ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ ಶಾರ್ಜೀಲ್ ಇಮಾಮ್ ಅವರ ಭಾಷಣ ಮತ್ತಿತರ ಚಟುವಟಿಕೆಗಳು ಶಸ್ತ್ರಾಸ್ತ್ರ ಹಿಡಿಯುವಂತೆ ಇಲ್ಲವೇ ಕೊಲ್ಲುವಂತೆ ಜನರನ್ನು ಪ್ರಚೋದಿಸದೇ ಇದ್ದರೂ ಅವರ ಭಾಷಣಗಳು ಮತ್ತು ಚಟುವಟಿಕೆಗಳು ದೆಹಲಿಯನ್ನು ಅಸ್ತವ್ಯಸ್ತಗೊಳಿಸಲು ಜನರನ್ನು ಸಜ್ಜುಗೊಳಿಸಿರಬಹುದು ಮತ್ತು ಫೆಬ್ರವರಿ 2020 ರ ದೆಹಲಿ ಗಲಭೆ ಭುಗಿಲೇಳಲು ಮುಖ್ಯ ಕಾರಣವಾಗಿರಬಹುದು ಎಂದು ವಿದ್ಯಾರ್ಥಿ ಹೋರಾಟಗಾರ ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸುವ ವೇಳೆ ದೆಹಲಿ ನ್ಯಾಯಾಲಯ ತಿಳಿಸಿದೆ.
ಇಮಾಮ್ ಅವರ ಭಾಷಣಗಳು ಎಷ್ಟು ಶಕ್ತಿಯುತವಾಗಿದ್ದವೆಂದರೆ ವು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರಿಗೆ ಕುಮ್ಮಕ್ಕು ನೀಡಿ ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಚೋದಿಸಿತು, ಇದು ಅಂತಿಮವಾಗಿ ಗಲಭೆಗೆ ಕಾರಣವಾಯಿತು ಎಂದು ಕಡ್‌ಕಡ್‌ಡೂಮ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೇಯಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಆದೇಶದ ಪ್ರಮುಖಾಂಶಗಳು
ಅರ್ಜಿದಾರರು ಶಸ್ತ್ರಾಸ್ತ್ರ ತ್ತಿಕೊಂಡು ಜನರನ್ನು ಕೊಲ್ಲುವಂತೆ ಯಾರನ್ನೂ ಕೇಳದಿದ್ದರೂ, ಅವರ ಭಾಷಣಗಳು ಮತ್ತು ಚಟುವಟಿಕೆಗಳು ಸಾರ್ವಜನಿಕರನ್ನು ಹುರಿದುಂಬಿಸಿದವು.
ಅವರ ಮಾತು ಇದು ನಗರವನ್ನು ಅಸ್ತವ್ಯಸ್ತಗೊಳಿಸಲು ಮತ್ತು ಗಲಭೆಗಳು ಹರಡಲು ಮುಖ್ಯ ಕಾರಣವಾಗಿರಬಹುದು.
ತಮ್ಮ ಪ್ರಚೋದನಕಾರಿ ಭಾಷಣದ ಮೂಲಕ ಮತ್ತು ಸಾಮಾಜಿಕ ಮಾಧ್ಯಮಗಳ ಮುಖೇನ ಅರ್ಜಿದಾರರು ನೈಜ ಸಂಗತಿಗಳನ್ನು ಕೌಶಲ್ಯದಿಂದ ನಿರ್ವಹಿಸಿ ನಗರದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಾರ್ವಜನಿಕರನ್ನು ಪ್ರಚೋದಿಸಿದರು.
ಅರ್ಜಿದಾರರು ತಮ್ಮ ವಿಭಿನ್ನ ಭಾಷಣಗಳಲ್ಲಿ ಬಳಸಿದ ಪದಗಳು ಎಷ್ಟು ಶಕ್ತಿಯುತವಾಗಿವೆಯೆಂದರೆ ಅವು ನಿರ್ದಿಷ್ಟ ಸಮುದಾಯದ ಜನರನ್ನು ಪ್ರಭಾವಿಸಿ ಅಂತಿಮವಾಗಿ ಗಲಭೆಗೆ ಕಾರಣವಾದ ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವರನ್ನು ಪ್ರಚೋದಿಸಿದವು.
ಇಮಾಮ್ ಅವರ ಭಾಷಣ ಮತ್ತು ನಂತರದ ಅವರ ಚಟುವಟಿಕೆಗಳು ದೆಹಲಿಯಲ್ಲಿ ಹಲವಾರು ಪ್ರತಿಭಟನಾಕಾರರು ಹೆಚ್ಚಲು ಮತ್ತು ಪ್ರತಿಭಟನಾ ಸ್ಥಳಗಳು ಅಧಿಕಗೊಳ್ಳಲುಕಾರಣವಾಯಿತು. ಜನರ ಗುಂಪು ಮುಖ್ಯ ರಸ್ತೆಗಳನ್ನು ನಿರ್ಬಂಧಿಸಲು ಪ್ರಾರಂಭಿಸಿತು, ಪರಿಣಾಮ ಇಡೀ ನಗರ ಬಂದ್ ಆಯಿತು
ಅಂತಿಮವಾಗಿ ಅವರ ಭಾಷಣ ಮತ್ತು ಚಟುವಟಿಕೆಗಳು ಬೇರೆ ಬೇರೆ ದಿನ ಮತ್ತು ಸ್ಥಳಗಳಲ್ಲಿ ಗಲಭೆ, ಹಿಂಸಾಚಾರ, ಸಾರ್ವಜನಿಕ ಆಸ್ತಿಗೆ ಭಾರೀ ಹಾನಿ ಮತ್ತು ಜನರ ಸಾವಿಗೆ ಕಾರಣವಾದವು.
ದೆಹಲಿಯ ಜಾಮಿಯಾ ಪ್ರದೇಶ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (ಎಎಂಯು) 2019 ರ ಡಿಸೆಂಬರ್‌ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ದೇಶದ್ರೋಹ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ (ಯುಎಪಿಎ) ವಿದ್ಯಾರ್ಥಿ ಹೋರಾಟಗಾರ ಶಾರ್ಜೀಲ್ ಇಮಾಮ್ ಅವರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಶನಿವಾರ ಶಾಸನಬದ್ಧ ಜಾಮೀನು ನಿರಾಕರಿಸಿದ ವೇಳೆ ಈ ವಿಚಾರಗಳನ್ನು ತಿಳಿಸಿತು.
ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ವಿರೋಧಿ ಪ್ರತಿಭಟನೆ ನಡೆಸುವಾಗ ಎಎಂಯು ಮತ್ತು ಜಾಮಿಯಾ ಪ್ರದೇಶದಲ್ಲಿ ಇಮಾಮ್ ಅವರು ಮಾಡಿದ ಭಾಷಣಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಸಂಬಂಧ ಅವರನ್ನು ಜನವರಿ 28, 2020ರಂದು ಬಂಧಿಸಲಾಗಿತ್ತು. ಜುಲೈ 2022ರಲ್ಲಿ, ವಿಚಾರಣಾ ನ್ಯಾಯಾಲಯ ಅವರ ಮೊದಲ ಜಾಮೀನು ಅರ್ಜಿ ತಿರಸ್ಕರಿಸಿತ್ತು.
ಗರಿಷ್ಠ ಏಳು ವರ್ಷಗಳ ಶಿಕ್ಷೆಯಲ್ಲಿ ಅವರು ಈಗಾಗಲೇ ನಾಲ್ಕು ವರ್ಷಗಳನ್ನು ಜೈಲಿನಲ್ಲಿ ಕಳೆದಿರುವುದರಿಂದ ತಾನು ಶಾಸನಬದ್ಧ ಜಾಮೀನಿಗೆ ಅರ್ಹ ಎಂಬುದು ಇಮಾಮ್ ಅವರ ವಾದವಾಗಿತ್ತು.
ದೇಶದ್ರೋಹ ಪ್ರಕರಣ ದಾಖಲಿಸುವುದನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದ್ದು ತಮ್ಮ ವಿರುದ್ಧ ಹೇರಲಾದ ಯುಎಪಿಎ ಸೆಕ್ಷನ್ ಏಳು ವರ್ಷ ಮೀರುವ ಶಿಕ್ಷೆ ಹೊಂದಿಲ್ಲ ಎಂದು ಅವರು ಹೇಳಿದ್ದರು. ಆದರೆ, ಶಾರ್ಜೀಲ್ ಅವರ ವಿರುದ್ಧ ಹೊರಿಸಿರುವ ಅಪರಾಧಗಳಿಗೆ ಏಕಕಾಲದಲ್ಲಿ ಶಿಕ್ಷೆ ವಿಧಿಸುವುದನ್ನು ಪರಿಗಣಿಸಬಾರದು ಎಂದು ದೆಹಲಿ ಪೊಲೀಸರು ವಾದಿಸಿದ್ದರು.
ಐಪಿಸಿ ಸೆಕ್ಷನ್ 124 ಎ ಅಡಿಯಲ್ಲಿ ದೇಶದ್ರೋಹದ ಅಪರಾಧ ಪರಿಗಣಿಸಲು ಸಾಧ್ಯವಿಲ್ಲವಾದರೂ, ಇಮಾಮ್ ಅವರ ಕೃತ್ಯಗಳು ʼಸಾಮಾನ್ಯ ಶಬ್ದಕೋಶದ ಅರ್ಥʼದ ಪ್ರಕಾರ ದೇಶದ್ರೋಹವಾಗುತ್ತವೆ ಎಂದು ನ್ಯಾಯಾಲಯ ಹೇಳಿದೆ.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]