Karnataka HC and CM Siddaramaiah & Dr. C N Ashwath Narayan 
ಸುದ್ದಿಗಳು

ಟಿಪ್ಪುವಿನಂತೆಯೇ ಸಿದ್ದು ಮುಗಿಸಬೇಕು ಹೇಳಿಕೆ: ಅಶ್ವತ್ಥ ನಾರಾಯಣ ವಿರುದ್ಧದ ತನಿಖೆಗೆ 4 ವಾರ ತಡೆ ನೀಡಿದ ಹೈಕೋರ್ಟ್‌

“ಮೊದಲೆರಡು ಎನ್‌ಸಿಆರ್‌ ಮುಕ್ತಾಯಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಒದಗಿಸಬೇಕು. ಸರ್ಕಾರ ಬದಲಾದ ಮಾತ್ರಕ್ಕೆ ರಾತ್ರೋರಾತ್ರಿ ಏನು ಬದಲಾವಣೆಯಾಗಿದೆ? ಪೊಲೀಸರು ಈ ರೀತಿ ನಡೆದುಕೊಳ್ಳಲಾಗದು” ಎಂದು ಮಾಜಿ ಸಚಿವರ ಪರ ನಾವದಗಿ ವಾದ.

Bar & Bench

“ಟಿಪ್ಪುವನ್ನು ಉರಿಗೌಡ, ನಂಜೇಗೌಡರು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಬೇಕು” ಎಂದು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಡಾ. ಸಿ ಎನ್‌ ಅಶ್ವತ್ಥನಾರಾಯಣ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ನಾಲ್ಕು ವಾರ ತನಿಖೆಗೆ ತಡೆ ನೀಡಿ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“ಮಾಜಿ ಸಚಿವ ಅಶ್ವತ್ಥ ನಾರಾಯಣ ವಿರುದ್ಧದ ತನಿಖೆಗೆ ನಾಲ್ಕು ವಾರಗಳ ತಡೆ ನೀಡಲಾಗಿದ್ದು, ನಾಲ್ಕು ವಾರಗಳ ಒಳಗೆ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು” ಎಂದು ನಿರ್ದೇಶಿಸಿದ ನ್ಯಾಯಾಲಯವು ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 17ರಂದು ಡಾ. ಬಿ ಜಿ ವಿಜಯಕುಮಾರ್‌ ಮತ್ತು ಆರ್‌ ಮೂರ್ತಿ ಅವರು ದೂರು ನೀಡಿದ್ದು, ಪೊಲೀಸರು ಎನ್‌ಸಿಆರ್‌ (ಅಪರಾಧಿಕ ಹೊಣೆಗಾರಿಕೆಯನ್ನು ಹೊಂದಿಲ್ಲ) ನೀಡಿದ್ದಾರೆ. ಏಪ್ರಿಲ್‌ 24ರಂದು ಕವಿತಾ ಕಾಳೆ ಎಂಬವರು ಇದೇ ವಿಚಾರ ಮುಂದು ಮಾಡಿ ದೂರು ನೀಡಿದ್ದು, ಇದಕ್ಕೂ ಪೊಲೀಸರು ಎನ್‌ಸಿಆರ್‌ ನೀಡಿದ್ದಾರೆ. ಆದರೆ, ಇದೇ ವಿಚಾರ ಪ್ರಸ್ತಾಪಿಸಿ ಮೇ 24ರಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್‌ ನೀಡಿರುವ ದೂರು ಆಧರಿಸಿ ಮೈಸೂರಿನ ದೇವರಾಜ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ” ಎಂದರು.

ಮುಂದುವರಿದು, “ಈ ರೀತಿ ಎಫ್‌ಐಆರ್‌ ದಾಖಲಿಸಲಾಗದು. ದೂರಿಗೆ ಸಂಬಂಧಿಸಿದಂತೆ ಪೊಲೀಸರು ಕ್ರಮಕೈಗೊಳ್ಳದಿದ್ದಾಗ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮೆಟ್ಟಿಲೇರಬೇಕು. ಅಶ್ವತ್ಥ ನಾರಾಯಣ ಅವರು ವಿವಾದಿತ ಹೇಳಿಕೆ ನೀಡಿದ್ದಾರೆ ಎನ್ನಲಾದ ಸಭೆಯಲ್ಲಿ ಲಕ್ಷ್ಮಣ್‌ ಅವರು ಭಾಗಿಯಾಗಿಲ್ಲ. ಸಭೆಗೆ ಸಂಬಂಧಿಸಿದ ಆಡಿಯೊ, ವಿಡಿಯೊ ಅಥವಾ ಸುದ್ದಿ ತುಣುಕುಗಳನ್ನು ಹಾಜರುಪಡಿಸಲಾಗಿಲ್ಲ. ಈ ಸಂಬಂಧ ತನಿಖಾಧಿಕಾರಿ ಕಾರ್ಯಪ್ರವೃತ್ತರಾಗಲು ದಾಖಲೆಗಳನ್ನು ಹಾಜರುಪಡಿಸಬೇಕು. ಇದಕ್ಕೆ ವಿರುದ್ಧವಾಗಿ ನಿಂದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಯಾಗಿ, ಸ್ಪಷ್ಟನೆ ನೀಡಲಾಗಿದೆ” ಪೀಠದ ಗಮನಸೆಳೆದರು.

“ಮೊದಲೆರಡು ಎನ್‌ಸಿಆರ್‌ ಮುಕ್ತಾಯಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಒದಗಿಸಬೇಕು. ಸರ್ಕಾರ ಬದಲಾದ ಮಾತ್ರಕ್ಕೆ ರಾತ್ರೋರಾತ್ರಿ ಏನು ಬದಲಾವಣೆಯಾಗಿದೆ? ಪೊಲೀಸರು ಈ ರೀತಿ ನಡೆದುಕೊಳ್ಳಲಾಗದು” ಎಂದು ನಾವದಗಿ ಆಕ್ಷೇಪಿಸಿದರು.

ಇದಕ್ಕೆ ಪೀಠವು “ರಾತ್ರೋರಾತ್ರಿ ಏನು ಬದಲಾಗಿದೆ ಎಂದು ನೀವು ಹೇಳುವಂತಿಲ್ಲ. ಇದು ಮರೆಮಾಚುವಿಕೆಯಾಗುತ್ತದೆ" ಎಂದು ಲಘು ದಾಟಿಯಲ್ಲಿ ಹೇಳಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ಏನೆಲ್ಲಾ ದಾಖಲೆಗಳು ಇವೆ ಎಂಬುದನ್ನು ತನಿಖಾಧಿಕಾರಿ ಪರಿಶೀಲಿಸಲಿದ್ದಾರೆ. ಆರೋಪಿಗೆ ಪೊಲೀಸರು ಯಾವುದೇ ನೋಟಿಸ್‌ ಜಾರಿ ಮಾಡಿಲ್ಲ” ಎಂದರು.

ವಾದ ವಾದ-ಪ್ರತಿವಾದ ಆಲಿಸಿದ ಪೀಠವು “ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಆರ್‌ ದಾಖಲಿಸಿದ ಬಳಿಕ ಮತ್ತೊಮ್ಮೆ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗದು ಎಂಬ ಅರ್ಜಿದಾರರ ಪರ ಹಿರಿಯ ವಕೀಲರ ವಾದವನ್ನು ಮೇಲ್ನೋಟಕ್ಕೆ ಒಪ್ಪಲಾಗದು. ಇದನ್ನು ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು” ಎಂದು, ತನಿಖೆಗೆ ತಡೆ ನೀಡಿ ಆದೇಶಿಸಿತು.