ಸುದ್ದಿಗಳು

ಆರೋಪಪಟ್ಟಿ ಪಡೆಯುವುದು ವಿಳಂಬ ಆಗುತ್ತಿರುವುದನ್ನು ವಿರೋಧಿಸಿದ ಸಿದ್ದೀಕ್ ಕಪ್ಪನ್: ಜಾಮೀನಿಗೆ ಮನವಿ

Bar & Bench

ತಮ್ಮಿಂದ ಇನ್ನಷ್ಟು ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕಿದೆ ಎಂದು ಉತ್ತರಪ್ರದೇಶ ಸರ್ಕಾರ ಸಲ್ಲಿಸಿರುವ ಅರ್ಜಿಗೆ ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ವಿರೋಧ ವ್ಯಕ್ತಪಡಿಸಿದ್ದು ಇದು ನ್ಯಾಯಾಲಯ ಪ್ರಕ್ರಿಯೆಯ ದುರ್ಬಳಕೆ ಎಂದು ಹೇಳಿದ್ದಾರೆ.

ಕಪ್ಪನ್‌ ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ ತಮ್ಮ ಸ್ಥಿತಿ ಗಂಭೀರವಾಗಿದ್ದು ತಕ್ಷಣ ಆಸ್ಪತ್ರೆಗೆ ಸೇರಬೇಕಾದ ಹಿನ್ನೆಲೆಯಲ್ಲಿ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ತನ್ನನ್ನು ಬಂಧಿಸಿ ಹತ್ತು ತಿಂಗಳು ಕಳೆದರೂ ಸರ್ಕಾರ ತನ್ನ ವಿರುದ್ಧ ದಾಖಲಿಸಿರುವ ಪ್ರಕರಣದ ಆರೋಪಪಟ್ಟಿ ಇನ್ನೂ ಲಭಿಸಿಲ್ಲ. ಇದು ಸುಪ್ರೀಂಕೋರ್ಟ್‌ ಅನ್ನು ತಪ್ಪುದಾರಿಗೆ ಎಳೆಯುವಂತಹದ್ದಾಗಿದೆ. ಅಲ್ಲದೆ, ಸಂವಿಧಾನದ 21ನೇ ವಿಧಿಯಡಿ (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯ) ತಮಗೆ ದೊರೆತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.

ಆರೋಪಪಟ್ಟಿ ಒದಗಿಸುವ ಸಂಬಂಧ ಸಲ್ಲಿಸಲಾದ ಅರ್ಜಿ ಇನ್ನೂ ಬಾಕಿ ಉಳಿದಿದೆ ಎಂದು ಕೂಡ ತಿಳಿಸಲಾಗಿದೆ. ತಾವು ಪ್ರಕರಣದ ಮತ್ತೊಬ್ಬ ಆರೋಪಿಯ ವಕೀಲರಿಂದ ಪಡೆದ ಆರೋಪಪಟ್ಟಿಯ ಪ್ರತಿಯಲ್ಲಿ ಗಂಭೀರ ದೋಷಗಳಿರುವುದು ಕಂಡುಬಂದಿದೆ ಎನ್ನಲಾಗಿದ್ದು ಸಿಆರ್‌ಪಿಸಿಯ ಸೆಕ್ಷನ್ 207ರ ಅಡಿ ಸಲ್ಲಿಸಲಾದ ಅರ್ಜಿಯಲ್ಲಿ ವಿವರಿಸಲಾಗಿದೆ. ಕಪ್ಪನ್ ಅವರ ವಕೀಲರಾದ ವಕೀಲ ವಿಲ್ಸ್ ಮ್ಯಾಥ್ಯೂಸ್ ಮೂಲಕ ಇತ್ತೀಚಿನ ಪ್ರತಿಕ್ರಿಯೆ ದಾಖಲಿಸಲಾಗಿದೆ.

ತಮ್ಮ ಬಂಧನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದು ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನದ ಉಲ್ಲಂಘನೆಯಾಗಿದೆ. ಇದು ಕಾನೂನುರಹಿತ್ಯತೆ ಮತ್ತು ಅರಾಜಕತೆಗೆ ಎಡೆಮಾಡಲಿದ್ದು ನ್ಯಾಯಿಕ ಆಡಳಿತಕ್ಕೆ ಅಪಾಯವನ್ನು ಒಡ್ಡುತ್ತದೆ ಎಂದಿರುವ ಅವರು ತಮಗೆ ಡಿಫಾಲ್ಟ್‌ ಜಾಮೀನು ಒದಗಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ಅಲ್ಲದೆ ಸೂಕ್ತ ಚಿಕಿತ್ಸೆ ನೀಡದೆ ತಮ್ಮನ್ನು ಈ ಹಿಂದೆ ಬಿಡುಗಡೆ ಮಾಡಲಾಗಿತ್ತು. ಇದು ನ್ಯಾಯಾಂಗ ನಿಂದನೆಯಾಗಿದೆ. ತಮ್ಮ ವಿರುದ್ಧ ಸಲ್ಲಿಸಿರುವ ಪೂರಕ ಆರೋಪಪಟ್ಟಿಯಲ್ಲಿ ಕೂಡ ವಿವಿಧ ದೋಷಗಳಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.