ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 2018ರ ಅಕ್ಟೋಬರ್‌ನಲ್ಲಿ 3,546 ಎಕರೆ 12 ಗುಂಟೆ ಜಮೀನಿನಲ್ಲಿ ಡಾ. ಕೆ ಶಿವರಾಮ್ ಕಾರಂತ ಬಡಾವಣೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಹೊರಡಿಸಿದ್ದ ಅಂತಿಮ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗಳನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾ ಮಾಡಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 2018ರ ಅಕ್ಟೋಬರ್ 30ರಂದು ಬಿಡಿಎ ಅಂತಿಮ ಅಧಿಸೂಚನೆ ಹೊರಡಿಸಿತ್ತು.
ಬಿಡಿಎ ಹೊರಡಿಸಿದ್ದ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆಗೆ ಒಳಪಟ್ಟಿದ್ದ ಭೂಮಿಯ ಮೇಲೆ ಹಕ್ಕು ಹೊಂದಿದ್ದು, ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನ ಸದರಿ ಆಸ್ತಿಯನ್ನು ಖರೀದಿಸಿದ್ದಾಗಿ ಉಲ್ಲೇಖಿಸಿ 39 ಮಂದಿ ಸಲ್ಲಿಸಿದ್ದ ಮನವಿಗಳನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
ಬಿಡಿಎ ಪ್ರಾಥಮಿಕ ಅಧಿಸೂಚನೆ, ಭೂಸ್ವಾಧೀನ ಪ್ರಕ್ರಿಯೆ ಮತ್ತು ಮೂರು ತಿಂಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸುವಂತೆ 2018ರ ಆಗಸ್ಟ್ 3ರಂದು ಸುಪ್ರೀಂ ಕೋರ್ಟ್ ಹೊರಡಿಸಿದ್ದ ಆದೇಶವನ್ನು ಪರಿಗಣಿಸಿ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.
“ಪ್ರಾಥಮಿಕ ಅಧಿಸೂಚನೆ ಅಡಿ ಉಲ್ಲೇಖಿಸಲಾಗಿರುವ ಇಡೀ 3,546 ಎಕರೆ 12 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರ ಮತ್ತು ಬಿಡಿಎಗೆ ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟವಾಗಿ ಹೊರಡಿಸಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಬಡಾವಣೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರಂತರವಾಗಿ ಹಲವು ಆದೇಶ ಹೊರಡಿಸಿದ್ದು, ಸಾಕಷ್ಟು ನಿರ್ದೇಶನಗಳನ್ನು ನೀಡುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.
2018ರ ಆಗಸ್ಟ್ 3ರ ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನ ಆಸ್ತಿ ಖರೀದಿಸಿದ್ದಾಗಿ ವಾದಿಸಿದ್ದ ಅರ್ಜಿದಾರರ ವಾದವನ್ನು ತಳ್ಳಿ ಹಾಕಿರುವ ಹೈಕೋರ್ಟ್ “ಬಿಡಿಎ 2008ರ ಡಿಸೆಂಬರ್ 30ರಂದು ಹೊರಡಿಸಿದ್ದ ಪ್ರಾಥಮಿಕ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವ ಮೂಲಕ ಅದನ್ನು ಕಾನೂನುಬದ್ಧ ಎಂದಿದೆ. ಹೀಗಾಗಿ, 2008ರ ಡಿಸೆಂಬರ್ ನಂತರದ ಪ್ರಕ್ರಿಯೆಗಳು ಸುಪ್ರೀಂ ಕೋರ್ಟ್ ಆದೇಶಕ್ಕೆ ಒಳಪಟ್ಟಿರುತ್ತದೆ” ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿದೆ.