Virendra Dev Dixit
Virendra Dev Dixit  NewsNation
ಸುದ್ದಿಗಳು

ದೇವ ಮಾನವ ದೀಕ್ಷಿತ್ ಆಶ್ರಮದಲ್ಲಿ160 ಮಹಿಳೆಯರಿಗೆ ಪಶುಸದೃಶ ಸ್ಥಿತಿ: ಆಘಾತ ವ್ಯಕ್ತಪಡಿಸಿದ ದೆಹಲಿ ಹೈಕೋರ್ಟ್

Bar & Bench

ಪ್ರಸ್ತುತ ತಲೆಮರೆಸಿಕೊಂಡಿರುವ ಸ್ವಘೋಷಿತ ದೇವಮಾನವ ವೀರೇಂದ್ರ ದೇವ್ ದೀಕ್ಷಿತ್ ಆಶ್ರಮದಲ್ಲಿ 160ಕ್ಕೂ ಹೆಚ್ಚು ಮಹಿಳೆಯರನ್ನು 'ಅಮಾನವೀಯ' ಮತ್ತು 'ಪಶುಸದೃಶʼ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿತ್ತು ಎಂಬ ಬಗ್ಗೆ ದೆಹಲಿ ಹೈಕೋರ್ಟ್‌ ಮಂಗಳವಾರ ಆಘಾತ ವ್ಯಕ್ತಪಡಿಸಿತು.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ನ್ಯಾ. ನವೀನ್ ಚಾವ್ಲಾ ಅವರಿದ್ದ ವಿಭಾಗೀಯ ಪೀಠ ರಾಷ್ಟ್ರ ರಾಜಧಾನಿಯಲ್ಲಿ ಇಂಥದ್ದೆಲ್ಲಾ ನಡೆಯುತ್ತಿರುವುದನ್ನು ಟೀಕಿಸಿತು.

“ಇದು ಸಂಪೂರ್ಣ ಅಸಂಬದ್ಧ. ಹಾಡುಹಗಲೇ ದೆಹಲಿಯಂತಹ ನಗರದಲ್ಲೇ ಇಂಥ ಕೆಟ್ಟ ಕೆಲಸ ಮಾಡುತ್ತಿದ್ದೀರಿ. ಅವರ (ದೀಕ್ಷಿತ್) ಅನುಪಸ್ಥಿತಿಯಲ್ಲಿ ಇದನ್ನೆಲ್ಲಾ ನಡೆಸುತ್ತಿರುವವರು ಯಾರು?” ಎಂದು ನ್ಯಾಯಾಲಯ ಪ್ರಶ್ನಿಸಿತು.

ಬ್ರಹ್ಮಕುಮಾರಿ ಸಮಾಜದ ಅನುಯಾಯಿಯಾಗಿದ್ದ ವೀರೇಂದ್ರ ದೇವ್ ದೀಕ್ಷಿತ್ ನಂತರ ಆಧ್ಯಾತ್ಮಿಕ ವಿಶ್ವ ವಿದ್ಯಾಲಯ ಎಂಬ ತಮ್ಮದೇ ಆದ ಸಂಸ್ಥೆ ಸ್ಥಾಪಿಸಿದರು. ದೆಹಲಿಯ ರೋಹಿಣಿ ಪ್ರದೇಶದಲ್ಲಿನ ತನ್ನ 'ಕೋಟೆಯಂತಹ ಆಶ್ರಮ'ದಲ್ಲಿ 100 ಕ್ಕೂ ಹೆಚ್ಚು ಮಹಿಳೆಯರನ್ನು ಬಂಧಿಸಿ ಲೈಂಗಿಕವಾಗಿ ಶೋಷಿಸಿದ ಆರೋಪ ದೀಕ್ಷಿತ್ ಅವರ ಮೇಲಿದೆ. 2018ರ ಡಿಸೆಂಬರ್‌ನಲ್ಲಿ ದೆಹಲಿ ಪೊಲೀಸರು 40 ಕ್ಕೂ ಹೆಚ್ಚು ಮಹಿಳೆಯರನ್ನು ಆಶ್ರಮದಿಂದ ರಕ್ಷಿಸಿದ್ದರು. ಆಗಿನಿಂದಲೂ ದೀಕ್ಷಿತ್‌ ಪರಾರಿಯಾಗಿದ್ದಾನೆ. ಪ್ರಕರಣವನ್ನು ಈಗ ಸಿಬಿಐ ತನಿಖೆ ನಡೆಸುತ್ತಿದೆ.

ಆಶ್ರಮದಲ್ಲಿರುವ ತಮ್ಮ ಮಗಳಿಗೆ ತೀವ್ರ ಬೆನ್ನುನೋವು ಕಾಣಿಸಿಕೊಂಡಿದ್ದು ಆಕೆಯನ್ನು ನೋಡಲು ಆಶ್ರಮದವರು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಪೋಷಕರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಆಗ ದೀಕ್ಷಿತ್‌ ಈಗ ಆಶ್ರಮ ನಡೆಸುತ್ತಿಲ್ಲ, ಆಶ್ರಮವಾಸಿಗಳೇ ಒಗ್ಗೂಡಿ ಅದನ್ನು ನಡೆಸುತ್ತಿದ್ದಾರೆ ಎಂಬ ಅಂಶವನ್ನು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು.

ಆಶ್ರಮದ ಕುರಿತಂತೆ ಅರ್ಜಿದಾರರ ಪರ ವಕೀಲೆ ಮೇನಕಾ ಗುರುಸ್ವಾಮಿ ಕೆಲ ಆತಂಕಗಳನ್ನು ವ್ಯಕ್ತಪಡಿಸಿದಾಗ ಆಶ್ರಮವಾಸಿಗಳನ್ನು ಸ್ಥಳಾಂತರಿಸದಂತೆ ಅಥವಾ ಅವರನ್ನು ಸೌಲಭ್ಯ ವಂಚಿತರನ್ನಾಗಿ ಮಾಡದಂತೆ ನೋಡಿಕೊಳ್ಳಲು ಜಿಲ್ಲಾ ಪೊಲೀಸ್ ಆಯುಕ್ತರಿಗೆ ಪೀಠ ಸೂಚಿಸಿತು. ಅಲ್ಲದೆ ತಮ್ಮ ಮಗಳನ್ನು ಭೇಟಿಯಾಗಲು ಅರ್ಜಿದಾರರಿಗೆ ಅವಕಾಶ ನೀಡಿದ ನ್ಯಾಯಾಲಯ ಅವರಿಗೆ ಭದ್ರತೆ ಒದಗಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿತು. ಇದೇ ಆಶ್ರಮಕ್ಕೆ ಸಂಬಂಧಪಟ್ಟ ಇನ್ನಿತರ ಅರ್ಜಿಗಳೊಂದಿಗೆ ಈ ಮನವಿಯ ವಿಚಾರಣೆ ಗುರುವಾರ ನಡೆಯಲಿದೆ.