INC MLA N A Haris and Karnataka HC 
ಸುದ್ದಿಗಳು

ಬಿಡಿಎ ಜಾಗದಲ್ಲಿ ನಿರ್ಮಿಸಿದ್ದ ಮಳಿಗೆ ನೆಲಸಮ: ಹ್ಯಾರಿಸ್‌, ಆಯುಕ್ತರ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ದೂರುದಾರರೇ ಬಿಡಿಎ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಮಳಿಗೆ ನಿರ್ಮಿಸಿದ್ದರು. ಬಿಡಿಎ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯ ಭಾಗವಾಗಿ ಆ ಅನಧಿಕೃತ ಮಳಿಗೆಯನ್ನು ತೆರವು ಮಾಡಿ, ಜಾಗವನ್ನು ಹರಾಜು ಹಾಕಿದ್ದಾರೆ ಎಂದಿರುವ ನ್ಯಾಯಾಲಯ.

Bar & Bench

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ ಜಾಗದಲ್ಲಿ ನಿರ್ಮಾಣ ಮಾಡಿದ್ದ ಮಳಿಗೆಯನ್ನು ನೆಲಸಮಗೊಳಿಸಿ ಜಾಗವನ್ನು ಹರಾಜು ಹಾಕಿದಕ್ಕೆ ಬಿಡಿಎ ಅಧ್ಯಕ್ಷ ಎನ್ ಎ ‌ಹ್ಯಾರಿಸ್ ಹಾಗೂ ಆಯುಕ್ತರ ವಿರುದ್ದ ಖಾಸಗಿ ವ್ಯಕ್ತಿ ದಾಖಲಿಸಿದ್ದ ದೂರು ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಯನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಬಿಡಿಎ ಅಧ್ಯಕ್ಷ ಎನ್ ಎ ಹ್ಯಾರಿಸ್, ಆಯುಕ್ತರು, ಬಿಡಿಎ ಬೆಂಗಳೂರು ಪೂರ್ವ ವಲಯದ ಕಾರ್ಯಕಾರಿ ಎಂಜಿನಿಯರ್, ಸಹಾಯಕ ಕಾರ್ಯಕಾರಿ ಮತ್ತು ಸಹಾಯಕ ಎಂಜಿನಿಯರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಅರ್ಜಿಯಲ್ಲಿ ಮೊದಲನೇ‌ ಪ್ರತಿವಾದಿಯಾದ  ಸಯ್ಯದ್ ಇಬ್ರಾಹಿಂ‌ ಎಂಬಾತ ವಿಚಾರಣಾಧೀನ ನ್ಯಾಯಾಲಯಕ್ಕೆ ಖಾಸಗಿ ದೂರು‌ ದಾಖಲಿಸಿ, ನೀಲಸಂದ್ರದ ವಿವೇಕ ನಗರದಲ್ಲಿ‌ತಮಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿದ್ದ ಮಳಿಗೆಯನ್ನು ಬಿಡಿಎ ಅಕ್ರಮವಾಗಿ ನೆಲಸಮ ಮಾಡಿದೆ ಎಂದು ಆರೋಪಿಸಿದ್ದರು. ಬಳಿಕ ಜಾಗವನ್ನು ಹರಾಜು ಹಾಕುವುದಾಗಿ ತಿಳಿಸಿ‌ ಬಿಡಿಎ ಹೊರಡಿಸಿದ್ದ ನೋಟಿಸ್ ಅನ್ನು ಪ್ರಶ್ನಿಸಿ‌‌ ಹೈಕೋರ್ಟ್‌ಗೆ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹಿಂಪಡೆದು ಬಿಡಿಎ ಅಧ್ಯಕ್ಷರು ಹಾಗೂ ಆಯುಕ್ತರಿಂದ ಹಿಡಿದು ಕೆಳ‌ಹಂತದ ಅಧಿಕಾರಿಗಳವರೆಗೆ ಎಲ್ಲರನ್ನು ಆರೋಪಿಗಳನ್ನಾಗಿ ಮಾಡಿ ವಿಚಾರಣಾಧೀನ ನ್ಯಾಯಲಯಕ್ಕೆ ಖಾಸಗಿ ದೂರು ದಾಖಲಿಸಿದ್ದಾರೆ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

ಅಲ್ಲದೇ, ಬಿಡಿಎ ಜಾಗದಲ್ಲಿ ದೂರದಾರರು ಅನಧಿಕೃತವಾಗಿ ನಿರ್ಮಿಸಲಾಗಿದ್ದ ಮಳಿಗೆಯನ್ನು ಅರ್ಜಿದಾರ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆ  ಭಾಗವಾಗಿ ನೆಲಸಮ‌ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸದೆ ನೇರವಾಗಿ ದೂರಿನ ಕುರಿತು ಉತ್ತರಿಸುವಂತೆ ಸೂಚಿಸಿ ವಿಚಾರಣಾಧೀನ ನ್ಯಾಯಾಲಯವು ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿದೆ.‌‌ ಈ ಕ್ರಮ ಸರಿಯಿಲ್ಲ ಎಂದು ಪೀಠ ಹೇಳಿದೆ.

ದೂರುದಾರರೇ ಬಿಡಿಎ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಮಳಿಗೆ ನಿರ್ಮಿಸಿದ್ದರು. ಬಿಡಿಎ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯ ಭಾಗವಾಗಿ ಆ ಅನಧಿಕೃತ ಮಳಿಗೆಯನ್ನು ತೆರವು ಮಾಡಿ, ಜಾಗವನ್ನು ಹರಾಜು ಹಾಕಿದ್ದಾರೆ. ಹೀಗಿದ್ದರೂ ಅರ್ಜಿದಾರರ ಮೇಲೆ ಖಾಸಗಿ ದೂರು ದಾಖಲಿಸಿರುವುದು ಕಾನೂನಿನ ಸ್ಪಷ್ಟ ದುರುಪಯೋಗವಾಗಿದೆ. ಈ ದೂರಿನ ವಿಚಾರಣೆ ಮುಂದುವರಿಸಲು ಅನುಮತಿಸಿದರೆ, ಅದು  ಅರ್ಜಿದಾರರಿಗೆ ಅನ್ಯಾಯ ಉಂಟು ಮಾಡಿದಂತಾಗಲಿದೆ ಎಂದು ತಿಳಿಸಿದ ಪೀಠವು ಅರ್ಜಿದಾರ ವಿರುದ್ದದ ಖಾಸಗಿ ದೂರಿಗೆ ಸಂಬಂಧಿಸಿದ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿದೆ.