Horticulture Minister Muniratna
Horticulture Minister Muniratna 
ಸುದ್ದಿಗಳು

ಕಳಪೆ ಕಾಮಗಾರಿ, ನಕಲಿ ಬಿಲ್‌ ಸೃಷ್ಟಿ ಪ್ರಕರಣ: ವಿದೇಶ ಪ್ರವಾಸ ಕೈಗೊಳ್ಳಲು ಸಚಿವ ಮುನಿರತ್ನಗೆ ಅನುಮತಿಸಿದ ನ್ಯಾಯಾಲಯ

Bar & Bench

ಬೆಂಗಳೂರಿನ ರಸ್ತೆ ಅಭಿವೃದ್ಧಿಯೊಂದರ ವೇಳೆ ಕಳಪೆ ಕಾಮಗಾರಿ ಹಾಗೂ ನಕಲಿ ಬಿಲ್‌ ಸೃಷ್ಟಿಯ ಮೂಲಕ ಅಧಿಕಾರಿಗಳ ಜೊತೆ ಸೇರಿ ರಾಜ್ಯ ಸರ್ಕಾರಕ್ಕೆ ವಂಚಿಸಿದ ಆರೋಪ ಎದುರಿಸುತ್ತಿರುವ ಪ್ರಕರಣದಲ್ಲಿ ಜಾಮೀನಿನ ಮೇಲಿರುವ ತೋಟಗಾರಿಕಾ ಸಚಿವ ಮುನಿರತ್ನ ಅವರಿಗೆ 12 ದಿನಗಳ ಕಾಲ ವಿದೇಶ ಪ್ರವಾಸ ಕೈಗೊಳ್ಳಲು ಈಚೆಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿಸಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಮತ್ತು ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುವ ನಿಯೋಗದ ನೇತೃತ್ವವಹಿಸಿರುವುದರಿಂದ ಈ ಹಿಂದೆ ಜಾಮೀನು ನೀಡುವ ಸಂದರ್ಭದಲ್ಲಿ ವಿದೇಶ ಪ್ರಯಾಣ ಮಾಡುವಂತಿಲ್ಲ ಎಂದು ವಿಧಿಸಿರುವ ಷರತ್ತಿನಲ್ಲಿ ಸಡಿಲಿಕೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಧೀಶರಾದ ಬಿ ಜಯಂತ ಕುಮಾರ್‌ ಅವರು ಮಾನ್ಯ ಮಾಡಿದ್ದಾರೆ.

ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ಮುನಿರತ್ನ ಅವರು 2022ರ ಡಿಸೆಂಬರ್‌ 5ರಿಂದ 16ರವರೆಗೆ ನೆದರ್‌ಲ್ಯಾಂಡ್‌, ಬೆಲ್ಜಿಯಂ, ಸ್ವಿಟ್ಜರ್ಲೆಂಡ್‌, ಫ್ರಾನ್ಸ್‌ ಮತ್ತು ಇಟಲಿ ಪ್ರವಾಸ ಕೈಗೊಳ್ಳಲು ಅನುಮತಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ವಿದೇಶ ಪ್ರವಾಸದಿಂದ ಭಾರತಕ್ಕೆ ಮರಳಿದ 15 ದಿನಗಳ ಒಳಗೆ ವಿಮಾನ ಪ್ರವಾಸ ಅಸಲಿ ಟಿಕೆಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಯಾವ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ ಮತ್ತು ಸಂಪರ್ಕ ಸಂಖ್ಯೆ ನೀಡಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಪ್ರಕರಣದ ಹಿನ್ನೆಲೆ: ಬಿಬಿಎಂಪಿ ವಾರ್ಡ್‌ 4ರಲ್ಲಿ ಬರುವ ಎಂಎಸ್‌ಆರ್‌ ರಸ್ತೆಯಿಂದ ದಿವಾನರಪಾಳ್ಯ, ಜಯರಾಂ ಕೊಳಚೆ ರಸ್ತೆಯಲ್ಲಿ ಡಾಂಬರೀಕರಣದ ಗುತ್ತಿಗೆಯನ್ನು 2008-09ರ ಅವಧಿಯಲ್ಲಿ ಮುನಿರತ್ನ ಅವರಿಗೆ ನೀಡಲಾಗಿತ್ತು. ಆರೋಪಿ ಅಧಿಕಾರಿಗಳಾದ ಬಿ ಜಿ ಪ್ರಕಾಶ್‌ ಕುಮಾರ್‌, ವೈ ಎಂ ಮುನಿರಾಜು, ಎಂ ಕೆ ಹರೀಶ್‌ ಅವರ ಉಸ್ತುವಾರಿಯಲ್ಲಿ ಮುನಿರತ್ನ ಕಳಪೆ ಕಾಮಗಾರಿ ನಡೆಸಿದ್ದಲ್ಲದೇ ಅದನ್ನು ಪೂರ್ಣಗೊಳಿಸಿರಲಿಲ್ಲ. ಅದಾಗ್ಯೂ, ಅಧಿಕಾರಿಗಳು ಮುನಿರತ್ನ ನೀಡಿದ್ದ ಬಿಲ್‌ಗಳಿಗೆ ಅನುಮೋದನೆ ನೀಡಿದ್ದರು. ಆರೋಪಿ ಮುನಿರತ್ನ 70. 57 ಲಕ್ಷ ರೂಪಾಯಿ ಕೆಲಸ ಮಾಡಿದ್ದರೂ ನಾಲ್ವರು ಆರೋಪಿಗಳು ಸೇರಿಕೊಂಡು 75.24 ಲಕ್ಷ ರೂಪಾಯಿಗೆ ಕೆಲಸ ಮಾಡಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿದ್ದರು ಸಿಐಡಿ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ನ್ಯಾಯಾಲಯವು ಐಪಿಸಿ ಸೆಕ್ಷನ್‌ಗಳಾದ 120ಬಿ, 409, 465, 468, 477(ಎ), ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್‌ಗಳಾದ 13(1)(ಸಿ), (ಡಿ) ಜೊತೆಗೆ 13(2) ಅಡಿ ನಾಲ್ವರ ವಿರುದ್ಧ ಆರೋಪ ನಿಗದಿ ಮಾಡಿದೆ.