Kiren Rijiju (Arbitrator's Handbook) 
ಸುದ್ದಿಗಳು

"ದೇಶ ನಡೆಸಬೇಕಿರುವುದು ನ್ಯಾಯಾಂಗವೇ ಅಥವಾ ಚುನಾಯಿತ ಸರ್ಕಾರವೇ?" ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಪ್ರಶ್ನೆ

ನ್ಯಾಯಾಂಗವೇ ನಿಯಮಾವಳಿ ರೂಪಿಸಲು ಹೊರಡುವುದಾದರೆ, ಎಲ್ಲಿ ರಸ್ತೆ ನಿರ್ಮಿಸಬೇಕೆಂದು ನಿರ್ಧರಿಸಲು ಮುಂದಾಗುವುದಾದರೆ, ಸೇವಾ ನಿಯಮಗಳಿಗೆ ಕೈ ಹಾಕುವುದಾದರೆ ಸರ್ಕಾರ ಇರುವುದಾದರೂ ಏತಕ್ಕೆ ಎಂದು ಅವರು ಪ್ರಶ್ನಿಸಿದರು.

Bar & Bench

ನ್ಯಾಯಾಂಗ ಕಾರ್ಯಾಂಗದ ಕ್ಷೇತ್ರ ಪ್ರವೇಶಿಸುವ ಮೂಲಕ ತನ್ನ ಎಲ್ಲೆ ಮೀರಬಾರದು ಬದಲಿಗೆ ದೇಶ ನಡೆಸುವ ಕೆಲಸವನ್ನು ಚುನಾಯಿತ ಪ್ರತಿನಿಧಿಗಳಿಗೆ ಬಿಡಬೇಕು ಎಂದು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಅವರು ಆಗ್ರಹಿಸಿದ್ದಾರೆ.

ಮುಂಬೈನಲ್ಲಿ ಶುಕ್ರವಾರ ನಡೆದ ʼಇಂಡಿಯಾ ಟುಡೆ ಕಾನ್‌ಕ್ಲೇವ್‌ʼ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಸಂಪೂರ್ಣ ಬದ್ಧವಾಗಿರುವಾಗ, ನ್ಯಾಯಾಂಗ ತನ್ನ ಸಾಂವಿಧಾನಿಕ ಎಲ್ಲೆಗಳನ್ನು ಗೌರವಿಸಿ ದೇಶದ ಹಿತದೃಷ್ಟಿಯಿಂದ ಲಕ್ಷ್ಮಣ ರೇಖೆ ದಾಟಬಾರದು ಎಂದು ಕಿರೆನ್‌ ತಿಳಿಸಿದರು.

ಸಚಿವರ ಮಾತಿನ ಪ್ರಮುಖಾಂಶಗಳು

  • ನಾವು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿದ್ದು, ಭಾರತ  ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ರಾಷ್ಟ್ರದ ಸಾರ್ವಭೌಮತ್ವವು ದೇಶದ ಜನರಲ್ಲಿ ಅಡಕವಾಗಿದೆ. ಭಾರತದ ಜನ ತಮ್ಮನ್ನು ತಾವು ಆಳಿಕೊಳ್ಳುತ್ತಾರೆ, ತಮ್ಮನ್ನು ತಾವು ಹೇಗೆ ಆಳಿಕೊಳ್ಳಬೇಕು ಎಂದು ಜನ ನಿರ್ಧರಿಸುತ್ತಾರೆ. ಚುನಾಯಿತ ಪ್ರತಿನಿಧಿಗಳ ಮೂಲಕ ಜನ ತಮ್ಮನ್ನು ತಾವು ಆಳಿಕೊಳ್ಳುತ್ತಾರೆ. ಹಾಗಾಗಿ, ದೇಶವನ್ನು ಯಾರು ನಡೆಸಬೇಕು? ನ್ಯಾಯಾಂಗ  ದೇಶವನ್ನು ನಡೆಸಬೇಕೆ ಅಥವಾ ಚುನಾಯಿತ ಸರ್ಕಾರ ನಡೆಸಬೇಕೆ?

  • ನ್ಯಾಯಾಂಗವೇ ನಿಯಮಾವಳಿ ರೂಪಿಸಲು ಹೊರಡುವುದಾದರೆ, ಎಲ್ಲಿ ರಸ್ತೆ ನಿರ್ಮಿಸಬೇಕೆಂದು ನಿರ್ಧರಿಸಲು ಮುಂದಾಗುವುದಾದರೆ, ಸೇವಾ ನಿಯಮಗಳಿಗೆ ಕೈ ಹಾಕುವುದಾದರೆ ಸರ್ಕಾರವಾದರೂ ಏತಕ್ಕಾಗಿ ಇರಬೇಕು?

  • ಕೋವಿಡ್‌ ವೇಳೆ ಕೊರೊನಾ ಸಂಬಂಧಿತ ವ್ಯವಹಾರಗಳನ್ನು ನಡೆಸಲು ತಜ್ಞರ ಸಮಿತಿ ರಚಿಸಬೇಕು ಎಂದು ದೆಹಲಿ ಹೈಕೋರ್ಟ್‌ನ ಪೀಠವೊಂದು ನಿರ್ದೇಶಿಸಿತು. ನಂತರ ನಾವು ಸಾಲಿಸಿಟರ್‌ ಜನರಲ್‌ (ತುಷಾರ್‌ ಮೆಹ್ತಾ) ಅವರನ್ನುದ್ದೇಶಿಸಿ ದಯವಿಟ್ಟು ಹಾಗೆ ನಿರ್ದೇಶಿಸುವುದು ನ್ಯಾಯಾಲಯದ ಕೆಲಸವಲ್ಲ ಎಂದು ಪೀಠಕ್ಕೆ ತಿಳಿಸುವಂತೆ ಹೇಳಿದೆವು. ನ್ಯಾಯಾಂಗ ಹಾಗೆ ಆದೇಶಿಸಲು ಸಾಧ್ಯವಿಲ್ಲ. ನಮ್ಮೆದುರು ನಿಲ್ಲುವ ಸವಾಲುಗಳನ್ನು ನಿಭಾಯಿಸಲು ಸರ್ಕಾರವೇ ಉತ್ತಮ ಸ್ಥಾನದಲ್ಲಿದೆ.

  • ದೇಶದ್ರೋಹ ಕಾನೂನನ್ನು ಬದಲಾಯಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ನಾವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆವು. ಅದರ ಹೊರತಾಗಿಯೂ ಸುಪ್ರೀಂ ಕೋರ್ಟ್ ದೇಶದ್ರೋಹ ಕಾನೂನಿನ ನಿಬಂಧನೆಗಳನ್ನು ರದ್ದುಗೊಳಿಸಿತು. ನನಗೆ ಅದರ ಬಗ್ಗೆ ತುಂಬಾ ಅಸಮಾಧಾನ ಇದೆ. ಇವುಗಳು ನನಗೆ ನಿಜವಾಗಿಯೂ ಅತೃಪ್ತಿ ತರುವ ವಿಚಾರಗಳು. ನಾವು ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಕಠೋರವಾಗಿ ನಡೆದುಕೊಂಡು ನ್ಯಾಯಾಂಗದ ಮಾತನ್ನು ಕೇಳುತ್ತಿಲ್ಲ ಎಂದಾದರೆ ಆಗ ನ್ಯಾಯಾಂಗ ನಮ್ಮನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಬಹುದು. ಈಗಾಗಲೇ (ಕಾನೂನು ಕುರಿತು) ಪರಿಶೀಲನೆ ನಡೆಸುತ್ತಿರುವುದಾಗಿ ನಾವು ಹೇಳಿದ ಮೇಲೆಯೂ, ಉತ್ತಮ ನಿಯಮಾವಳಿ ನಿರೂಪಿಸುತ್ತೇವೆ ಎಂದು ತಿಳಿಸಿದ ನಂತರವೂ ನ್ಯಾಯಾಂಗ ಈ ತೀರ್ಪು ನೀಡುತ್ತದೆ ಎನ್ನುವುದಾದರೆ ಅದು ಒಳ್ಳೆಯ ಸಂಗತಿಯಲ್ಲ. ಹೀಗಾಗಿ ಆಗ ಕೂಡ ನಾನು ಪ್ರತಿಕ್ರಿಯಿಸಿದ್ದೆ. ಎಲ್ಲರಿಗೂ ಲಕ್ಷ್ಮಣ ರೇಖೆ ಇದೆ. ರಾಷ್ಟ್ರದ ಹಿತದೃಷ್ಟಿಯಿಂದ ಲಕ್ಷ್ಮಣ ರೇಖೆ ದಾಟಬಾರದು ಎಂದು.

  • ನಮ್ಮ ಸರ್ಕಾರ, ಅತ್ಯಂತ ಪ್ರಜಾಸತ್ತಾತ್ಮಕವಾಗಿದ್ದು,  ನಾವು ನ್ಯಾಯಾಂಗವನ್ನು ಗೌರವಿಸುತ್ತೇವೆ. ನಾವು ನ್ಯಾಯಾಂಗದ ಸಂಪೂರ್ಣ ಸ್ವಾತಂತ್ರ್ಯದಲ್ಲಿ ನಂಬಿಕೆ ಇರಿಸಿದ್ದೇವೆ. ಕಳೆದ ಎಂಟೂವರೆ ವರ್ಷಗಳಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ  ನ್ಯಾಯಾಂಗದ ಅಧಿಕಾರ ದುರ್ಬಲಗೊಳಿಸುವಂತಹ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ನನ್ನನ್ನು ನಂಬಿ. ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಿಸಬೇಕು ಮತ್ತು ಉತ್ತೇಜಿಸಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ.

  • ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ನನಗೆ ದೊಡ್ಡ ಚಿಂತೆ ತಂದೊಡ್ಡಿದ್ದು ವ್ಯಕ್ತಿಯೊಬ್ಬ (ವಿಚಾರಣಾ) ದಿನಕ್ಕಾಗಿ 20-25 ವರ್ಷ ಕಾಯುವುದು ಆತಂಕಕಾರಿ ಸಂಗತಿ ಆಗವುದಿಲ್ಲವೇ?