Aaj Tak and Saket District Courts
Aaj Tak and Saket District Courts 
ಸುದ್ದಿಗಳು

ಶ್ರದ್ಧಾ ಹತ್ಯೆ: ಆರೋಪಿಯ ಮಂಪರು ಪರೀಕ್ಷೆ ಆಡಿಯೋ ಪ್ರಸಾರ ಮಾಡದಂತೆ ಆಜ್ ತಕ್‌ ವಾಹಿನಿಗೆ ದೆಹಲಿ ನ್ಯಾಯಾಲಯದ ನಿರ್ಬಂಧ

Bar & Bench

ತನ್ನ ಸಹಜೀವನ (ಲಿವ್‌-ಇನ್) ಸಂಗಾತಿ ಶ್ರದ್ಧಾ ವಾಲ್ಕರ್‌ ಅವರನ್ನು ಬರ್ಬರವಾಗಿ ಕೊಂದ ಆರೋಪಿ ಅಫ್ತಾಬ್‌ ಪೂನಾವಾಲಾನ ಮಂಪರು ಪರೀಕ್ಷೆಯ ಆಡಿಯೊ ಪ್ರಸಾರ ಮಾಡದಂತೆ ಆಜ್‌ ತಕ್‌ ಟೆಲಿವಿಷನ್‌ ನೆಟ್‌ವರ್ಕ್‌ಗೆ ದೆಹಲಿ ನ್ಯಾಯಾಲಯ ಸೋಮವಾರ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.

ಎಫ್‌ಐಆರ್‌ಗೆ ಸಂಬಂಧಿಸಿದ ವಿಚಾರಗಳನ್ನು ಪ್ರಸಾರ ಮಾಡದಂತೆ ಆಜ್ ತಕ್ ಹಾಗೂ ಇತರ ಮಾಧ್ಯಮ ಚಾನೆಲ್‌ಗಳಿಗೆ ಆದೇಶ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸಾಕೇತ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ರಾಕೇಶ್ ಕುಮಾರ್ ಸಿಂಗ್ ಈ ಆದೇಶ ನೀಡಿದ್ದಾರೆ.

“ವ್ಯಕ್ತಿಯ ಜೀವನ ಮತ್ತು ಸ್ವಾತಂತ್ರ್ಯ ರಕ್ಷಿಸುವ ಸಂವಿಧಾನದ 21ನೇ ವಿಧಿ ಅಂತಹ ವ್ಯಕ್ತಿಯ ಮಾನಸಿಕ ಸ್ಥಿತಿಯ ರಕ್ಷಣೆ ಕುರಿತಂತೆಯೂ ಆಲೋಚಿಸುತ್ತದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸೂಕ್ಷ್ಮ ಮಾಹಿತಿಯ ಪ್ರಸಾರ ಖಂಡಿತವಾಗಿಯೂ ಆರೋಪಿಗಳ ಮೇಲೆ ಮತ್ತು ಸಂತ್ರಸ್ತೆಯ ಕುಟುಂಬದ ಮೇಲೆ ಮಾನಸಿಕ ಪರಿಣಾಮಗಳನ್ನು ಉಂಟುಮಾಡುತ್ತದೆ“ ಎಂದು ನ್ಯಾಯಾಲಯ ವಿವರಿಸಿದೆ.

ಆದರೂ ಎರಡೂ ಕಡೆಯವರು ತಮ್ಮ ವಾದ ಮಂಡಿಸಲು ಅನುವಾಗುವಂತೆ ಅರ್ಜಿಯನ್ನು ಸುದೀರ್ಘವಾಗಿ ಆಲಿಸುವ ಅಗತ್ಯವಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಹೀಗಾಗಿ, ಸದ್ಯಕ್ಕೆ ಆಡಿಯೊ ಪ್ರಸಾರ ಮಾಡದಂತೆ ಸುದ್ದಿ ವಾಹಿನಿಗೆ ನಿರ್ಬಂಧ ವಿಧಿಸಿದ ನ್ಯಾಯಾಲಯ, ಅರ್ಜಿಯ ಪ್ರತಿಯನ್ನು ಆಜ್‌ತಕ್‌ಗೆ ನೀಡಲು ರಾಜ್ಯ ಸರ್ಕಾರಕ್ಕೆ ಸೂಚಿಸಿತು ಮತ್ತು ತನ್ನ ಪ್ರತಿಕ್ರಿಯೆ ಸಲ್ಲಿಸಲು ಅದಕ್ಕೆ ಅವಕಾಶ ನೀಡಿತು. ನ್ಯಾಯಾಲಯ ವಿವರವಾದ ವಿಚಾರಣೆ ಕೈಗೆತ್ತಿಕೊಳ್ಳುವ ಏಪ್ರಿಲ್ 17ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ.

ಬಂಬಲ್‌ ಡೇಟಿಂಗ್‌ ಅಪ್ಲಿಕೇಷನ್‌ ಮೂಲಕ  ಭೇಟಿಯಾದ ಅಫ್ತಾಬ್‌- ಶ್ರದ್ಧಾ ಜೋಡಿ ಸಹಜೀವನ ನಡೆಸಿದ್ದರು. ಮೂಲತಃ ಮುಂಬೈ ನಿವಾಸಿಗಳಾಗಿದ್ದ ಈ ಜೋಡಿ ಕಳೆದ ವರ್ಷದ ಮೊದಲ ಭಾಗದಲ್ಲಿ ದೆಹಲಿಗೆ ಸ್ಥಳಾಂತರಗೊಂಡಿದ್ದರು.

ಪೊಲೀಸರ ಪ್ರಕಾರ, ಕಳೆದ ವರ್ಷ ಮೇ 18 ರಂದು ಮೆಹ್ರೌಲಿಯ ಬಾಡಿಗೆ ಫ್ಲಾಟ್‌ನಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು. ಆರೋಪಿ ಸಂತ್ರಸ್ತೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ ನಂತರ. ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಜ್‌ನಲ್ಲಿ ಇರಿಸಿದ್ದ. ಕೊಲೆ ನಡೆದ ಹದಿನೆಂಟು ದಿನಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಆ ತುಂಡುಗಳನ್ನು ಎಸೆದು ಬಂದಿದ್ದ ಆರೋಪ ಆತನ ಮೇಲಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

State_v_Aftab_Amin_Poonawala.pdf
Preview