ತಿರುವನಂತಪುರಂ ನಿವಾಸಿ 23 ವರ್ಷದ ಶರೋನ್ ರಾಜ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗ್ರೀಷ್ಮಾಗೆ ಕೇರಳ ನ್ಯಾಯಾಲಯ ಸೋಮವಾರ ಮರಣದಂಡನೆ ವಿಧಿಸಿದೆ. ಇದೇ ಪ್ರಕರಣದಲ್ಲಿ ಆಕೆಯ ಚಿಕ್ಕಪ್ಪ ನಿರ್ಮಲ್ ಕುಮಾರ್‌ಗೆ ಸಾಕ್ಷ್ಯನಾಶದ ಆರೋಪದಡಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಅಲ್ಲದೆ, ಅಪಹರಣದ ಅಪರಾಧಕ್ಕಾಗಿ ಗ್ರೀಷ್ಮಾಗೆ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ತನಿಖೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದಕ್ಕಾಗಿ ಐದು ವರ್ಷಗಳ ಶಿಕ್ಷೆಯನ್ನು ಸಹ ನ್ಯಾಯಾಲಯವು ವಿಧಿಸಿದೆ. ಜನವರಿ 17ರಂದು ಈ ಇಬ್ಬರನ್ನು ಪ್ರಕರಣದಲ್ಲಿ ದೋಷಿಗಳು ಎಂದು ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎ ಎಂ ಬಶೀರ್ ಅವರು ತೀರ್ಪು ನೀಡಿದ್ದರು.
ವಿಚಾರಣಾ ನ್ಯಾಯಾಲಯವು ಐಪಿಸಿಯ ಸೆಕ್ಷನ್ 364 (ಅಪಹರಣ ಅಥವಾ ಕೊಲೆ ಮಾಡುವ ಉದ್ದೇಶದಿಂದ ಅಪಹರಣ), 328 (ವಿಷದಿಂದ ಹಾನಿ ಮಾಡುವುದು), 302 (ಕೊಲೆಗೆ ವಿಧಿಸಲಾಗುವ ಶಿಕ್ಷೆ) ಮತ್ತು 201 (ಸಾಕ್ಷ್ಯ ನಾಶ) ಅಡಿಯಲ್ಲಿ ಗ್ರೀಷ್ಮಾ ತಪ್ಪಿತಸ್ಥೆಯೆಂದು ತೀರ್ಪು ನೀಡಿದೆ. ಆಕೆಯ ಚಿಕ್ಕಪ್ಪ ನಿರ್ಮಲ್ ಕುಮಾರನ್ ನಾಯರ್ ಕೂಡ ಸೆಕ್ಷನ್ 201 ರ ಅಡಿಯಲ್ಲಿ (ಸಾಕ್ಷ್ಯನಾಶ) ದೋಷಿ ಎಂದು ನ್ಯಾಯಾಲಯ ತೀರ್ಮಾನಿಸಿತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆಕೆಯ ತಾಯಿಯನ್ನು ಖುಲಾಸೆಗೊಳಿಸಲಾಗಿದೆ.
ಅಂತಿಮ ವರ್ಷದ ಬಿಎಸ್‌ಸಿ ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್ ಕನ್ಯಾಕುಮಾರಿಯ ಖಾಸಗಿ ಕಾಲೇಜಿನಲ್ಲಿದ್ದಾಗ ಸಾಹಿತ್ಯದ ವಿದ್ಯಾರ್ಥಿನಿ ಗ್ರೀಷ್ಮಾ ಅವರೊಂದಿಗೆ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ ಪ್ರಣಯದ ಸ್ವರೂಪ ಪಡೆದಿತ್ತು. ಆದರೆ ಒಂದು ವರ್ಷದ ನಂತರ ಸಂಬಂಧದಲ್ಲಿ ಬಿರುಕು ಮೂಡಿತ್ತು.
ಗ್ರೀಷ್ಮಾ ಕುಟುಂಬವು ಬೇರೊಬ್ಬ ವ್ಯಕ್ತಿಯೊಂದಿಗೆ ಆಕೆಯ ಮದುವೆಯನ್ನು ಏರ್ಪಡಿಸಿದ ನಂತರ ಶರೋನ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಲು ಬಯಸಿದ ಗ್ರೀಷ್ಮಾ, ಶರೋನ್ ಅನ್ನು ಕೊಲ್ಲಲು ತನ್ನ ತಾಯಿ ಮತ್ತು ಚಿಕ್ಕಪ್ಪನೊಂದಿಗೆ ಸಂಚು ರೂಪಿಸಿದ್ದಳು ಎನ್ನುವುದು ಪ್ರಾಸಿಕ್ಯೂಷನ್ ಆರೋಪವಾಗಿತ್ತು.
ಕನ್ಯಾಕುಮಾರಿಯಲ್ಲಿನ ಗ್ರೀಷ್ಮಾ ನಿವಾಸಕ್ಕೆ ಅಕ್ಟೋಬರ್ 14, 2022ರಂದು ಶರೋನ್ ಭೇಟಿ ಇತ್ತಿದ್ದ. ಈ ವೇಳೆ ಅತನಿಗೆ ಗ್ರೀಷ್ಮಾ ಆಯುರ್ವೇದದ ಕಷಾಯದೊಂದಿಗೆ ವಿಷವನ್ನು ಬೆರೆಸಿ ನೀಡಿದ್ದಳು. ಸಾಕ್ಷ್ಯನಾಶದ ಸಲುವಾಗಿ ಈ ವಿಷದ ಬಾಟಲಿಯನ್ನು ಗ್ರೀಷ್ಮಾ ತಾಯಿ ಮತ್ತು ಚಿಕ್ಕಪ್ಪ ಬಚ್ಚಿಟ್ಟಿದ್ದರು.
ಕಷಾಯವನ್ನು ಕುಡಿದಿದ್ದ ಶರೋನ್‌ನ ಆರೋಗ್ಯವು ಕೆಲವೇ ದಿನಗಳಲ್ಲಿ ಹದಗೆಟ್ಟು ಅಕ್ಟೋಬರ್ 25ರಂದು ಆತ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದ. ಪ್ರಕರಣವು ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿ ಡಿವೈಎಸ್‌ಪಿ ಜಾನ್ಸನ್ ಅವರ ನೇತೃತ್ವದಲ್ಲಿ ಗಂಭೀರ ತನಿಖೆ ನಡೆಯಿತು.
ಅಂತಿಮವಾಗಿ ತನಿಖಾ ತಂಡವು ಅಕ್ಟೋಬರ್ 31, 2022ರಂದು ಗ್ರೀಷ್ಮಾಳನ್ನು ಬಂಧಿಸಿತು. ತದನಂತರ ಆಕೆಯ ತಾಯಿ ಹಾಗೂ ಚಿಕ್ಕಪ್ಪನನ್ನು ವಶಕ್ಕೆ ಪಡೆಯಲಾಯಿತು.
ಗ್ರೀಷ್ಮಾ ವಿರುದ್ಧ ಕೊಲೆ, ಕೊಲೆಯ ಉದ್ದೇಶದಿಂದ ನಡೆಸಲಾದ ಅಪಹರಣ ಹಾಗೂ ಸಾಕ್ಷ್ಯನಾಶಗಳ ಆರೋಪವನ್ನು ಪ್ರಾಸಿಕ್ಯೂಷನ್ ಹೊರಿಸಿತು. ಸುಮಾರು ಒಂದು ವರ್ಷ ಕಾಲ ಜೈಲಿನಲ್ಲಿದ್ದ ಗ್ರೀಷ್ಮಾಗೆ ಸೆ.25, 2023ರಂದು ಕಠಿಣ ಷರತ್ತುಗಳೊಂದಿಗೆ ಜಾಮೀನು ದೊರೆತಿತ್ತು.