“ಗೂಗಲ್ ಡ್ರೈವ್‌ನಲ್ಲಿರುವ ಬ್ಯಾಕಪ್ ಓಪನ್ ಮಾಡುವುದು ಹೇಗೆ ?”, “ಗೂಗಲ್ ಡ್ರೈವ್‌ನಲ್ಲಿರುವ ಬ್ಯಾಕಪ್ ವಾಟ್ಸಾಪ್ ಸಂದೇಶಗಳನ್ನು ನೋಡುವುದು ಹೇಗೆ?" ಹಾಗೂ “ಅಳಿಸಿಹೋದ ವಾಟ್ಸಾಪ್ ಸಂದೇಶಗಳನ್ನು ಮರಳಿ ಪಡೆಯುವುದು ಹೇಗೆ?" - ಇದು ಅಕ್ಟೋಬರ್ 28, 2022ರಂದು ಕೇರಳದ ಗ್ರೀಷ್ಮಾ ತನ್ನ ರೆಡ್‌ಮೀ ಫೋನ್ ಬಳಸಿ ಅಂತರ್ಜಾಲದಲ್ಲಿ ನಡೆಸಿದ್ದ ಹುಡುಕಾಟಗಳು.
ಹೀಗೆ, ಗೂಗಲ್ ಕ್ಲೌಡ್‌ನಲ್ಲಿರುವ ಮಾಹಿತಿಯನ್ನು ಅಳಿಸಿ ಹಾಕಲು ತಾನು ಗೂಗಲ್ ಸರ್ಚ್ ಮೂಲಕ ನಡೆಸಿದ ಹುಡುಕಾಟ ಹಾಗೂ ವಿಷಪ್ರಾಶನದ ಬಗ್ಗೆ ಆನ್‌ಲೈನ್‌ನಲ್ಲಿ ಸಂಗ್ರಹಿಸಿದ ಮಾಹಿತಿಗಳೇ ಮುಂದೆ ತನ್ನನ್ನು ಕೊಲೆ ಅಪರಾಧಕ್ಕಾಗಿ ನೇಣುಗಂಬದತ್ತ ಒಯ್ಯುವ ಪ್ರಮುಖ ಸಾಕ್ಷ್ಯಗಳಾಗುತ್ತವೆ ಎನ್ನುವ ಸಣ್ಣದೊಂದು ಕಲ್ಪನೆಯೂ ಬಹುಶಃ ತನ್ನ ಪ್ರಿಯಕರ ಶರೋನ್ ರಾಜ್ ಕೊಲೆ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಈಡಾಗಿರುವ ಗ್ರೀಷ್ಮಾಗೆ ಇರಲಿಲ್ಲ ಎನಿಸುತ್ತದೆ.
ಹೀಗೆ ಗೂಗಲ್ ಡ್ರೈವ್ ಬ್ಯಾಕಪ್ ಕುರಿತಾಗಿ ಗ್ರೀಷ್ಮಾ ಹುಡುಕಾಟ ನಡೆಸಿದ್ದು ತನ್ನ ಪ್ರಿಯತಮ ಶರೋನ್ ರಾಜ್ ತಾನು ನೀಡಿದ ವಿಷದಿಂದಾಗಿ ಬಹು ಅಂಗಾಂಗ ವೈಫಲ್ಯಕ್ಕೀಡಾಗಿ ಅಕ್ಟೋಬರ್ 25ರಂದು ಕೊನೆಯುಸಿರೆಳೆದ ಮೂರು ದಿನಗಳ ನಂತರ. ಅಷ್ಟೊತ್ತಿಗಾಗಲೇ ಶರೋನ್ ಸಾವಿನ ಕುರಿತು ಪೊಲೀಸರು ಒಂದು ಬಾರಿ ಗ್ರೀಷ್ಮಾ ಮನೆಗೆ ಬಂದು ಮಾಹಿತಿ ಪಡೆದು ಹೋಗಿದ್ದರು. ಇದರ ಬೆನ್ನಿಗೇ ಚುರುಕಾದ ಗ್ರೀಷ್ಮಾ ತನ್ನ ಡಿಜಿಟಲ್ ಗುರುತುಗಳನ್ನು ನಾಶಪಡಿಸಲು ಮುಂದಾಗಿದ್ದಳು.
ತನ್ನ ಪ್ರಿಯತಮ ಶರೋನ್‌ಗೆ ಪ್ಯಾರಾಕ್ವಾಟ್ ಎಂಬ ಕಳೆನಾಶಕವನ್ನು ಆಯುರ್ವೇದ ಔಷಧಿಯೊಂದಿಗೆ ಬೆರೆಸಿ ಗ್ರೀಷ್ಮಾ ನೀಡಿದ್ದಳು. ಇದನ್ನು ಕುಡಿದ ಪರಿಣಾಮ ಆತ ಕೆಲದಿನಗಳಲ್ಲಿಯೇ ಬಹುಅಂಗಾಂಗ ವೈಫಲ್ಯಕ್ಕೀಡಾಗಿ ಮೃತಪಟ್ಟಿದ್ದ. ನಾಗರಕೋಯಿಲ್‌ನ ಸೇನಾಧಿಕಾರಿಯನ್ನು ವಿವಾಹವಾಗುವ ಸಲುವಾಗಿ ಗ್ರೀಷ್ಮಾ ಶರೋನ್‌ಗೆ ವಿಷ ಉಣಿಸಿದ್ದಳು ಎಂದು ನಂತರ ತಿಳಿದುಬಂದಿತ್ತು.
ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎ ಎಂ ಬಶೀರ್ ಅವರು ಸೋಮವಾರ ನೀಡಿದ 588 ಪುಟಗಳ ತೀರ್ಪಿನಲ್ಲಿ ಹೆಚ್ಚಿನಂಶ ಡಿಜಿಟಲ್ ಸಾಕ್ಷ್ಯಗಳ ಮೇಲೆ ಕೇಂದ್ರೀಕೃತವಾಗಿವೆ.
ಈ ಕಾರಣಕ್ಕಾಗಿಯೇ ಗ್ರೀಷ್ಮಾ ತಪ್ಪನ್ನು ಸಾಬೀತುಪಡಿಸುವ ದತ್ತಾಂಶವನ್ನು ಉಳಿಸಿದ್ದು 'ಮೋಡದೊಳಗಣ (ದತ್ತಾಂಶವನ್ನು ಒಳಗೊಂಡ ಡಿಜಿಟಲ್‌ಕ್ಲೌಡ್) ದೇವರುʼ ಎಂದು ನ್ಯಾಯಾಧೀಶರು ಮಾರ್ಮಿಕವಾಗಿ ನುಡಿದಿದ್ದಾರೆ.
“ರೂಪಕದ ರೀತಿಯಲ್ಲಿ ಹೇಳುವುದಾದರೆ, ಮೋಡದೊಳಗಣ ದೇವರು ಅಪರಾಧದ ದತ್ತಾಂಶವನ್ನು ಉಳಿಸಿದ್ದ”.ಕೇರಳ ನ್ಯಾಯಾಲಯ
ಪ್ಯಾರಸಿಟಮಾಲ್ ಮಿತಿಮೀರಿದ ಸೇವನೆಯ ಅಡ್ಡಪರಿಣಾಮಗಳು, ಪ್ಯಾರಸಿಟಮಾಲ್ ಜೊತೆಗೆ ಯಾವುದನ್ನು ಬೆರೆಸಬಾರದು, ಟೊರೊಂಟೊದ ಆತ್ಮಹತ್ಯೆ ಪ್ರಕರಣದಲ್ಲಿ ಮಿತಿಮೀರಿದ ಸೇವನೆಗಾಗಿ ಬಳಸಿದ್ದ ಪದಾರ್ಥಗಳು, ಆತ್ಮಹತ್ಯಾ ಪ್ರಯತ್ನಗಳಲ್ಲಿ ಪ್ಯಾರಾಸಿಟಮಾಲ್ ಮಿತಿಮೀರಿದ ಸೇವನೆ ಇತ್ಯಾದಿ ಅಂಶಗಳ ಬಗ್ಗೆ ಗ್ರೀಷ್ಮಾ ಆಗಸ್ಟ್ 22, 2022ರಂದು ಅಂತರ್ಜಾಲದಲ್ಲಿ ಸುಮಾರು ಒಂದೂವರೆ ತಾಸು ಹುಡುಕಾಟ ನಡೆಸಿದ್ದಳು.
ಈ ಮಾಹಿತಿಗಳಿಗಾಗಿ ಸುಮಾರು 23 ಜಾಲತಾಣಗಳನ್ನು ಅವಳು ಎಡತಾಕಿರುವುದು ಕಂಡುಬಂದಿತ್ತು. ಇದರ ಆಧಾರದಲ್ಲಿ ಪ್ಯಾರಸಿಟಮಾಲ್ ಅನ್ನು ಅತಿಯಾಗಿ ಸ್ಲೈಸ್ ಜ್ಯೂಸ ನ ಟೆಟ್ರಾ ಪ್ಯಾಕ್‌ನಲ್ಲಿ ಬೆರೆಸಿ ಶರೋನ್‌ಗೆ ಕುಡಿಸಲು ಪ್ರಯತ್ನಿಸಿದ್ದಳು. ಆದರೆ, ಅದರ ವಿಪರೀತ ಕಹಿಯಿಂದಾಗಿ ಬಾಯಿಗೆ ಇಟ್ಟೊಡನೆಯೇ ಶರೋನ್ ಉಗಿದುಬಿಟ್ಟಿದ್ದ. ಅ ಮೂಲಕ ಶರೋನ್‌ನನ್ನು ಸಾವಿಗೆ ದೂಡುವ ಗ್ರೀಷ್ಮಾಳ ಮೊದಲ ಪ್ರಯತ್ನ ವಿಫಲವಾಗಿತ್ತು.
ಈ ಅಂಶವನ್ನು ತೀರ್ಪಿನಲ್ಲಿ ಉಲ್ಲೇಖಿಸಿರುವ ನ್ಯಾಯಾಲಯವು, "ಒಬ್ಬ ಸಾಮಾನ್ಯ ವಿವೇಕಿ ಜ್ವರಕ್ಕಾಗಿ ಪ್ಯಾರಸಿಟಮಾಲ್ ತೆಗೆದುಕೊಳ್ಳುವ ಕುರಿತು ಎರಡು ಗಂಟೆಗಳ ಕಾಲ 23 ಅಂತರ್ಜಾಲ ತಾಣಗಳನ್ನು ಹುಡುಕಾಟ ಮಾಡುವುದಿಲ್ಲ. ಸ್ನಾತಕೋತ್ತರ ಪದವೀಧರಳಾದ ಅವಳು ತನ್ನ ಮನಸ್ಸಿನಲ್ಲಿ ಯಾವುದೋ ಬೇರೆಯ ಉದ್ದೇಶ ಇಲ್ಲದಿದ್ದರೆ ಅಂತಹ ಶೋಧ ನಡೆಸಬೇಕಿರಲಿಲ್ಲ" ಎಂದು ಹೇಳಿದೆ.
ಮುಂದೆ ಅಕ್ಟೋಬರ್ 14, 2022ರಂದು ಶರೋನ್ ಹತ್ಯೆಯ ಎರಡನೆಯ ಸಂಚಿನ ಭಾಗವಾಗಿ ಗ್ರೀಷ್ಮಾ ಕಪೀಕ್ (ರಾಸಾಯನಿಕ ಹೆಸರು ಪ್ಯಾರಾಕ್ವಾಟ್) ಎನ್ನುವ ಕೀಟನಾಶಕದ ಬಗ್ಗೆ, ಅದರ ವಿಷದ ಪರಿಣಾಮಗಳ ಬಗ್ಗೆ ಹುಡುಕಾಟ ನಡೆಸಿದ್ದಳು. ಹೇಗೆ ಇದನ್ನು ಸೇವಿಸಿದ ಮೊದಲ ಕೆಲ ದಿನಗಳಲ್ಲಿ ಇದರ ಸೇವನೆಯ ಕುರಿತಾದ ಮಾಹಿತಿ ತಿಳಿಯದೆ ಹೋದರೆ ದೇಹವು ಬಹು ಅಂಗಾಂಗ ವೈಫಲ್ಯಕ್ಕೀಡಾಗುತ್ತದೆ ಎನ್ನುವ ಮಾಹಿತಿ ಅವಳಿಗೆ ಈ ಹುಡುಕಾಟದ ವೇಳೆ ತಿಳಿದುಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹುಡುಕಾಟ ನಡೆಸಿದ ಕೆಲವೇ ಹೊತ್ತಿನಲ್ಲಿ ಆಕೆ ಶರೋನ್‌ಗೆ ಲೈಂಗಿಕ ಆಮಿಷವನ್ನು ಒಡ್ಡುವ ಮೂಲಕ ತನ್ನ ಮನೆಗೆ ಕರೆಸಿಕೊಂಡಳು.
ಈ ವೇಳೆ ಕಷಾಯದ ಮೂಲಕ ಪ್ಯಾರಾಕ್ವಾಟ್‌ಅನ್ನು ಯಶಸ್ವಿಯಾಗಿ ಶರೋನ್‌ಗೆ ಕುಡಿಸುವಲ್ಲಿ ಸಫಲಳೂ ಆದಳು. ಶರೋನ್ ಅದನ್ನು ಕುಡಿದ ಬೆನ್ನಿಗೇ ವಾಂತಿ ಮಾಡಿಕೊಳ್ಳಲು ಆರಂಭಿಸಿದ. ಆತ ಮರಳಿ ಮನೆ ಸೇರುವವರೆಗೂ ವಾಂತಿ ಮಾಡಿಕೊಳ್ಳುತ್ತಲೇ ಇದ್ದ. ತನ್ನ ಈ ಅಸ್ವಸ್ಥತೆಗೆ ಮುಂದಿನ ಕೆಲದಿನಗಳ ಕಾಲ ಆತ ಅನೇಕ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆದನಾದರೂ ಅದಾವುದೂ ಪ್ಯಾರಾಕ್ವಾಟ್ ಸೇವನೆಯಿಂದಾಗಿ ಉಂಟಾಗುವ ಪರಿಣಾಮಗಳನ್ನು ತಡೆಯುವ ವೈದ್ಯಕೀಯ ಚಿಕಿತ್ಸೆಗಳಾಗಿರಲಿಲ್ಲ. ಪರಿಣಾಮ ಆತ ಅಕ್ಟೋಬರ್ 25ರಂದು ಕೊನೆಯುಸಿರೆಳೆದ.
ಪ್ರಕರಣದ ಸಂಬಂಧ ಯಾವಾಗ ಪೊಲೀಸರು ಅಕ್ಟೋಬರ್ ಅಕ್ಟೋಬರ್ 28ರ ಹೊತ್ತಿಗೆ ತನ್ನ ಮನೆ ಮೆಟ್ಟಿಲೇರಿ ಮಾಹಿತಿ ಪಡೆದರೋ ಇನ್ನು ಶೀಘ್ರದಲ್ಲಿಯೇ ತನ್ನ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನುವುದನ್ನು ಅರಿತು ದತ್ತಾಂಶ ನಾಶಕ್ಕಾಗಿ ಗ್ರೀಷ್ಮಾ ತನ್ನ ಮೊಬೈಲ್‌ನಲ್ಲಿಯೇ ಅಂತರ್ಜಾಲದ ಮೂಲಕ ಹುಡುಕಾಟ ನಡೆಸಿದ್ದಳು. ವಾಟ್ಸಾಪ್ ಸಂದೇಶಗಳನ್ನು ಹೇಗೆ ಮರಳಿ ಪಡೆಯುವುದು ಮತ್ತು ಅಳಿಸುವುದು ಎಂಬುದರ ಕುರಿತು ಅಂತರ್ಜಾಲದಲ್ಲಿ ಶೋಧ ನಡೆಸಿದ್ದಳು.
ಅಂತೆಯೇ ಆಕೆ ಶರೋನ್ ಹಾಗೂ ತನ್ನ ನಡುವಿನ ಹಲವು ಸಂದೇಶಗಳನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಳೂ ಕೂಡ. ಆದರೆ ಪೊಲೀಸರು ಆ ಸಂದೇಶಗಳನ್ನು ತನಿಖೆಯ ವೇಳೆ ಮರಳಿ ಪಡೆದರು.
ಈ ಎಲ್ಲ ಅಂಶಗಳನ್ನು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿರುವ ನ್ಯಾಯಾಲಯವು ವ್ಯಕ್ತಿಯ ಸಕ್ರಿಯ ಮತ್ತು ನಿಷ್ಕ್ರಿಯ ಡಿಜಿಟಲ್ ಹೆಜ್ಜೆಗುರುತುಗಳು ಆತನ ಮನಸ್ಥಿತಿಯನ್ನು ಗುರುತಿಸುವ ಮಾರ್ಗದರ್ಶಿಯಾಗಿವೆ ಎಂದು ನುಡಿದಿದೆ.
ಗಮನಾರ್ಹವಾಗಿ, ಪ್ರಕರಣವು ಸಂಪೂರ್ಣವಾಗಿ ಸಾಂದರ್ಭಿಕ ಸಾಕ್ಷ್ಯದ ಮೇಲೆ ರೂಪುಗೊಂಡಿದ್ದರೂ ಸಹ, ಗ್ರೀಷ್ಮಾ ಮರಣದಂಡನೆಗೆ ಅರ್ಹಳು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ತಾನು ಚಿಕ್ಕ ವಯೋಮಾನದವಳಾಗಿದ್ದು, ವಿದ್ಯಾವಂತೆಯಾಗಿದ್ದೇನೆ, ಪೋಷಕರಿಗೆ ಏಕೈಕ ಸಂತಾನವಾಗಿದ್ದೇನೆ, ಹಾಗಾಗಿ ತನಗೆ ಮರಣದಂಡನೆ ವಿಧಿಸಬಾರದು ಎಂದು ಮುಂತಾಗಿ ಗ್ರೀಷ್ಮಾ ನ್ಯಾಯಾಲಯದ ಮುಂದೆ ಅಲವತ್ತುಕೊಂಡಿದ್ದಳು. ಆದರೆ, ಇದನ್ನು ಮನ್ನಿಸದ ನ್ಯಾಯಾಲಯ ಶರೋನ್ ಕೂಡ ಬದುಕಿನ ಬಗ್ಗೆ ಅಗಾಧ ನಿರೀಕ್ಷೆಗಳನ್ನಿರಿಸಿಕೊಂಡಿದ್ದ ಒಬ್ಬ ಯುವಕನಾಗಿದ್ದ. ಆದರೆ, ತನ್ನ ಜೀವನದ ಅಂತ್ಯವನ್ನು ದಾರುಣವಾಗಿ ಕಂಡ ಎಂದು ಅಭಿಪ್ರಾಯಪಟ್ಟು ಗ್ರೀಷ್ಮಾಗೆ ಮರಣದಂಡನೆ ವಿಧಿಸಿತು.
ಕೊಲೆ ಮಾಡಲು ಎರಡು ಬಾರಿ ಪ್ರಯತ್ನಪಟ್ಟ ಗ್ರೀಷ್ಮಾಳ ಮಾನಸಿಕ ಸ್ಥಿತಿಯ ಬಗ್ಗೆ ಬೆರಳು ಮಾಡಿದ ನ್ಯಾಯಾಲಯ, ಅಪರಾಧಿಯು 'ಪಾಶವೀ ಆಲೋಚನೆಯನ್ನು' ಹೊಂದಿದ್ದಳು. ಏಕೆಂದರೆ ಕ್ರೂರ, ಕುತಂತ್ರಿ ಅಪರಾಧಿಯು ಮಾತ್ರವೇ ಅಪರಾಧವನ್ನು ಮರಳಿ ಎಸಗಲು ಸಾಧ್ಯ', ಎಂದು ಷರಾ ಬರೆಯಿತು.
ತನ್ನ ತೀರ್ಪಿನಲ್ಲಿ ಡಿಜಿಟಲ್ ಸಾಕ್ಷ್ಯಗಳ ಮಹತ್ವದ ಬಗ್ಗೆ ತಿಳಿಸಿರುವ ನ್ಯಾಯಾಲಯ, ವ್ಯಕ್ತಿಯೊಬ್ಬನ ಸಕ್ರಿಯ, ನಿಷ್ಕ್ರಿಯ ಡಿಜಿಟಲ್ ಹೆಜ್ಜೆಗುರುತುಗಳು ಆತನ ಮಾನಸಿಕ ಸ್ಥಿತಿಯ ಬಗ್ಗೆ ತಿಳಿಸುವ ಮಾರ್ಗದರ್ಶಿಯಾಗಿರುತ್ತವೆ ಎಂದು ದಾಖಲಿಸಿದೆ.
ಅಂದಹಾಗೆ, ಕೇರಳದ ಮಟ್ಟಿಗೆ ಅತಿ ಕಿರಿಯ ವಯಸ್ಸಿಗೇ ಮರಣದಂಡನೆ ಶಿಕ್ಷೆ ಪಡೆದಾಕೆ ಎನ್ನುವ ಅಪಖ್ಯಾತಿಗೆ ತುತ್ತಾಗಿರುವ ಗ್ರೀಷ್ಮಾ ತನಗೆ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೊರೆ ಹೋಗುವ ನಿರೀಕ್ಷೆಯಿದೆ.