Natwar Singh & S Jaishankar
Natwar Singh & S Jaishankar 
ಸುದ್ದಿಗಳು

ಶೈಲೇಶ್‌ ಪ್ರಕರಣ: ಮಾಜಿ ವಿದೇಶಾಂಗ ಸಚಿವ ನಟವರ್‌ ಸಿಂಗ್‌, ಸಚಿವ ಜೈಶಂಕರ್‌ ಬಳಿ ಸಮಾಲೋಚಿಸಲು ಅಧಿಕಾರಿಗಳಿಗೆ ಸಲಹೆ

Bar & Bench

ಸೌದಿ ಅರೇಬಿಯಾದ ದೊರೆ ಹಾಗೂ ಇಸ್ಲಾಂ ಕುರಿತು ಆಕ್ಷೇಪಾರ್ಹ ಮಾಹಿತಿ ಪೋಸ್ಟ್‌ ಮಾಡಿದ್ದ ಆರೋಪದ ಮೇಲೆ ಸೌದಿಯಲ್ಲಿ ಬಂಧಿತನಾಗಿರುವ ಮಂಗಳೂರಿನ ಶೈಲೇಶ್‌ ಕುಮಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ವಿದೇಶಾಂಗ ಸಚಿವ ನಟವರ್‌ ಸಿಂಗ್‌ ಅಥವಾ ಹಾಲಿ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಅವರ ಜೊತೆ ಸಮಾಲೋಚನೆ ನಡೆಸುವಂತೆ ಸೌದಿ ಅರೇಬಿಯಾದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳಿಗೆ ಕರ್ನಾಟಕ ಮೌಖಿಕವಾಗಿ ಸಲಹೆ ನೀಡಿದೆ.

ಮಂಗಳೂರಿನ ಶೈಲೇಶ್‌ ಕುಮಾರ್‌ ಪತ್ನಿ ಕವಿತಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಗುರುವಾರ ವಿಚಾರಣೆ ನಡೆಸಿತು.

ಈ ಸಂದರ್ಭದಲ್ಲಿ ಪೀಠವು ಸೌದಿಯಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿ ಮೋಯಿನ್‌ ಅಖ್ತರ್‌ ಅವರಿಂದ ಶೈಲೇಶ್‌ ಕುಮಾರ್‌ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಿತು.

ಆನಂತರ ನ್ಯಾಯಾಲಯವು “ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯೂ (ಐಎಫ್‌ಎಸ್‌) ಆಗಿದ್ದ ಮಾಜಿ ವಿದೇಶಾಂಗ ಸಚಿವ ನಟವರ್‌ ಸಿಂಗ್‌ ಅವರು ʼಒನ್‌ ಲೈಫ್‌ ಇಸ್‌ ನಾಟ್‌ ಎನಫ್‌ʼ (ಒಂದು ಜೀವನ ಸಾಲದು) ಎಂಬ ಪುಸ್ತಕ ರಚಿಸಿದ್ದು, ಅದರಲ್ಲಿ ಇಂಥ ಘಟನೆಗಳ ಬಗ್ಗೆ ಅವರು ಉಲ್ಲೇಖಿಸಿದ್ದಾರೆ. ಒಂದೊಮ್ಮೆ ವಿದೇಶವು ನಾವು ಕೋರಿದ ಮಾಹಿತಿ ಒದಗಿಸದಿದ್ದರೆ ಏನು ಮಾಡಬೇಕು ಎಂದು ಅವರು ಪುಸ್ತಕದಲ್ಲಿ ವಿವರಿಸಿದ್ದಾರೆ. ಇದನ್ನು ಹೇಗೆ ನೋಡಬೇಕು ಎಂದು ತಿಳಿಸಿದ್ದಾರೆ. ಈ ದೃಷ್ಟಿಯಿಂದ ನೀವೇಕೆ ನಟವರ್‌ ಸಿಂಗ್‌ ಅವರ ಜೊತೆ ಸಮಾಲೋಚನೆ ಮಾಡಬಾರದು? ಈ ವಿಚಾರಗಳಲ್ಲಿ ಅವರಿಗೆ ಅಗಾಧ ಅನುಭವವಿದೆ” ಎಂದು ಪೀಠವು ಸೌದಿಯ ರಾಜಧಾನಿ ರಿಯಾದ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿ ಮೋಯಿನ್‌ ಅಖ್ತರ್‌ ಅವರನ್ನು ಕುರಿತು ಹೇಳಿತು.

ಮುಂದುವರಿದು, “1960ರಲ್ಲಿ ಇಂಥದ್ದೇ ಘಟನೆ ಆಫ್ರಿಕಾದ ದೇಶದಲ್ಲಿ ಘಟಿಸಿದ್ದು, ಆಗ ಅವರು ಶಕ್ದರ್‌ ಎಂಬ ತಮ್ಮ ಹಿರಿಯ ಸಹೋದ್ಯೋಗಿಯನ್ನು ಸಂಪರ್ಕಿಸಿದ್ದರು. ಆ ಮೂಲಕ ಅವರು ಮಾಹಿತಿ ಸಂಗ್ರಹಿಸಿದ್ದರು. ಈ ಪ್ರಕರಣದಲ್ಲಿ ಈ ನ್ಯಾಯಾಲಯಕ್ಕೆ ಸೀಮಿತ ಅವಕಾಶವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ವಿದೇಶಾಂಗ ಸಚಿವರ (ಎಸ್‌ ಜೈಶಂಕರ್‌) ಜೊತೆಯೂ ಸಮಾಲೋಚನೆ ನಡೆಸಬಹುದು” ಎಂದು ಪೀಠವು ಮೌಖಿಕವಾಗಿ ಹೇಳಿತು.

ಅಕ್ತರ್‌ ಅವರು “ಸೌದಿ ಅರೇಬಿಯಾದ ಆಡಳಿತದ ಸೂಚನೆಯಂತೆ ಶೈಲೇಶ್‌ ಕುಮಾರ್‌ ಅವರಿಗೆ ವಿಧಿಸಿರುವ ಶಿಕ್ಷೆಯ ಆದೇಶ ಪಡೆಯಲು ನಮ್ಮ ಅಧಿಕಾರಿ ಖುದ್ದು ಭೇಟಿ ನೀಡಿದ್ದರು. ಆದರೆ, ಅವರು ಆದೇಶ ಪ್ರತಿ ನೀಡಲಿಲ್ಲ. ಬದಲಿಗೆ ಈಮೇಲ್‌ ಕಳುಹಿಸುವಂತೆ ಸೂಚಿಸಲಾಗಿತ್ತು. ಅದರಂತೆ ಈಮೇಲ್‌ ಕಳುಹಿಸಲಾಗಿದ್ದು, ಇದುವರೆಗೂ ಆದೇಶ ಪ್ರತಿ ದೊರೆತಿಲ್ಲ. ಈ ಸಂಬಂಧ ಸೌದಿ ಅರೇಬಿಯಾದ ವಿದೇಶಾಂಗ ಇಲಾಖೆಗೆ ಪತ್ರ ಬರೆಯಲಾಗಿದ್ದು, ಭಾರತದ ರಾಯಭಾರಿ ಅವರು ಸೌದಿ ಅರೇಬಿಯಾದ ಕಾನೂನು ಇಲಾಖೆಗೂ ಪತ್ರ ಬರೆದಿದ್ದಾರೆ. ಸೌದಿ ಅರೇಬಿಯಾದ ವಿದೇಶಾಂಗ ಇಲಾಖೆಯ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಮನವಿ ಮಾಡಿದ್ದರೂ ತೀರ್ಪಿನ ಪ್ರತಿ ದೊರೆತಿಲ್ಲ” ಎಂದು ಪೀಠಕ್ಕೆ ವಿವರಿಸಿದರು.

ಮುಂದುವರಿದು, “ನಮ್ಮ ಅಧಿಕಾರಿಗಳು ಶೈಲೇಶ್‌ ಅವರನ್ನು ಭೇಟಿ ಮಾಡಲು ಸೌದಿ ಅಧಿಕಾರಿಗಳ ಅನುಮತಿ ಕೋರಿದ್ದರು. ಇದಕ್ಕೆ ಸಮ್ಮತಿ ದೊರೆತಿದ್ದು, ಸೆಪ್ಟೆಂಬರ್‌ 3ರಂದು ನಮ್ಮ ಅಧಿಕಾರಿಗಳು ಅವರನ್ನು ಭೇಟಿ ಮಾಡಲಿದ್ದಾರೆ. ಅಂದು ಶೈಲೇಶ್‌ ಅವರಿಗೆ ತೀರ್ಪಿನ ಪ್ರತಿ ನೀಡಲಾಗಿದೆಯೇ ಎಂದು ಕೇಳಿ ಅವರಿಂದಲೇ ಅದನ್ನು ಪಡೆಯುವ ಪ್ರಯತ್ನ ಮಾಡಲಾಗುವುದು. ನಮ್ಮ ಮಟ್ಟದಲ್ಲಿ ಎಲ್ಲಾ ಪ್ರಯತ್ನ ಮುಗಿದ ಬಳಿಕ ಪ್ರಕರಣವನ್ನು ಸಂಬಂಧಪಟ್ಟ ಸರ್ಕಾರಗಳ ಮಟ್ಟಕ್ಕೆ ಕೊಂಡೊಯ್ಯಲಾಗುವುದು” ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ಆಗ ಪೀಠವು “ನೀವು ಯಾವಾಗ ಈಮೇಲ್‌ ಕಳುಹಿಸಿದ್ದಿರಿ” ಎಂದು ಪ್ರಶ್ನಿಸಿತು.

ಇದಕ್ಕೆ ಮೊಯಿನ್‌ ಅಖ್ತರ್‌ ಅವರು “ಆಗಸ್ಟ್‌ 7ರಂದು ನಮ್ಮ ಅಧಿಕಾರಿ ಖುದ್ದು ಸೌದಿ ಅರೇಬಿಯಾದ ಅಧಿಕಾರಿ ಕಚೇರಿಗೆ ಭೇಟಿ ನೀಡಿದ್ದರು. ಆಗಸ್ಟ್‌ 8ರಂದು ಪ್ರೆಸಿಡೆನ್ಸಿ ಆಫ್‌ ಸ್ಟೇಟ್‌ ಸೆಕ್ಯೂರಿಟಿಯಿಂದ ತೀರ್ಪಿನ ಪ್ರತಿ ಪಡೆಯಲು ಪ್ರಯತ್ನ ಮಾಡಲಾಗಿದೆ. ಪ್ರೆಸಿಡೆನ್ಸಿ ಆಫ್‌ ಸ್ಟೇಟ್‌ ಸೆಕ್ಯೂರಿಟಿಯು ಈಮೇಲ್‌ ಕಳುಹಿಸಲು ಸೂಚಿಸಿದ್ದು, ನಾವು ಆಗಸ್ಟ್‌ 10ರಂದು ಈಮೇಲ್‌ ಕಳುಹಿಸಿದ್ದೇವೆ. ಈ ಮಧ್ಯೆ, ಆಗಸ್ಟ್‌ 8ರಂದು ಸೌದಿ ಅರೇಬಿಯಾದ ವಿದೇಶಾಂಗ ಇಲಾಖೆಗೆ ಈಮೇಲ್‌ ಕಳುಹಿಸಿದ್ದೇವೆ. ಆನಂತರ ಸೌದಿ ಅರೇಬಿಯಾದ ನ್ಯಾಯಾಂಗ ಇಲಾಖೆಯ ಸಚಿವರಿಗೆ ಪತ್ರ ಬರೆಯಲಾಗಿದೆ.  ಆಗಸ್ಟ್‌ 13ರಂದು ಸೌದಿ ಅರೇಬಿಯಾದ ವಿದೇಶಾಂಗ ಇಲಾಖೆಯ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ಜೊತೆ ನೇರವಾಗಿ ಮಾತುಕತೆಯನ್ನೂ ನಡೆಸಲಾಗಿದೆ. ಅಲ್ಲಿನ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಲಾಗಿದೆ. ಇದರ ಭಾಗವಾಗಿ ಸೆಪ್ಟೆಂಬರ್‌ 3ರಂದು ಜೈಲಿನಲ್ಲಿರುವ ಶೈಲೇಶ್‌ ಅವರನ್ನು ಭೇಟಿ ಮಾಡಲು ಸೌದಿ ಆಡಳಿತ ಅನುಮತಿಸಿದೆ” ಎಂದರು.

ವಾದ-ಪ್ರತಿವಾದ ಆಲಿಸಿದ ಪೀಠವು “ರಿಯಾದ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಯ ಅಧಿಕಾರಿಗಳು ಸೌದಿ ಅರೇಬಿಯಾದ ಅಧಿಕಾರಿಗಳ ಜೊತೆ ಆಗಸ್ಟ್‌ 7, 8, 10, 13 ಮತ್ತು 17ರಂದು ಮಾತುಕತೆ ನಡೆಸಿದ್ದು, ಶೈಲೇಶ್‌ ಅವರಿಗೆ ವಿಧಿಸಿರುವ ಶಿಕ್ಷೆ ಮತ್ತು ಅದನ್ನು ಕಾಯಂ ಮಾಡಿರುವ ಆದೇಶ ಪಡೆಯಲು ಪ್ರಯತ್ನಿಸಿದ್ದಾರೆ. ಮೋಯಿನ್‌ ಅಕ್ತರ್‌ ಅವರು ಸಂವಹನದ ವಿವರಣೆ ನೀಡಿದ್ದು, ಅದು ಇನ್ನಷ್ಟೇ ಫಲ ನೀಡಬೇಕಿದೆ. ರಾಯಭಾರ ಮಟ್ಟದಲ್ಲಿನ ಸಂವಹನದ ಮಾಹಿತಿಯನ್ನೂ ಅಖ್ತರ್‌ ನೀಡಿದ್ದಾರೆ. ಸೆಪ್ಟೆಂಬರ್‌ 3ರಂದು ಶೈಲೇಶ್‌ ಭೇಟಿ ಮಾಡಲು ಸೌದಿ ಆಡಳಿತ ಅವಕಾಶ ನೀಡಿದ್ದು, ಅವರಿಂದಲೇ ಅಧಿಕಾರಿಗಳು ತೀರ್ಪಿನ ಪಡೆಯುವ ಸಾಧ್ಯತೆ ಇದೆ. ಉಳಿದ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು ಎಂದು ಅಖ್ತರ್‌ ತಿಳಿಸಿದ್ದಾರೆ. ಸೆಪ್ಟೆಂಬರ್‌ 9 ತುಂಬಾ ದೂರವಿಲ್ಲ. ಹೀಗಾಗಿ, ಸಭೆ ನಡೆಯುವವರೆಗೆ ಕಾಯಬೇಕಿದ್ದು, ಆಕ್ಷೇಪಾರ್ಹವಾದ ಆದೇಶದ ಪ್ರತಿ ಪಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್‌ 11ಕ್ಕೆ ಮುಂದೂಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.