Madhya Pradesh HC Jabalpur bench
Madhya Pradesh HC Jabalpur bench 
ಸುದ್ದಿಗಳು

ಸಿಧಿ ಮೂತ್ರ ವಿಸರ್ಜನೆ ಪ್ರಕರಣ: ಎನ್ಎಸ್ಎ ಬಂಧನ ಆದೇಶ ಪ್ರಶ್ನಿಸಿ ಮಧ್ಯಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ ಆರೋಪಿಯ ಪತ್ನಿ

Bar & Bench

ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ (ಎನ್‌ಎಸ್‌ಎ)  ಆರೋಪಿ ಪ್ರವೇಶ್ ಶುಕ್ಲಾನ್ನನು ಬಂಧಿಸಿರುವುದನ್ನು ಪ್ರಶ್ನಿಸಿ ಆತನ ಪತ್ನಿ ಗುರುವಾರ ಮಧ್ಯಪ್ರದೇಶ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ಕಂಚನ್ ಶುಕ್ಲಾ ಮತ್ತು  ಮಧ್ಯ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಬುಡಕಟ್ಟು ಸಮುದಾಯಕ್ಕೆ ಸೇರಿದ  ವ್ಯಕ್ತಿ ದಶ್ಮತ್ ರಾವತ್ ಮೇಲೆ ಶುಕ್ರಾ ಮೂತ್ರ ವಿಸರ್ಜಿಸುತ್ತಿರುವುದನ್ನು ಚಿತ್ರಿಸಿದ್ದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು.

ಐಪಿಸಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯಷ್ಟೇ ಅಲ್ಲದೆ ಬಳಿಕ ಎನ್‌ಎಸ್‌ಎ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ಶುಕ್ಲಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಪ್ರಸ್ತುತ ಆತ ಸೆರೆವಾಸ ಅನುಭವಿಸುತ್ತಿದ್ದಾನೆ.

ವಕೀಲ ಅನಿರುದ್ಧ ಕುಮಾರ್ ಮಿಶ್ರಾ ಅವರ ಮೂಲಕ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಮನವಿಯಲ್ಲಿ, ಅರ್ಜಿದಾರೆ ಕಂಚನ್ ಶುಕ್ಲಾ ಅವರು ತಮ್ಮ ಪತಿಯನ್ನು ರಾಜಕೀಯ ಕಾರಣಕ್ಕೆ ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.

ತಮ್ಮ ಪತಿಯನ್ನು ಎನ್‌ಎಸ್‌ಎ ಕಾಯಿದೆಯಡಿ ಬಂಧಿಸುವಂತೆ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೂಚಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬೆಳವಣಿಗೆಯನ್ನು ದೃಢಪಡಿಸಿದ ವಕೀಲ ಮಿಶ್ರಾ ಅವರು ಬಾರ್ ಮತ್ತು ಬೆಂಚ್‌ ಜೊತೆ ಮಾತನಾಡುತ್ತಾ "ಎನ್ಎಸ್ಎಯ ಸೆಕ್ಷನ್ 3(2) ರ ಅಡಿಯಲ್ಲಿ ಯಾವುದೇ ಅಪರಾಧವನ್ನು ಮಾಡಿಲ್ಲವಾದ್ದರಿಂದ ಶುಕ್ಲಾ ಅವರನ್ನು ಬಿಡುಗಡೆ ಮಾಡಬೇಕೆಂಬುದು ನಮ್ಮ ಮುಖ್ಯ ಪ್ರಾರ್ಥನೆಯಾಗಿದೆ. ಜಿಲ್ಲಾಧಿಕಾರಿಗಳು ರಾಜಕೀಯ ಒತ್ತಡದಿಂದ ಎನ್ಎಸ್ಎ ಅಡಿ ಪ್ರಕರಣ ದಾಖಲಿಸಿದ್ದಾರೆ, ಇದಕ್ಕೆ ಮುಖ್ಯಮಂತ್ರಿಯವರ ಸೂಚನೆಯಿದೆ" ಎಂದರು.

ಮುಖ್ಯ ನ್ಯಾಯಮೂರ್ತಿ ರವಿ ಮಳೀಮಠ್ ಮತ್ತು ನ್ಯಾಯಮೂರ್ತಿ ವಿಶಾಲ್ ಮಿಶ್ರಾ ಅವರಿರುವ ಪೀಠದ ಮುಂದೆ ಪ್ರಕರಣ ಪ್ರಸ್ತಾಪವಾಗುವ ಸಾಧ್ಯತೆಯಿದೆ.