Kripa Alva 
ಸುದ್ದಿಗಳು

ಸಿದ್ದರಾಮಯ್ಯ ನಕಲಿ ಸ್ಟಿಂಗ್ ವಿಡಿಯೊ ಪ್ರಕರಣ: ಅಮಾನತುಗೊಂಡಿರುವ ಕೃಪಾ ಆಳ್ವಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು

ಪವರ್ ಟಿವಿ ಕ್ಯಾಮೆರಾಮನ್ ಕೆವಿ ಪ್ರಶಾಂತ್ ಕುಮಾರ್ ಮತ್ತು ಮತ್ತೊಬ್ಬ ಆರೋಪಿ ವಿನೋದ್ ಕುಮಾರ್‌ಗೂ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು.

Bar & Bench

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದ್ದ ನಕಲಿ ಸ್ಟಿಂಗ್ ವಿಡಿಯೊ ಪ್ರಸಾರ ಪ್ರಕರಣದಲ್ಲಿ ಅಮಾನತುಗೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಪಾ ಆಳ್ವ, ಪವರ್ ಟಿವಿ ಕ್ಯಾಮೆರಾಮನ್ ಕೆವಿ ಪ್ರಶಾಂತ್ ಕುಮಾರ್ ಹಾಗೂ ವಿನೋದ್ ಕುಮಾರ್ ಅವರಿಗೆ ಬೆಂಗಳೂರಿನ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಶಂಕರಪ್ಪ ನಿಂಬಣ್ಣ ಕಲ್ಕಣಿ ಅವರು ನವೆಂಬರ್ 2ರಂದು ಈ ಆದೇಶ ಮಾಡಿದ್ದಾರೆ.

2025ರ ಸೆಪ್ಟೆಂಬರ್ 26ರಂದು ಆನ್‌ಲೈನ್‌ನಲ್ಲಿ ಪ್ರಸಾರವಾಗಿದ್ದ ವಿಡಿಯೊದಲ್ಲಿ, 2011ರಲ್ಲಿ ಸಿದ್ದರಾಮಯ್ಯ ಅವರಿಂದ ತಾನು ಸಂತ್ರಸ್ತೆಯಾಗಿದ್ದೇನೆ ಎಂದು ಹೇಳಿಕೊಂಡ ಮಹಿಳೆಯೊಂದಿಗೆ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಮತ್ತು ಕೃಪಾ ಆಳ್ವ ಸಂಭಾಷಣೆ ನಡೆಸುತ್ತಿರುವ ದೃಶ್ಯಗಳಿದ್ದವು ಎನ್ನಲಾಗಿದೆ.

ಈ ವಿಡಿಯೊ ನಕಲಿಯಾಗಿದ್ದು, ಸಿದ್ದರಾಮಯ್ಯ ಅವರನ್ನು ಬ್ಲ್ಯಾಕ್‌ಮೇಲ್ ಮಾಡುವ ಹಾಗೂ ಮಾನಹಾನಿ ಮಾಡುವ ಉದ್ದೇಶದಿಂದ ದುರುದ್ದೇಶಪೂರಿತ ಆರೋಪಗಳನ್ನು ಒಳಗೊಂಡ ವಿಡಿಯೋವನ್ನು ಅಪರಿಚಿತರು ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ಸಿದ್ದರಾಮಯ್ಯ ಅಕ್ಟೋಬರ್ 6ರಂದು ಪೊಲೀಸರಿಗೆ ದೂರು ನೀಡಿದ್ದರು.

ವಿಡಿಯೊ ಬೆಳಕಿಗೆ ಬಂದ ಬಳಿಕ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಕೃಪಾ ಆಳ್ವ ಅವರನ್ನು ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿತ್ತು.

ಕೃಪಾ ಆಳ್ವ ಅವರು ಅಕ್ಟೋಬರ್ 7, 10 ಮತ್ತು 18ರಂದು ತನಿಖಾಧಿಕಾರಿ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಪೂರ್ವಭಾವಿ ನೋಟಿಸ್‌ಗಳನ್ನು ನೀಡಿರಲಿಲ್ಲ ಎಂದು ಅವರ ಪರ ವಕೀಲರು ವಾದಿಸಿದರು.

ಪ್ರಥಮ ಮಾಹಿತಿ ವರದಿಯಲ್ಲಿ ಆರೋಪಿಸಿರುವಂತೆ ಆಳ್ವ ಅವರು ಯಾವುದೇ ಮಾನಹಾನಿಕರ ಹೇಳಿಕೆಗಳನ್ನು ನೀಡಿಲ್ಲ. ಆದರೂ ಅವರನ್ನು ಬಂಧಿಸಿ ವಶಕ್ಕೆ ಪಡೆಯುವ ಆತಂಕವಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

‘ಕರ್ನಾಟಕ ಹನಿಟ್ರ್ಯಾಪ್’ ಎಂಬ ಯೂಟ್ಯೂಬ್ ಚಾನೆಲ್‌ನ ಮಾಲೀಕರು, ಸೃಷ್ಟಿಕರ್ತರು ಅಥವಾ ನಿರ್ವಾಹಕರು ಕೃಪಾ ಆಳ್ವ ಅಲ್ಲ ಎಂಬುದನ್ನೂ ಅವರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಪವರ್ ಟಿವಿ ಕ್ಯಾಮೆರಾಮನ್ ಕೆವಿ ಪ್ರಶಾಂತ್ ಕುಮಾರ್ ತನಿಖೆಗೆ ಸಹಕರಿಸಿದ್ದು, ಪೊಲೀಸರು ಈಗಾಗಲೇ ಅವರ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರ ಪರ ವಕೀಲರು ವಾದಿಸಿದರು.

ಆರೋಪಿತ ಅಪರಾಧಗಳಲ್ಲಿ ಪ್ರಶಾಂತ್ ಕುಮಾರ್ ಯಾವುದೇ ಪಾತ್ರ ವಹಿಸಿಲ್ಲ. ಅವರು ವಿವಾದಿತ ಯೂಟ್ಯೂಬ್ ಚಾನೆಲ್‌ನ ಮಾಲೀಕ, ಸೃಷ್ಟಿಕರ್ತ ಅಥವಾ ನಿರ್ವಾಹಕರೂ ಅಲ್ಲ ಎಂದು ವಾದಿಸಲಾಗಿತ್ತು.

ವಿನೋದ್ ಕುಮಾರ್ ಅವರ ನಿವಾಸದಲ್ಲಿ ಶೋಧನಾ ವಾರಂಟ್ ಆಧರಿಸಿ ತನಿಖಾಧಿಕಾರಿಗಳು ಶೋಧ ನಡೆಸಿದ್ದು, ಅವರು ತನಿಖೆಗೆ ಸಹಕರಿಸಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದರು.

ಆರೋಪಿತ ಮಾನನಷ್ಟ ಕೃತ್ಯದಲ್ಲಿ ವಿನೋದ್ ಕುಮಾರ್ ಯಾವುದೇ ಪಾತ್ರ ಹೊಂದಿಲ್ಲ. ಅವರು ಯೂಟ್ಯೂಬ್ ಚಾನೆಲ್‌ನ ಮಾಲೀಕ, ಸೃಷ್ಟಿಕರ್ತ ಅಥವಾ ನಿರ್ವಾಹಕರಲ್ಲ ಎಂದು ವಾದಿಸಿದ್ದರು.

ಮಧ್ಯಂತರ ಆದೇಶದಲ್ಲಿ ನ್ಯಾಯಾಲಯವು ಆರೋಪಿಗಳ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವುದರ ಜೊತೆಗೆ ನ್ಯಾಯಸಮ್ಮತ ತನಿಖೆ ನಡೆಸಲು ಅಗತ್ಯವಾದ ಕಠಿಣ ಷರತ್ತುಗಳನ್ನು ವಿಧಿಸಬಹುದು ಎಂದು ಅಭಿಪ್ರಾಯಪಟ್ಟಿತು.

ಅದರಂತೆ, ಆರೋಪಿಗಳು ಬಂಧನಕ್ಕೊಳಗಾದಲ್ಲಿ ತಲಾ ₹1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಒಬ್ಬರು ಜಾಮೀನುದಾರರನ್ನು ಒದಗಿಸುವ ಷರತ್ತಿನ ಮೇಲೆ ಮೂವರು ಆರೋಪಿಗಳಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು.

ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 61 (ಕ್ರಿಮಿನಲ್ ಪಿತೂರಿ), ಸೆಕ್ಷನ್ 3(5) (ಸಾಮಾನ್ಯ ಉದ್ದೇಶದಡಿ ಜಂಟಿ ಹೊಣೆಗಾರಿಕೆ), ಸೆಕ್ಷನ್ 308(6) (ಸುಲಿಗೆ), ಸೆಕ್ಷನ್ 336(4) ಮತ್ತು 340(2) (ನಕಲಿ ದಾಖಲೆ ಸೃಷ್ಟಿ ಹಾಗೂ ನಕಲಿ ದಾಖಲೆ ಬಳಕೆಗೆ ಸಂಬಂಧಿಸಿದ ಅಪರಾಧಗಳು) ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66C (ಗುರುತಿನ ಕಳವು) ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.

ಇದೇ ಪ್ರಕರಣದಲ್ಲಿ ಅಕ್ಟೋಬರ್ 29ರಂದು ಜನತಾದಳ (ಜಾತ್ಯತೀತ) ಪಕ್ಷದ ಸಾಮಾಜಿಕ ಜಾಲತಾಣ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಮೂವರು ಕಾರ್ಯಕರ್ತರಿಗೆ ಬೆಂಗಳೂರಿನ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು. ಇದಕ್ಕೂ ಮುನ್ನ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಅವರಿಗೂ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು.

ಕೃಪಾ ಆಳ್ವ ಪರ ವಕೀಲ ರಾಘವೇಂದ್ರ ಶೆಣೈ ಎಂ, ಕೆವಿ ಪ್ರಶಾಂತ್ ಕುಮಾರ್ ಪರ ವಕೀಲ ನರೇಶ್ ಸಂತೋಷ್ ಕೆ ಎಸ್ ಹಾಗೂ ವಿನೋದ್ ಕುಮಾರ್ ಪರ ವಕೀಲ ಸಚಿನ್ ಸಿ ವಾದ ಮಂಡಿಸಿದರು. ರಾಜ್ಯದ ಪರ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಹಾಜರಿದ್ದರು.