A1
A1
ಸುದ್ದಿಗಳು

[ಸಿದ್ದೀಕ್ ಕಪ್ಪನ್ ಜಾಮೀನು ಅರ್ಜಿ] ಉತ್ತರ ಪ್ರದೇಶಕ್ಕೆ ಸುಪ್ರೀಂ ನೋಟಿಸ್; ಸೆ. 9ರಂದು ಪ್ರಕರಣ ನಿರ್ಧಾರ

Bar & Bench

ತನ್ನ ವಿರುದ್ಧ ಯುಎಪಿಎ ಕಾಯಿದೆಯಡಿ ಹೂಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಸಿದ್ದೀಕ್‌ ಕಪ್ಪನ್ ಸಲ್ಲಿಸಿದ್ದ ಜಾಮೀನು ಅರ್ಜಿ ಕುರಿತು ಸುಪ್ರೀಂ ಕೋರ್ಟ್‌ ಸೋಮವಾರ ಉತ್ತರ ಪ್ರದೇಶ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರಿದ್ದ ಪೀಠ ಸೆಪ್ಟೆಂಬರ್ 5 ರೊಳಗೆ ಉತ್ತರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ಕುರಿತು ಸೆ. 9ರಂದು ನಿರ್ಧಾರ ಕೈಗೊಂಡು ಅರ್ಜಿ ವಿಲೇವಾರಿ ಮಾಡಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಯುಎಪಿಎ ಅಡಿಯಲ್ಲಿ ಉತ್ತರ ಪ್ರದೇಶ ಸರ್ಕಾರ ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 2ರಂದು ಜಾಮೀನು ನಿರಾಕರಿಸಿದ್ದ ಅಲಾಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿದ್ದೀಕ್‌ ಕಪ್ಪನ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಹಾಥ್‌ರಸ್‌ ದಲಿತ ಬಾಲಕಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿಗೆಂದು ತೆರಳಿದ್ದ ಮಲಯಾಳಂ ಸುದ್ದಿತಾಣ ಅರಿಮುಖಂ ವರದಿಗಾರ ಮತ್ತು ಕೇರಳ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ದೆಹಲಿ ಘಟಕದ ಕಾರ್ಯದರ್ಶಿ ಸಿದ್ದೀಕ್‌ ಕಪ್ಪನ್ ಸೇರಿದಂತೆ ಮೂವರನ್ನು 2020ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದರು. ಸೌಹಾರ್ದತೆಗೆ ಭಂಗ ತರುವ ಉದ್ದೇಶದಿಂದ ಕಪ್ಪನ್ ಆ ಪ್ರದೇಶಕ್ಕೆ ತೆರಳುತ್ತಿದ್ದರು ಎಂಬುದು ಪ್ರಾಸಿಕ್ಯೂಷನ್‌ ವಾದವಾಗಿತ್ತು. ತಪ್ಪು ಮಾಹಿತಿಗಳಿಂದ ಕೂಡಿದ ಜಾಲತಾಣ ನಡೆಸಲು ಮತ್ತು ಹಿಂಸಾಚಾರ ಪ್ರಚೋದನೆಗೆ ಅವರು ಹಣ ಸಂಗ್ರಹಿಸುತ್ತಿದ್ದಾರೆ ಎಂದೂ ಆರೋಪಿಸಲಾಗಿತ್ತು.

ಹೀಗಾಗಿ ದೇಶದ್ರೋಹ, ಯುಎಪಿಎ ಕಾಯಿದೆ, ಐಪಿಸಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿತ್ತು. ಮಥುರಾ ನ್ಯಾಯಾಲಯ ಕಪ್ಪನ್‌ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಮಾಧ್ಯಮದವರಲ್ಲದ ಸಹ ಆರೋಪಿಗಳೊಂದಿಗೆ ವರದಿ ಮಾಡಲು ಹೋಗುವ ಸಂದರ್ಭದಲ್ಲಿ ಕಾನೂನು ಭಂಗಕ್ಕೆ ಯತ್ನಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಮತ್ತು ಅವರು ಅಕ್ರಮ ಹಣದ ಮೂಲವನ್ನು ಬಳಸಿದ್ದಾರೆ ಎಂದು ಹೇಳಿ ಹೈಕೋರ್ಟ್‌ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.