ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಕ್ರಿಮಿನಲ್ ತನಿಖೆಯನ್ನು ಮುಕ್ತಾಯಗೊಳಿಸುವ ಎ ರಿಪೋರ್ಟನ್ನು ಪೊಲೀಸರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಫೋರ್ಜರಿ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂದಿ ಕಿರುತೆರೆ ನಟಿ ಶ್ವೇತಾ ತಿವಾರಿ ಅವರು ಈಚೆಗೆ ಹಿಂಪಡೆದಿದ್ದಾರೆ [ಶ್ವೇತಾ ತಿವಾರಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಡಿಸೆಂಬರ್ 18 ರಂದು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಪೊಲೀಸರು ಸಲ್ಲಿಸಿದ ಎ ರಿಪೋರ್ಟ್ ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಸಾರಂಗ್ ಕೊತ್ವಾಲ್ ಮತ್ತು ನೀಲಾ ಗೋಖಲೆ ಅವರಿದ್ದ ಪೀಠ ಅರ್ಜಿ ಹಿಂಪಡೆಯಲು ಶ್ವೇತಾ ಅವರಿಗೆ ಅವಕಾಶ ಮಾಡಿಕೊಟ್ಟಿತು.
ತಮ್ಮ ಮಗನೊಂದಿಗೆ 2017ರಲ್ಲಿ ಇಂಗ್ಲೆಂಡ್‌ಗೆ ಪ್ರಯಾಣಿಸುವುದಕ್ಕಾಗಿ ವೀಸಾ ಪಡೆಯಲು ನಟಿ ಎನ್ಒಸಿ ಪತ್ರಕ್ಕೆ ನನ್ನ ಸಹಿಯನ್ನು ಫೋರ್ಜರಿ ಮಾಡಿದ್ದರು ಎಂದು ಆಕೆಯ ಮಾಜಿ ಪತಿ ಹಾಗೂ ನಟ ಅಭಿನವ್ ಕೊಹ್ಲಿ ದೂರಿದ್ದರು. ಈ ಹಿನ್ನೆಲೆಯಲ್ಲಿ ಬ್ರಿಟಿಷ್ ಕಾನ್ಸುಲೇಟ್ ಶ್ವೇತಾ ಅವರ ವೀಸಾ ರದ್ದುಗೊಳಿಸಿತ್ತು.
ಅಲ್ಲದೆ ನಟಿಯ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರುಹೈಕೋರ್ಟ್ ಮೊರೆ ಹೋಗಿದ್ದರು.
ವೈಯಕ್ತಿಕ ಸಂಘರ್ಷದ ಪರಿಣಾಮ ಪತಿ ತನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಮ್ಮ ಮಗನ ಫಿಸಿಯೋಥೆರಪಿಗಾಗಿ ಮಾಜಿ ಪತಿಯ ಸಮ್ಮತಿ ಪಡೆದೇ 2018 ರಲ್ಲಿ ಪ್ರಯಾಣ ಬೆಳೆಸಿದ್ದೆ. ಆಗ ಕೊಹ್ಲಿ ಅವರೇ ಎನ್‌ಒಸಿಗೆ ಒಪ್ಪಿಗೆ ನೀಡಿ ಸಹಿ ಹಾಕಿದ್ದರು. ತಮ್ಮಿಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದ ಪರಿಣಾಮ ಮಗನನ್ನು ಮತ್ತೆ ವಿದೇಶಕ್ಕೆ ಕರೆದೊಯ್ಯಬಹುದು ಎಂಬ ಆತಂಕದಲ್ಲಿ ತಮ್ಮ ಮಾಜಿ ಪತಿ ತಮ್ಮ ವಿರುದ್ಧ ಫೋರ್ಜರಿ ಪ್ರಕರಣ ದಾಖಲಿಸಿದ್ದಾರೆ ಎಂದು ಶ್ವೇತಾ ತಿಳಿಸಿದ್ದರು.
ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಪೊಲೀಸರು ಈಚೆಗೆ ಪ್ರಕರಣ ಮುಕ್ತಾಯಗೊಳಿಸಿ ಎ ರಿಪೋರ್ಟ್ ಸಲ್ಲಿಸಿದ್ದರು. ಶ್ವೇತಾ ಅವರು ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದ ಹಿನ್ನೆಲೆಯಲ್ಲಿ ದಂಪತಿ 2019 ರಲ್ಲಿ ವಿಚ್ಛೇದನ ಪಡೆದಿದ್ದರು.
ಕಸೌತಿ ಜಿಂದಗಿ ಕೇ ಧಾರಾವಾಹಿಯ ಪ್ರೇರಣಾ ಶರ್ಮಾ ಪಾತ್ರ ಶ್ವೇತಾ ತಿವಾರಿ ಅವರಿಗೆ ಅತಿಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು. ಆಕೆ ಹಿಂದಿ ಬಿಗ್ ಬಾಸ್ 4 ಸೀಸನ್‌ನ ವಿಜೇತೆ ಕೂಡ.