಮನಿಸಿದ ಪೀಠ, ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ವಿಚಾರಣೆಗೆ ಅಗತ್ಯವಿರುವ ಹಲವು ದಾಖಲೆಗಳನ್ನು ಸಂಗ್ರಹಿಸಿಲ್ಲ. ತನಿಖಾಧಿಕಾರಿಗಳು ಉದ್ದೇಶಪೂರ್ವಕವಾಗಿ ದಾಖಲೆಗಳನ್ನು ಸಂಗ್ರಹಿಸಲು ನಿರಾಕರಿಸಿದ್ದು, ತನಿಖೆ ಕಳಪೆಯಾಗಿದೆ ಎಂದು ತನ್ನ ಆದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
ಈಗಾಗಲೇ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿರುವ ತನಿಖಾಧಿಯಾರಿಯನ್ನು ಹೊರತುಪಡಿಸಿ ಬೇರೆ ತನಿಖಾಧಿಕಾರಿಯನ್ನು ಪೊಲೀಸ್ ಆಯುಕ್ತರು ನೇಮಕ ಮಾಡಬೇಕು. ಆ ತನಿಖಾಧಿಕಾರಿ 10 ವಾರಗಳ ಒಳಗೆ ಹೆಚ್ಚಿನ ತನಿಖೆ ನಡೆಸಿ, ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಆರೋಪ ಪಟ್ಟಿ ಸಲ್ಲಿಸಬೇಕು. ಅಲ್ಲಿಯವರೆಗೆ ಈ ಮೊದಲು ಸಲ್ಲಿಕೆಯಾಗಿರುವ ಆರೋಪ ಪಟ್ಟಿಯ ಕುರಿತು ವಿಚಾರಣಾಧೀನ ನ್ಯಾಯಾಲಯ ಯಾವುದೇ ಕ್ರಮಕ್ಕೆ ಮುಂದಾಗಬಾರದು. ಹೆಚ್ಚಿನ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಸಂಬಂಧಪಟ್ಟ ನ್ಯಾಯಾಲಯ ಕಾನೂನು ಪ್ರಕಾರ ಪ್ರಕರಣದ ವಿಚಾರಣೆ ನಡೆಸಬಹುದು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ತನಿಖಾಧಿಕಾರಿಗಳು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹಲವು ದೋಷಗಳಿದ್ದು, ಅದನ್ನು ಅರ್ಥ ಮಾಡಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂತ್ರಸ್ತೆಯ ಹೇಳಿಕೆಯಲ್ಲಿ ಆರೋಪಿಯ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಅಂಶವನ್ನು ಆರೋಪ ಪಟ್ಟಿಯಲ್ಲಿ ಸೇರಿಸಬೇಕಾಗಿತ್ತು. ಆದರೆ, ತನಿಖಾಧಿಕಾರಿಗಳು ಈ ಅಂಶವನ್ನು ಆರೋಪ ಪಟ್ಟಿಯಲ್ಲಿ ಕೈಬಿಟ್ಟಿದ್ದು, ಉದ್ದೇಶಪೂರ್ವಕವಾಗಿ ಆರೋಪಿಯ ವಿರುದ್ಧ ಆರೋಪ ಮಾಡಲು ನಿರ್ಲಕ್ಷಿಸಿದ್ದಾರೆ ಎಂದು ಹೈಕೋರ್ಟ್ ಹೇಳಿದೆ.
ವೈದ್ಯರ ಮುಂದೆ ಸಂತ್ರಸ್ತೆ ನೀಡಿರುವ ಹೇಳಿಕೆಗಳನ್ನು ಆರೋಪ ಪಟ್ಟಿಯಲ್ಲಿ ದಾಖಲಿಸಿಲ್ಲ. ಸಂತ್ರಸ್ತೆಯ ತಾಯಿಯನ್ನು ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಲು ತನಿಖಾಧಿಕಾರಿ ವಿಫಲರಾಗಿದ್ದಾರೆ. ಅಶ್ಲೀಲ ವಿಡಿಯೋಗಳುಳ್ಳ ಲ್ಯಾಪ್‌ಟಾಪ್ ಅಥವಾ ಮೊಬೈಲ್ ಫೋನ್ ವಶಕ್ಕೆ ಪಡೆದಿಲ್ಲ ಹಾಗೂ ಅವುಗಳ ಸಂಬಂಧ ವಿಚಾರಣೆ ನಡೆಸಿಲ್ಲ. ಐಪ್ಯಾಡ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹೇಳಲಾಗಿದ್ದು, ವರದಿ ಈವರೆಗೂ ಲಭ್ಯವಾಗಿಲ್ಲ. ಹೀಗಿದ್ದರೂ, ಅಂತಿಮ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ.
ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಬಳಕೆಯ ಸ್ಥಳವನ್ನೂ ಉಲ್ಲೇಖಿಸಿಲ್ಲ. ಆರೋಪಿಯ ವಿಕೃತ ವರ್ತನೆಯ ಬಗ್ಗೆ ಸಂಬಂಧಿಕರ ಹೇಳಿಕೆ ಪಡೆದಿಲ್ಲ. ಮಗು ಅನುಭವಿಸಿರುವ ಮಾನಸಿಕ ಹಿಂಸೆಗೆ ಸಂಬಂಧಿಸಿದಂತೆ ಮನೋ ವಿಜ್ಞಾನಿಗಳ ಹೇಳಿಕೆಯನ್ನೂ ಆರೋಪ ಪಟ್ಟಿಯಲ್ಲಿ ಸೇರಿಸಿಲ್ಲ. ಈ ಎಲ್ಲ ಕಾರಣಗಳಿಂದ ಆರೋಪಪಟ್ಟಿಯು ದೋಷಪೂರಿತವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: 2014ರಲ್ಲಿ ಮದುವೆಯಾಗಿದ್ದ ದಂಪತಿಗೆ ಹೆಣ್ಣು ಮಗುವಿತ್ತು. 2022ರ ಆಗಸ್ಟ್ 24ರಂದು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಪತ್ನಿ, ಮಗಳನ್ನು ನಗ್ನಗೊಳಿಸಿ, ಆಕೆಯೊಂದಿಗೆ ಪತಿಯೂ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದರು. ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿ ಖಾಸಗಿ ಅಂಗಗಳನ್ನು ಸ್ಪರ್ಶಿಸುತ್ತಿದ್ದರು. ಮಗುವಿನ ಸಮ್ಮುಖದಲ್ಲೇ ಲೈಂಗಿಕ ಕ್ರಿಯೆ ನಡೆಸಲು ನನ್ನನ್ನು ಒತ್ತಾಯಿಸುತ್ತಿದ್ದರು. ಮಗು ಬಳಸುತ್ತಿದ್ದ ಐಪ್ಯಾಡ್‌ನಲ್ಲಿ ಮಕ್ಕಳ ಆಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡಿ ಅವುಗಳನ್ನು ವೀಕ್ಷಿಸುವಂತೆ ಒತ್ತಾಯಿಸುತ್ತಿದ್ದರು. ಆದ್ದರಿಂದ, ವಿಕೃತ ಮನಸಿನ ಪತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದರು.
ದೂರು ಆಧರಿಸಿ ಪತಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು 2022ರ ಅಕ್ಟೋಬರ್‌ನಲ್ಲಿ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ತನಿಖೆಯಲ್ಲಿ ಹಲವು ಲೋಪಗಳಿದ್ದು, ಹೆಚ್ಚಿನ ತನಿಖೆ ನಡೆಸಲು ಸಂಬಂಧಪಟ್ಟ ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾಧೀನ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ, ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದರು.