ಬೆಂಗಳೂರಿನ ವಕೀಲ ಶಾಂತಿ ಭೂಷಣ್ ಎಚ್ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ಸಹಾಯಕ ಸಾಲಿಸಿಟರ್ ಜನರಲ್ (ಎಎಸ್‌ಜಿ) ಆಗಿ ನೇಮಕ ಮಾಡಲಾಗಿದೆ.
ಬೆಂಗಳೂರಿನಲ್ಲಿರುವ ಕರ್ನಾಟಕ ಹೈಕೋರ್ಟ್‌ಗೆ ವಕೀಲ ಶಾಂತಿ ಭೂಷಣ್ ಎಚ್ ಅವರನ್ನು ಸಹಾಯಕ ಸಾಲಿಸಿಟರ್ ಜನರಲ್ ಆಗಿ ರಾಷ್ಟ್ರಪತಿಗಳು ನೇಮಿಸಿದ್ದಾರೆ. ಭೂಷಣ್ ಅವರು ಈ ಆದೇಶ ಹೊರಡಿಸಿರುವ ದಿನಾಂಕದಿಂದ ಮೂರು ವರ್ಷಗಳವರೆಗೆ ಅಥವಾ ಮುಂದಿನ ಆದೇಶ ಹೊರಡಿಸುವವರೆಗೆ ಯಾವುದು ಮುಂಚಿತವೋ ಅಲ್ಲಿಯವರೆಗೆ ನೂತನ ಹುದ್ದೆಯನ್ನು ನಿಭಾಯಿಸಲಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಹೈಕೋರ್ಟ್ ಜೊತೆಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ವಕೀಲ ಭೂಷಣ್ ಅವರು 1977ರಲ್ಲಿ ಜನಿಸಿದ್ದಾರೆ. ಸುಪ್ರೀಂ ಕೋರ್ಟ್ ಖ್ಯಾತ ವಕೀಲ ಶಾಂತಿ ಭೂಷಣ್ ಅವರ ಹೆಸರನ್ನು ಇವರಿಗೆ ಇಡಲಾಗಿದೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ರಾಜ್ ನಾರಾಯಣ್ ಹೂಡಿದ್ದ ಪ್ರಕರಣವನ್ನು ಪ್ರತಿನಿಧಿಸಿ, ಗೆಲ್ಲುವ ಮೂಲಕ ನ್ಯಾಯಾಂಗ ಮತ್ತು ರಾಜಕೀಯ ವಲಯದಲ್ಲಿ ಶಾಂತಿ ಭೂಷಣ್ ಮನೆ ಮಾತಾಗಿದ್ದರು.
“ವಕೀಲ, ಬಳಿಕ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿದ್ದ ಕೆ ಎನ್ ಪುಟ್ಟೇಗೌಡರು ನನಗೆ ಖ್ಯಾತ ವಕೀಲ ಶಾಂತಿ ಭೂಷಣ್ ಹೆಸರು ಇಡುವಂತೆ ಸಲಹೆ ನೀಡಿದ್ದರು. ಇದಕ್ಕೆ ನನ್ನ ತಂದೆ ಒಪ್ಪಿದರು. ಈ ರೀತಿಯಲ್ಲಿ ನಾನು ಶಾಂತಿ ಭೂಷಣ್ ಆದೆ” ಎಂದು ಅವರು 2019ರಲ್ಲಿ “ಬಾರ್ ಅಂಡ್ ಬೆಂಚ್”ಗೆ ನೀಡಿದ್ದ ಸಂದರ್ಶನದಲ್ಲಿ ವಿವರಿಸಿದ್ದರು.
ಹೊಸ ಜವಾಬ್ದಾರಿಯ ಕುರಿತು “ಬಾರ್ ಅಂಡ್ ಬೆಂಚ್” ಜೊತೆ ಮಾತನಾಡಿರುವ ಭೂಷಣ್ ಅವರು “ಕೇಂದ್ರ ಸರ್ಕಾರವು ನನ್ನ ಕೆಲಸವನ್ನು ಗುರುತಿಸಿ, ಹುದ್ದೆ ನೀಡಿದೆ. ಇದರಿಂದ ನನಗೆ ಸಂತೋಷವಾಗಿದೆ” ಎಂದಿದ್ದಾರೆ.
ಖಾಸಗಿ ಪ್ರಾಕ್ಟೀಸ್‌ಗಿಂತ ಹೊಸ ಜವಾಬ್ದಾರಿ ಹೇಗೆ ಭಿನ್ನ ಎನ್ನುವುದಕ್ಕೆ ಶಾಂತಿ ಭೂಷಣ್ ಅವರು “ಇದು ವಿಭಿನ್ನ ಎಂದು ನನಗನ್ನಿಸುವುದಿಲ್ಲ. ಆದರೆ, ಸವಾಲಿನ ಕೆಲಸ ಎಂಬುದು ದಿಟ. ಖಾಸಗಿ ಪ್ರಾಕ್ಟೀಸ್ ಸಂದರ್ಭದಲ್ಲಿ ಬಹುತೇಕ ಕಾನೂನುಗಳ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡುತ್ತಿರಲಿಲ್ಲ. ಆದರೆ, ಇಲ್ಲಿ ಹೊಸ ವಿಚಾರ ಮತ್ತು ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಆದ್ದರಿಂದ ಇದು ಸವಾಲಿನ ಕೆಲಸ” ಎಂದು ಹೇಳಿದ್ದಾರೆ.