ಸುದ್ದಿಗಳು

ಆಮ್ಲಜನಕ ಕೊರತೆ: ನ್ಯಾಯಾಂಗ ನಿಂದನೆ ಏಕೆ ಹೂಡಬಾರದು ಎಂಬುದಕ್ಕೆ ಕಾರಣ ಕೊಡಿ ಎಂದು ಕೇಂದ್ರಕ್ಕೆ ಕೇಳಿದ ದೆಹಲಿ ಹೈಕೋರ್ಟ್

Bar & Bench

ಆಮ್ಲಜನಕ ಪೂರೈಕೆಗೆ ಸಂಬಂಧಿಸಿದ ಆದೇಶಗಳನ್ನು ಪಾಲಿಸದೇ ಇರುವುದಕ್ಕಾಗಿ ನಿಮ್ಮ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಬಾರದು ಎಂಬುದಕ್ಕೆ ಕಾರಣ ನೀಡಿ ಎಂದು ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ನ್ಯಾಯಾಂಗದ ಆದೇಶದ ಹೊರತಾಗಿಯೂ ದೆಹಲಿ ಸರ್ಕಾರಕ್ಕೆ ಸೂಕ್ತ ಆಮ್ಲಜನಕ ಪೂರೈಕೆಯಾಗಿಲ್ಲ ಎಂದು ದೆಹಲಿ ಸರ್ಕಾರದ ಪರ ವಕೀಲ ರಾಹುಲ್‌ ಮೆಹ್ರಾ ಅವರು ತಿಳಿಸಿದಾಗ ನ್ಯಾಯಾಲಯ ಈ ಸೂಚನೆ ನೀಡಿತು.

ರಾಷ್ಟ್ರ ರಾಜಧಾನಿಗೆ 700 ಮೆಟ್ರಿಕ್‌ ಟನ್ ಆಮ್ಲಜನಕ ಪೂರೈಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನಾಗಲೀ 490 ಮೆ.ಟನ್ ಆಮ್ಲಜನಕ ಸರಬರಾಜು ಮಾಡುವಂತೆ ತಾನು ನೀಡಿದ್ದ ಆದೇಶವನ್ನಾಗಲೀ ಇದುವರೆಗೆ ಪಾಲಿಸಿಲ್ಲ ಎಂಬುದನ್ನು ನ್ಯಾಯಾಲಯ ದಾಖಲಿಸಿತು.

ಅಲ್ಲದೆ ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ರೇಖಾ ಪಲ್ಲಿ ಅವರಿದ್ದ ಪೀಠ ಮುಂದಿನ ವಿಚಾರಣೆ ವೇಳೆಗೆ ಕೇಂದ್ರ ಸರ್ಕಾರದ ಪ್ರತಿನಿಧಿಗಳಾದ ಪೀಯುಷ್ ಗೋಯಲ್ ಮತ್ತು ಸುಮಿತಾ ದಾವ್ರಾ ಅವರು ಹಾಜರಿರಬೇಕೆಂದು ಆದೇಶಿಸಿತು.

ದೆಹಲಿಗೆ 700 ಮೆ.ಟನ್ ಸರಬರಾಜು ಮಾಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ವಾದಿಸುತ್ತಿದ್ದಂತೆ, ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಸುಪ್ರೀಂಕೋರ್ಟ್‌ ಆದೇಶದ ಮೇಲೆ ಸುಮ್ಮನೆ ಕಣ್ಣಾಡಿಸಿದರೆ ಸಾಕು ಅದು ಜನರ ಒಳಿತಿಗಾಗಿ ಏನನ್ನಾದರೂ ಮಾಡುವಂತೆ ಹೇಳಿರುವುದು ವೇದ್ಯವಾಗುತ್ತದೆ ಎಂದಿತು.

ದೆಹಲಿಯ 700 ಮೆ.ಟನ್ ಆಮ್ಲಜನಕ ಬೇಡಿಕೆಯನ್ನು ಒಪ್ಪಿಕೊಳ್ಳಲಾಗದು ಎಂಬ ಕೇಂದ್ರದ ನಿಲುವನ್ನು ನ್ಯಾಯಾಲಯ ಮತ್ತಷ್ಟು ಖಂಡಿಸಿತು. ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳ ಬೆಳಕಿನಲ್ಲಿ ದೆಹಲಿ ಸರ್ಕಾರಕ್ಕೆ ದಿನವೊಂದಕ್ಕೆ 700 ಮೆ.ಟನ್ ಆಮ್ಲಜನಕ ಪೂರೈಸಲಾಗದು ಎಂಬ ವಾದವನ್ನು ಒಪ್ಪುವುದಿಲ್ಲ. ಆಮ್ಲಜನಕದ ಕೊರತೆಯನ್ನು ತುಂಬಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದಿತು.

“ನಿತ್ಯ ಕಠೋರ ವಾಸ್ತವವನ್ನು ನೋಡುತ್ತಿದ್ದೇವೆ. ಆಸ್ಪತ್ರೆ ಹಾಸಿಗೆಗಳ ಸಂಖ್ಯೆ ಕಡಿಮೆಗೊಳಿಸಲಾಗುತ್ತಿದೆ. ಒಂದೆಡೆ ಹೆಚ್ಚುತ್ತಿರುವ ಕೋವಿಡ್‌ ಪೀಡಿತರಿಗೆ ತಕ್ಕಂತೆ ಆಸ್ಪತ್ರೆ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಿದೆ. ಮತ್ತೊಂದೆಡೆ ಈಗಿರುವ ಮೂಲಸೌಕರ್ಯಗಳು ಕುಸಿಯುತ್ತಿದ್ದು ಲಭ್ಯ ಇರುವ ಹಾಸಿಗೆಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ” ಎಂದು ಪೀಠ ಬೇಸರ ವ್ಯಕ್ತಪಡಿಸಿತು.

ತನ್ನ ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಕ್ರಮಗಳನ್ನು ಎದುರಿಸಬೇಕಾದೀತು ಎಂದು ಪೀಠ ಈ ಹಿಂದಿನ ವಿಚಾರಣೆ ವೇಳೆ ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.