Supreme Court 
ಸುದ್ದಿಗಳು

'ನಾಲ್ಕು ದಶಕಗಳಿಂದ ಬಾಕಿ ಇರುವ ಬೆಂಗಳೂರು ನೀರು ಸರಬರಾಜು ಪ್ರಕರಣದ ತೀರ್ಪು ಮರುಪರಿಶೀಲಿಸಬೇಕೆ?' ಸುಪ್ರೀಂ ಪ್ರಶ್ನೆ

ಕುತೂಹಲಕಾರಿ ಸಂಗತಿ ಎಂದರೆ ಪ್ರಸ್ತುತ ಸಿಜೆಐ ಡಿ ವೈ ಚಂದ್ರಚೂಡ್ ಅವರ ತಂದೆ ನ್ಯಾ ವೈ ವಿ ಚಂದ್ರಚೂಡ್ 1978ರಲ್ಲಿ ಬೆಂಗಳೂರು ನೀರು ಸರಬರಾಜು ಪ್ರಕರಣದ ತೀರ್ಪು ನೀಡಿದ ಪೀಠದಲ್ಲಿದ್ದರು.

Bar & Bench

ನಲವತ್ತೈದು ವರ್ಷಗಳಿಂದ ಅಂದರೆ 1978ರಿಂದ ಬಾಕಿ ಉಳಿದಿರುವ ಬೆಂಗಳೂರು ನೀರು ಸರಬರಾಜು ಪ್ರಕರಣದ ತೀರ್ಪನ್ನು ಈಗ ಮರುಪರಿಶೀಲಿಸಬೇಕೆ ಎಂದು ಎಂದು ಸುಪ್ರೀಂ ಕೋರ್ಟ್ ಗುರುವಾರ ಕೇಳಿದೆ [ಉತ್ತರ ಪ್ರದೇಶ ಸರ್ಕಾರ ಮತ್ತು ಜೈ ಬೀರ್‌ ಸಿಂಗ್‌ ನಡುವಣ ಪ್ರಕರಣ].

ವಿಚಾರಣಾ ಪ್ರಕ್ರಿಯಾ ನಿರ್ದೇಶನಗಳನ್ನು ನೀಡುವುದಕ್ಕಾಗಿ ಇಂದು ಪಟ್ಟಿ ಮಾಡಲಾಗಿದ್ದ ಬೇರೊಂದು ದಾವೆಯಾದ ಉತ್ತರ ಪ್ರದೇಶ ಸರ್ಕಾರ ಮತ್ತು ಜೈ ಬೀರ್‌ ಸಿಂಗ್‌ ನಡುವಣ ಪ್ರಕರಣದ ವಿಚಾರಣೆ ನಡೆಸುವಾಗ ನ್ಯಾಯಾಲಯ ಈ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ಪರಿಗಣಿಸಿತು.

ಜೈ ಬೀರ್‌ ಸಿಂಗ್‌ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ಒಂಬತ್ತು  ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸಲಿದೆ. ಈ ಪ್ರಕರಣದ ಮುಖ್ಯ ಪ್ರಶ್ನೆ ಎಂದರೆ ಕೈಗಾರಿಕಾ ವಿವಾದಗಳ ಕಾಯಿದೆ-1947ರ  ಸೆಕ್ಷನ್ 2 (ಜೆ) ಅಡಿ ಉದ್ಯಮವನ್ನು ಹೆಚ್ಚು ನಿರ್ಬಂಧಿತ ಪದಗಳಲ್ಲಿ ವ್ಯಾಖ್ಯಾನಿಸಬೇಕೆ ಎಂಬುದಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಅಟಾರ್ನಿ ಜನರಲ್‌ ಅವರಿಗೆ ನೋಟಿಸ್‌ ಜಾರಿ ಮಾಡಿ ಕೇಂದ್ರ ಸರ್ಕಾರವನ್ನು ಪ್ರಕರಣದಲ್ಲಿ ಪಕ್ಷಕಕಾರರನ್ನಾಗಿ ಮಾಡಿಕೊಳ್ಳುವಂತೆ ಸೂಚಿಸುವಾಗ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಅವರು ಪ್ರಕರಣದ ವಿಚಾರವಾಗಿ ಈ ಕೆಳಗಿನಂತೆ ಅವಲೋಕನ ಮಾಡಿದರು:

“ಬೆಂಗಳೂರು ನೀರು ಸರಬರಾಜು ಪ್ರಕರಣ 45 ವರ್ಷಗಳಿಂದ ಇದ್ದು ಅದನ್ನು ಪರಿಶೀಲಿಸುವ ಅಗತ್ಯವಿದೆಯೇ, ಪರಿಶೀಲಿಸದೇ ಇರುವುದರಿಂದ ಸಾರ್ವಜನಿಕರಿಗೆ ಆಗುವ ದೊಡ್ಡ ಹಾನಿಯಾದರೂ ಏನು ಎಂಬುದನ್ನು ನೋಡಬೇಕು” ಎಂದು ಕೇಳಿದರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಎ ರಾಜಪ್ಪ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 1978ರಲ್ಲಿ ಏಳು ನ್ಯಾಯಮೂರ್ತಿಗಳ ಪೀಠವು ಕೈಗಾರಿಕಾ ವ್ಯಾಜಗಳ ಕಾಯಿದೆಯಡಿ ವಿಶಾಲ ಅರ್ಥದಲ್ಲಿ 'ಉದ್ಯಮ' ಎಂಬ ಪದಕ್ಕೆ ವ್ಯಾಪಕ ವ್ಯಾಖ್ಯಾನ ನೀಡಬೇಕಾಗಿದೆ ಎಂದು ಹೇಳಿತ್ತು. ಅದರಂತೆ, ಲಾಭದ ಉದ್ದೇಶವನ್ನು ಲೆಕ್ಕಿಸದೆ ಪ್ರತಿಯೊಂದು ವೃತ್ತಿಯನ್ನು 'ಉದ್ಯಮ' ವ್ಯಾಖ್ಯಾನದೊಳಗೆ ಸೇರಿಸಲಾಯಿತು ಉದ್ಯಮವನ್ನು ಹೆಚ್ಚು ನಿರ್ಬಂಧಿತವಾಗಿ ವ್ಯಾಖ್ಯಾನಿಸಿ ಅದನ್ನು ತಯಾರಿಕಾ ಘಟಕಗಳಿಗೆ ಮಾತ್ರ ಸೀಮಿತಗೊಳಿಸುವಂತೆ ಹಲವು ಪ್ರಕರಣಗಳಲ್ಲಿ ವ್ಯಾಖ್ಯಾನಿಸಲಾಗಿತ್ತು.

ಬೆಂಗಳೂರು ನೀರು ಸರಬರಾಜು ಪ್ರಕರಣದ ಬಹುಮತದ ತೀರ್ಪು ಸರ್ವಾನುಮತದಿಂದ ಕೂಡಿಲ್ಲ ಎಂದು  2005ರಲ್ಲಿ ತಿಳಿಸಿದ್ದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಬೆಂಗಳೂರು ನೀರು ಸರಬರಾಜು ಪ್ರಕರಣದಲ್ಲಿನ ತೀರ್ಪನ್ನು ಮರುಪರಿಶೀಲಿಸುವಂತೆ ಸೂಚಿಸಿತ್ತು.