Justices B Veerappa and T Venkatesh Naik 
ಸುದ್ದಿಗಳು

ಮಲ್ಲತ್ತಳ್ಳಿ ಕೆರೆ ದಂಡೆಯಲ್ಲಿ ಶಿವಮೂರ್ತಿ ಪ್ರತಿಷ್ಠಾಪನೆ ಅನಧಿಕೃತವಲ್ಲ: ಹೈಕೋರ್ಟ್‌ಗೆ ಬಿಬಿಎಂಪಿ ವಿವರಣೆ

ಬಿಬಿಎಂಪಿ ಅಫಿಡವಿಟ್‌ಗೆ ಒಂದು ವಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರ ಪರ ವಕೀಲ ಜಿ ಆರ್ ಮೋಹನ್ ಅವರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದ ನ್ಯಾಯಾಲಯ.

Bar & Bench

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲತ್ತಳ್ಳಿಯ ಕೆರೆ ಪ್ರದೇಶದಲ್ಲಿ ಬಯಲು ರಂಗಮಂದಿರ ಹಾಗೂ ಶಿವನ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಅನಧಿಕೃತವಲ್ಲ ಮತ್ತು ಯಾವುದೇ ಉಲ್ಲಂಘನೆ ನಡೆದಿಲ್ಲ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಟಿ ವೆಂಕಟೇಶ್ ನಾಯಕ್ ಅವರ ನೇತೃತ್ವದ ವಿಭಾಗೀಯ ಪೀಠವು ಸೋಮವಾರ ವಿಚಾರಣೆ ನಡೆಸಿತು.

ಬಿಬಿಎಂಪಿ ಮುಖ್ಯ ಎಂಜಿನಿಯರ್ (ಕೆರೆಗಳ ವಿಭಾಗ) ವಿಜಯ ಕುಮಾರ್ ಹರಿದಾಸ್ ಅವರ ಅಫಿಡವಿಟ್‌ ಅನ್ನು ಬಿಬಿಎಂಪಿ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದರು. ಅಲ್ಲದೇ, ಶಿವನಮೂರ್ತಿ ಕೆರೆ ಏರಿ ಪ್ರದೇಶದಿಂದ 52 ಮೀಟರ್ ದೂರದಲ್ಲಿದೆ. ಮೂರ್ತಿ ಸ್ಥಾಪನೆಯಿಂದ ಕೆರೆಗೆ ಯಾವುದೇ ಹಾನಿ ಆಗಲ್ಲ. ಮುಖ್ಯವಾಗಿ ಈ ಕಾಮಗಾರಿ ಅನಧಿಕೃತವಾಗಿಲ್ಲ ಮತ್ತು ಯಾವ ಉಲ್ಲಂಘನೆಯೂ ನಡೆದಿಲ್ಲ ಎಂದು ಪೀಠದ ಗಮನಕ್ಕೆ ತಂದರು.

ಇದನ್ನು ದಾಖಲಿಸಿಕೊಂಡ ಪೀಠವು ಬಿಬಿಎಂಪಿ ಅಫಿಡವಿಟ್‌ಗೆ ಒಂದು ವಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರ ಪರ ವಕೀಲ ಜಿ ಆರ್ ಮೋಹನ್ ಅವರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ಅಫಿಡವಿಟ್‌ನಲ್ಲಿ ಏನಿದೆ?: ಕೆರೆ ಪ್ರದೇಶದಲ್ಲಿ ವೃತ್ತಾಕಾರದ ಕಾಂಕ್ರೀಟ್‌ ಬಯಲು ರಂಗ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಯಾವುದೇ ಮಂಜೂರಾತಿ ಅಥವಾ ಕಾರ್ಯಾದೇಶ ಪಡೆದುಕೊಂಡಿಲ್ಲ. ಶಿವರಾತ್ರಿ ಆಚರಣೆಯ ಭಾಗವಾಗಿ ಕೆರೆ ಅಂಗಳದಲ್ಲಿ 35 ಅಡಿ ಎತ್ತರದ ಶಿವನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಇದಕ್ಕಾಗಿ ಒಟ್ಟು ಕೆರೆ ಪ್ರದೇಶವನ್ನು ಕಡಿತಗೊಳಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಆದರೆ, ಅಂತಹದ್ದೇನು ನಡೆದಿಲ್ಲ. ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ಮಲ್ಲತಹಳ್ಳಿ ಕೆರೆ ಸಮಗ್ರ ಅಭಿವೃದ್ಧಿಗೆ 2019ರಲ್ಲಿ ರಾಜ್ಯ ಸರ್ಕಾರ ಅನುಮೋದನೆ ನೀಡಿದ ಬಳಿಕ ಬಿಬಿಎಂಪಿ ಕಾಮಗಾರಿ ಕೈಗೆತ್ತಿಕೊಂಡಿದೆ. ಅದರಂತೆ ಕಲ್ಯಾಣಿ ಮತ್ತು ಬಯಲು ರಂಗ ಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.

ಕೆರೆಯನ್ನು ತ್ಯಾಜ್ಯ ಮುಕ್ತವಾಗಿಸಲು ಕಲ್ಯಾಣಿ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಗಣೇಶ, ದುರ್ಗಾ ಮೂರ್ತಿಗಳ ವಿಸರ್ಜನೆಗೆ ಅವಕಾಶ ಮಾಡಿಕೊಡಲು ಕಲ್ಯಾಣಿ ನಿರ್ಮಿಸಲಾಗುತ್ತಿದೆ. ಕೆರೆಯಿಂದ ಕಲ್ಯಾಣಿ ತುಂಬಾ ಅಂತರದಲ್ಲಿದೆ. ಮಹಾಶಿವರಾತ್ರಿ ಪ್ರಯುಕ್ತ 2023ರ ಫೆಬ್ರವರಿ 18ರಂದು ಪ್ರತಿಷ್ಠಾಪಿಸಲಾದ ಶಿವನ ಪ್ರತಿಮೆ ಶಾಶ್ವತ ಸ್ವರೂಪದ್ದಲ್ಲ. ಕೇವಲ ಶಿವರಾತ್ರಿ ಆಚರಣೆ ಪ್ರಯುಕ್ತ ತಾತ್ಕಾಲಿಕವಾಗಿ ಅದನ್ನು ಪ್ರತಿಷ್ಠಾಪಿಸಲಾಗಿತ್ತು. ಮುಖ್ಯವಾಗಿ ಮೂರ್ತಿಯು ಪರಿಸರ ಮಾಲಿನ್ಯ ಮುಕ್ತ ವಸ್ತುಗಳಿಂದ ತಯಾರಿಸಲಾಗಿತ್ತು. ಫೆಬ್ರವರಿ 20ರಂದು ಅದನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಅಷ್ಟಕ್ಕೂ ಮೂರ್ತಿಯನ್ನು ಕೆರೆ ಅಂಗಳದಲ್ಲಿ ಪ್ರತಿಷ್ಠಾಪಿಸಲಾಗಿರಲಿಲ್ಲ. ಕಲ್ಯಾಣಿಯಲ್ಲಿ ಇಡಲಾಗಿತ್ತು. ಕಲ್ಯಾಣಿಯು ಕೆರೆಯಿಂದ 52 ಮೀಟರ್ ದೂರದಲ್ಲಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.