ಗೌಪ್ಯತಾ ವಲಯದೊಳಗೆ ಪ್ರತಿವಾದಿಗಳಾದ ಅಲಯನ್ಸ್ ಆಫ್ ಡಿಜಿಟಲ್ ಇಂಡಿಯಾ ಫೌಂಡೇಶನ್ ಅನ್ನು (ಎಡಿಐಎಫ್) ಸೇರಿಸಿಕೊಂಡು ಅವರ ಜೊತೆ ಗೌಪ್ಯ ಮಾಹಿತಿ ಹಂಚಿಕೊಳ್ಳುವಂತೆ ನಿರ್ದೇಶಿಸಿದ್ದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಆದೇಶ ಪ್ರಶ್ನಿಸಿ ಗೂಗಲ್ ಸಲ್ಲಿಸಿರುವ ಮನವಿಯ ವ್ಯಾಪ್ತಿಯ ವಿಚಾರವನ್ನು ಜುಲೈ 8ರಂದು ಆಲಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಹೇಳಿದೆ.
ಭಾರತೀಯ ಸ್ಪರ್ಧಾ ಆಯೋಗದ ಆದೇಶ ಪ್ರಶ್ನಿಸಿ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಆಲ್ಫಬೆಟ್ ಇಂಕ್, ಗೂಗಲ್ ಎಲ್‌ಎಲ್‌ಸಿ, ಗೂಗಲ್ ಐರ್ಲೆಂಡ್ ಲಿಮಿಟೆಡ್, ಗೂಗಲ್ ಇಂಡಿಯಾ ಡಿಜಿಟಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಜಿ ಪಂಡಿತ್ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಇದರ ಜೊತೆಗೆ ಗೂಗಲ್‌ನ ಗೌಪ್ಯತಾ ವಲಯದೊಳಗೆ ಎಡಿಐಎಫ್ ಸೇರಿಸಿಕೊಂಡು ಅವರ ಜೊತೆ ಗೌಪ್ಯ ಮಾಹಿತಿ ಹಂಚಿಕೊಳ್ಳುವಂತೆ ನಿರ್ದೇಶಿಸಿದ್ದ ಸಿಸಿಐ ಆದೇಶಕ್ಕೆ ವಿಧಿಸಿರುವ ತಡೆಯಾಜ್ಞೆಯನ್ನು ನ್ಯಾಯಾಲಯವು ವಿಸ್ತರಿಸಿದೆ.
ಸಿಸಿಐ ಪ್ರತಿನಿಧಿಸಿದ್ದ ವಕೀಲ ಹರೀಶ್ ನರಸಪ್ಪ ಅವರು “ಅರ್ಜಿಯ ನಿರ್ವಹಣೆಯ ಕುರಿತು ನಿರ್ಧರಿಸಬೇಕು” ಎಂದು ಕೋರಿದರು. ಈ ಮಧ್ಯೆ, ಎರಡನೇ ಪ್ರತಿವಾದಿ ಎಡಿಐಎಫ್ ಪ್ರತಿನಿಧಿಸಿದ್ದ ವಕೀಲ ಅಭೀರ್ ರಾಯ್ ಅವರು “ಮೊದಲಿಗೆ ಮನವಿಯ ವ್ಯಾಪ್ತಿ ನಿರ್ಧರಿಸಬೇಕು” ಎಂದು ಕೋರಿದರು.
ಗೂಗಲ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜ್ಜನ್ ಪೂವಯ್ಯ ಅವರು “ಮನವಿಯ ನಿರ್ವಹಣೆಯನ್ನು ಆಲಿಸಿ, ನಿರ್ಧರಿಸುವುದು ಸೂಕ್ತ” ಎಂದರು.
ಆಗ ನ್ಯಾ. ಪಂಡಿತ್ ಅವರು “ವಕೀಲ ಹರೀಶ್ ನರಸಪ್ಪ ಅವರು ಮನವಿಯ ನಿರ್ವಹಣೆಯ ಮೇಲೆ ಆದೇಶ ಕೋರುತ್ತಿದ್ದಾರೆ. ಈಗ ನಾವು ದಿನಾಂಕ (ಜುಲೈ 8) ನಿಗದಿ ಮಾಡಿದ್ದೇವೆ. ಅರೆಬರೆ ಆಲಿಸಿರುವ ಪ್ರಕರಣಗಳನ್ನು ಮುಂದೂಡಲಾಗಿದೆ. ಹಿರಿಯ ವಕೀಲರ ಜೊತೆಗೆ ಹೋಗಿ ಕಾಫಿ ಸವಿಯಿರಿ” ಎಂದು ಹೇಳಿದ ಪೀಠವು ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿತು.