Shankaracharya Avimukteshwaranand and Swami Govindanand Saraswati Shankaracharya Avimukteshwaranand: Facebook Govindanand Saraswati: YouTube
ಸುದ್ದಿಗಳು

ಕಾಂಗ್ರೆಸ್ ಬೆಂಬಲಿತ 'ನಕಲಿ ಬಾಬಾ' ಎಂದ ಗೋವಿಂದಾನಂದ ಸರಸ್ವತಿ ವಿರುದ್ಧ ಮೊಕದ್ದಮೆ ಹೂಡಿದ ಸ್ವಾಮಿ ಅವಿಮುಕ್ತೇಶ್ವರಾನಂದ

ಇದಕ್ಕೆಲ್ಲಾ ಸಂತರು ಆತಂಕಪಡಬಾರದು ಎಂದ ನ್ಯಾಯಾಲಯ ಪ್ರಸ್ತುತ ಹಂತದಲ್ಲಿ ಮಧ್ಯಂತರ ಪರಿಹಾರ ನಿರಾಕರಿಸಿತು.

Bar & Bench

ತಮ್ಮನ್ನು ಕಾಂಗ್ರೆಸ್ ಬೆಂಬಲಿತ 'ನಕಲಿ ಬಾಬಾ' ಎಂದು ಜರೆದ ಜ್ಯೋತಿರ್‌ಮಠ ಟ್ರಸ್ಟ್‌ನ ಸ್ವಾಮಿ ಗೋವಿಂದಾನಂದ ಸರಸ್ವತಿ ಅವರ ವಿರುದ್ಧ ಜ್ಯೋತಿರ್ ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಹೂಡಿದ್ದ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಂಗಳವಾರ ಪರಿಹಾರ ನಿರಾಕರಿಸಿದೆ.

ಹೇಳಿಕೆಗಳು ಕೆಟ್ಟ ಅಭಿರುಚಿಯಿಂದ ಕೂಡಿದ್ದು ಸ್ವಾಮಿ ಗೋವಿಂದಾನಂದ ಸರಸ್ವತಿ ಅವರು ಹತಾಶರಾಗಿ ಈ ಹೇಳಿಕೆಗಳನ್ನು ನೀಡಿರಬಹುದು. ಆದರೆ ಇದರಿಂದ ಯಾವುದೇ ಮಾನಹಾನಿಯಾಗಿಲ್ಲ ಎಂದು ನ್ಯಾಯಮೂರ್ತಿ ನವೀನ್ ಚಾವ್ಲಾ ಹೇಳಿದ್ದಾರೆ.

ಅವಿಮುಕ್ತೇಶ್ವರಾನಂದ ಸ್ವಾಮೀಜಿ ಪರ ವಕೀಲರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿಗಳು “ನೀವು ಸಂತರು ಇದಕ್ಕೇಕೆ ಚಿಂತೆ ಮಾಡುತ್ತೀರಿ. ಸಂತರು ಇದಕ್ಕೆಲ್ಲಾ ತಲೆಕಡಿಸಿಕೊಳ್ಳಬಾರದು. ಸಂತರು ತಮ್ಮ ಕಾರ್ಯಗಳ ಮೂಲಕ ಗೌರವ ಪಡೆದುಕೊಳ್ಳುತ್ತಾರೆ” ಎಂದರು.

ಅವಿಮುಕ್ತೇಶ್ವರಾನಂದ ಸ್ವಾಮೀಜಿ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿ, ಸ್ವಾಮಿ ಗೋವಿಂದಾನಂದ ಸರಸ್ವತಿ ಅವರು ಸ್ವಾಮಿ ಅವಿಮುಕ್ತೇಶ್ವರಾನಂದ ಅವರನ್ನು " ಫರ್ಜಿ ಬಾಬಾ", " ಢೋಂಗಿ ಬಾಬಾ " ಮತ್ತು "ಚೋರ್ ಬಾಬಾ " ಎಂದು ಜರೆದಿದ್ದಾರೆ. ಅಲ್ಲದೆ ಅವಿಮುಕ್ತೇಶ್ವರಾನಂದ ಸ್ವಾಮೀಜಿಗಳು ಜನರನ್ನು ಅಪಹರಿಸುತ್ತಾರೆ. ಅವರಿಗೆ ಕ್ರಿಮಿನಲ್‌ ಹಿನ್ನೆಲೆ ಇದೆ ಎಂದು ಆಪಾದಿಸಿದ್ದಾರೆ. ₹7,000 ಕೋಟಿ ಮೌಲ್ಯದ ಚಿನ್ನ ಕದ್ದಿದ್ದಾರೆ. ಸಾಧ್ವಿಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಅವಿಮುಕ್ತೇಶ್ವರಾನಂದರ ವಿರುದ್ಧದ ಅಖಿಲೇಶ್‌ ಯಾದವ್‌ ಸರ್ಕಾರ ಒಂದು ಪ್ರಕರಣ ದಾಖಲಿಸಿತ್ತು, ಆದರೆ ಅದನ್ನು ಆದಿತ್ಯನಾಥ್‌ ಸರ್ಕಾರ ಹಿಂಪಡೆದಿದೆ ಎಂದು ಅವಿಮುಕ್ತೇಶ್ವರಾನಂದ ಪರ ವಕೀಲರು ವಾದಿಸಿದರು.

ಆದರೆ, ಈ ಹಂತದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡುವುದು ಸರಿಯಲ್ಲ ಎಂದ ನ್ಯಾಯಾಲಯ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ಆಗಸ್ಟ್ 29ಕ್ಕೆ ವಿಚಾರಣೆ ಮುಂದೂಡಿತು.  

ಅವಿಮುಕ್ತೇಶ್ವರಾನಂದರು ಗೋವಿಂದಾನಂದ ಸರಸ್ವತಿ ಮತ್ತು ವಿವಿಧ ವೇದಿಕೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ವಾರಾಣಸಿ ನ್ಯಾಯಾಲಯ ಅವಿಮುಕ್ತೇಶ್ವರಾನಂದ ಸ್ವಾಮಿ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದು, ಆತ ತಲೆಮರೆಸಿಕೊಂಡಿದ್ದಾರೆ ಎಂದು ಸ್ವಾಮಿ ಗೋವಿಂದಾನಂದ ಆರೋಪಿಸಿದ್ದರು.

ಈಚಿನ ದಿನಗಳಲ್ಲಿ ಅವಿಮುಕ್ತೇಶ್ವರಾನಂದ ಎಂಬ ನಕಲಿ ಬಾಬಾ ಜನಪ್ರಿಯರಾಗುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಪಾದಗಳನ್ನು ಸ್ಪರ್ಶಿಸಿದ್ದಾರೆ. ಅಂಬಾನಿಯಂತಹ ದೊಡ್ಡ ಉದ್ಯಮಿ ಅವರನ್ನು ಮನೆಗೆ ಆಹ್ವಾನಿಸುತ್ತಾರೆ. ಟಿವಿಯಲ್ಲಿ ಅವರಿಗೆ  'ಶಂಕರಾಚಾರ್ಯ' ಎಂಬ ಬಿರುದು ನೀಡಲಾಗಿದೆ. ಆದರೆ ಶಂಕರಾಚಾರ್ಯ ಎಂಬ ಹೆಸರಿರಲಿ ಅವರು ಸಾಧು, ಸಂತ, ಸನ್ಯಾಸಿ ಕೂಡ ಅಲ್ಲ ಎಂದು ಗೋವಿಂದಾನಂದ ಸ್ವಾಮಿ ದೂರಿದ್ದರು.

ಅವಿಮುಕ್ತೇಶ್ವರಾನಂದ ಅವರು ಉತ್ತರಾಖಂಡದ ಜ್ಯೋತಿರ್‌ ಪೀಠದ ಶಂಕರಾಚಾರ್ಯ  (ಅದ್ವೈತ ಸಂಪ್ರದಾಯದ ಮಠಗಳ ಮುಖ್ಯಸ್ಥರಿಗೆ ಇರುವ) ಎಂದು ಉಲ್ಲೇಖಿಸಲಾಗಿದೆ . ಅವರ ಪಟ್ಟಾಭಿಷೇಕಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ವಿಚಾರವಾಗಿ ಪ್ರಶ್ನೆಗಳನ್ನು ಎತ್ತಿ  ಅವಿಮುಕ್ತೇಶ್ವರಾನಂದ ಅವರು ಈಚೆಗೆ ಸುದ್ದಿಯಲ್ಲಿದ್ದರು.

ಆದಿ ಶಂಕರಾಚಾರ್ಯರು ಸ್ಥಾಪಿಸಿದ್ದು ಎಂಬ ಪ್ರತೀತಿ ಇರುವ ಜ್ಯೋತಿರ್‌ಮಠಗಳಲ್ಲಿ ಉತ್ತರಾಖಂಡದ ಜ್ಯೋತಿರ್‌ ಪೀಠ ಕೂಡ ಒಂದು. ಅಂತಹ ಮತ್ತೊಂದು ಧಾರ್ಮಿಕ ಕೇಂದ್ರ ಕರ್ನಾಟಕದ ಶೃಂಗೇರಿಯಲ್ಲಿರುವ ಶಾರದಾ ಪೀಠ.