ರಾಜ್ಯದಾದ್ಯಂತ ಶಾಲಾ, ಕಾಲೇಜುಗಳ ಸಮೀಪ ಹಾಗೂ ಮೇಲ್ಭಾಗಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಸೇರಿದಂತೆ ಎಲ್ಲ ಎಸ್ಕಾಂಗಳು ಕಾರ್ಯಾರಂಭ ಮಾಡಿದ್ದು, ಈ ಸಂಬಂಧ ಅವು ಪ್ರತ್ಯೇಕವಾಗಿ ಈಚೆಗೆ ಕರ್ನಾಟಕ ಹೈಕೋರ್ಟ್‌ಗೆ ವರದಿ ಸಲ್ಲಿಸಿವೆ.
ಕೊಪ್ಪಳ ನಗರದ ಬನ್ನಿಕಟ್ಟಿ ಬಳಿಯ ಬಿಸಿಎಂ ಹಾಸ್ಟೆಲ್‌ನಲ್ಲಿ 2019ರ ಆಗಸ್ಟ್ 15ರಂದು ಧ್ಜಜಸ್ತಂಭ ತೆರವುಗೊಳಿಸುವ ವೇಳೆ ವಿದ್ಯುತ್ ತಂತಿ ತಗುಲಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಕೆಪಿಟಿಸಿಎಲ್ ಪ್ರತಿನಿಧಿಸಿದ್ದ ವಕೀಲ ಶ್ರೀರಂಗ ಸುಬ್ಬಣ್ಣ ಅವರು “ನ್ಯಾಯಾಲಯದ ನಿರ್ದೇಶನದಂತೆ ಎಲ್ಲ ಎಸ್ಕಾಂಗಳು ಶಿಕ್ಷಣ ಸಂಸ್ಥೆಗಳ ಬಳಿಯ ವಿದ್ಯುತ್ ಮಾರ್ಗಗಳನ್ನು ತೆರವುಗೊಳಿಸುವ ಕಾಮಗಾರಿ ಆರಂಭಿಸಿವೆ. ಕೆಲವು ಕಡೆ ಟೆಂಡರ್ ಕರೆದು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳು ಇದೇ 9ರಂದು ಪ್ರತ್ಯೇಕ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿವೆ” ಎಂದರು.
ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ವಕೀಲೆ ಬಿ ವಿ ವಿದ್ಯುಲ್ಲತಾ ಅವರಿಗೆ ಎಸ್ಕಾಂಗಳ ವರದಿ ಪರಿಶೀಲಿಸಿ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ನಿರ್ದೇಶಿಸಿದ ಪೀಠವು ವಿಚಾರಣೆಯನ್ನು ಇದೇ ಮಾರ್ಚ್ 21ಕ್ಕೆ ಮುಂದೂಡಿತು.