Shashi Tharoor, Rajdeep Sardesai, Zafar Agha, Vinod K Jose, Mrinal Pande, Paresh Nath and Anand Nath
Shashi Tharoor, Rajdeep Sardesai, Zafar Agha, Vinod K Jose, Mrinal Pande, Paresh Nath and Anand Nath 
ಸುದ್ದಿಗಳು

ರೈತರ ಪ್ರತಿಭಟನೆಗಳ ತಪ್ಪು ವರದಿಗಾರಿಕೆ ಆರೋಪ: ಎಫ್‌ಐಆರ್‌ ವಜಾ ಕೋರಿ ಸುಪ್ರೀಂ ಮೆಟ್ಟಿಲೇರಿದ ತರೂರ್‌, ರಾಜ್‌ದೀಪ್

Bar & Bench

ಪ್ರಸಕ್ತ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಟ್ವೀಟ್‌ ಮೂಲಕ ತಪ್ಪಾಗಿ ವರದಿ ಮಾಡಿದ ಮತ್ತು ಸಾಮರಸ್ಯ ಹಾಳು ಮಾಡಿದ ಆರೋಪದಲ್ಲಿ ಕಾಂಗ್ರೆಸ್‌ ನಾಯಕ ಶಶಿ ತರೂರ್‌, ಪತ್ರಕರ್ತರಾದ ಇಂಡಿಯಾ ಟುಡೇ ವಾಹಿನಿಯ ರಾಜ್‌ದೀಪ್‌ ಸರ್ದೇಸಾಯಿ, ದ ಕಾರವಾನ್‌ನ ವಿನೋದ್‌ ಕೆ ಜೋಸ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು ಅದನ್ನು ರದ್ದು ಮಾಡುವಂತೆ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.

ಪತ್ರಕರ್ತರಾದ ಮೃನಾಲ್‌ ಪಾಂಡೆ, ಜಫರ್‌ ಆಘಾ, ಪರೇಶ್‌ ನಾಥ್‌ ಮತ್ತು ಆನಂದ್‌ ನಾಥ್‌ ಅವರು ಸುಪ್ರೀಂ ಕೋರ್ಟ್‌ ಕದತಟ್ಟಿದ್ದಾರೆ. ಎಫ್‌ಐಆರ್‌ನಲ್ಲಿ ತಿರುಳಿಲ್ಲ. ಅವು ರದ್ದುಗೊಳಿಸಲು ಅರ್ಹವಾಗಿವೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಕರಂಜಾವಾಲಾ ಮತ್ತು ಕಂಪೆನಿಯ ಮೂಲಕ ಮನವಿ ಸಲ್ಲಿಸಲಾಗಿದ್ದು, ಅವರು ಸಂವಿಧಾನದ 21ನೇ ವಿಧಿಯ ಅಡಿ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಹಾಗೂ 19(1)(ಎ) ಅಡಿ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿದ್ದಾರೆ.

ಆರೋಪಿಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಪಂಕಜ್‌ ಸಿಂಗ್‌ ಎಂಬಾತ ನೀಡಿದ ದೂರನ್ನು ಆಧರಿಸಿ ಗುರುಗ್ರಾಮ್‌ ಪೊಲೀಸರು ಗುರುವಾರ ಅವರ ವಿರುದ್ಧ ದೂರು ದಾಖಲಿಸಿದ್ದರು. ಇದೇ ವಿಚಾರವನ್ನು ಆಧರಿಸಿ ಅರ್ಜಿದಾರರ ವಿರುದ್ಧ ನೋಯಿಡಾದಲ್ಲಿ ದೂರು ದಾಖಲಿಸಲಾಗಿತ್ತು. ಇದೇ ತರಹದ ಎಫ್‌ಐಆರ್‌ಗಳನ್ನು ಆರು ಮಂದಿ ಅರ್ಜಿದಾರರ ವಿರುದ್ಧ ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ ದಾಖಲಿಸಲಾಗಿತ್ತು. ದ ಕಾರವಾನ್‌ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ದ ವೈರ್‌ ಸಂಪಾದ ಸಿದ್ಧಾರ್ಥ್‌ ವರದರಾಜನ್‌ ಅವರ ವಿರುದ್ಧ ರೈತರ ಪ್ರತಿಭಟನೆಗಳನ್ನು ತಪ್ಪಾಗಿ ವರದಿ ಮಾಡಲಾಗಿದೆ ಎಂದು ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.

ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಸಾವನ್ನಪ್ಪಿದ ಕೃಷಿಕರೊಬ್ಬರು ಪೊಲೀಸ್‌ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ಆರೋಪಿಸಿ ಟ್ವೀಟ್‌ ಮಾಡಿದ್ದ ಆರೋಪದಲ್ಲಿ ಈಚೆಗೆ ಸರ್ದೇಸಾಯಿ ಅವರನ್ನು ಇಂಡಿಯಾ ಟುಡೇ ವಾಹಿನಿಯು ಹದಿನೈದು ದಿನಗಳ ಮಟ್ಟಿಗೆ ಸುದ್ದಿ ಪ್ರಸರಣದಿಂದ ನಿರ್ಬಂಧಿಸಿತ್ತು.