ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ (ಎನ್‌ಎಸ್‌ಎ) ಆರೋಪಿ ಪ್ರವೇಶ್ ಶುಕ್ಲಾ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ಕಂಚನ್ ಶುಕ್ಲಾ ಮತ್ತು ಮಧ್ಯ ಪ್ರದೇಶ ಸರ್ಕಾರ ನಡುವಣ ಪ್ರಕರಣ].
ಈ ಸಂಬಂಧ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ಆರೋಪಿಯ ಪತ್ನಿ ಕಂಚನ್ ಶುಕ್ಲಾ ಅವರು ರಾಜಕೀಯ ಕಾರಣಕ್ಕೆ ಪತಿಯನ್ನು ಬಂಧಿಸಲಾಗಿದೆ ಎಂದು ದೂರಿದ್ದರು.
ಬಂಧನ ಅಧಿಕಾರಿಗೆ ಪ್ರತಿಕ್ರಿಯೆ ನೀಡಲು ಅವಕಾಶ ಕೊಡದೆ ಪ್ರವೇಶ್ ಶುಕ್ಲಾ ವಿರುದ್ಧ ಎನ್‌ಎಸ್‌ಎ ಕಾಯಿದೆ ಅನ್ವಯಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಅನಿರುದ್ಧ ಕುಮಾರ್ ಮಿಶ್ರಾ ನ್ಯಾಯಾಲಯಕ್ಕೆ ವಿವರಿಸಿದರು.
ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ ನ್ಯಾಯಮೂರ್ತಿಗಳಾದ ರವಿ ಮಳಿಮಠ ಮತ್ತು ವಿಶಾಲ್ ಮಿಶ್ರಾ ಅವರನ್ನೊಳಗೊಂಡ ಪೀಠ ವಿಚಾರಣೆಯ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸದಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು.