copy-paste 
ಸುದ್ದಿಗಳು

ಕಾಪಿ-ಪೇಸ್ಟ್ ವಿವಾದ: ಮತ್ತೊಂದು ಮಧ್ಯಸ್ಥಿಕೆ ತೀರ್ಪು ರದ್ದುಗೊಳಿಸಿದ ಸಿಂಗಪೋರ್ ನ್ಯಾಯಾಲಯ

ಭಾರತದ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಮಂಡಳಿಯ ಬಹುಮತದ ತೀರ್ಪು ಹಿಂದಿನ ತೀರ್ಪುಗಳ ತಾರ್ಕಿಕತೆಯನ್ನೇ ವ್ಯಾಪಕವಾಗಿ ನಕಲು ಮಾಡಿದೆ ಎಂದು ನ್ಯಾಯಾಲಯ ತಿಳಿಸಿದೆ.

Bar & Bench

ಮಧ್ಯಸ್ಥಗಾರರಾಗಿ ಸೇವೆ ಸಲ್ಲಿಸುತ್ತಿರುವ ಭಾರತದ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸ್ವತಂತ್ರವಾಗಿ ತೀರ್ಪು ನೀಡದೆ ಸ್ವಾಭಾವಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸಿರುವುದಾಗಿ ತಿಳಿಸಿದ ಸಿಂಗಪೋರ್‌ ಅಂತಾರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯ (ಎಸ್‌ಐಸಿಸಿ) ಅವರು ನೀಡಿರುವ  ಮಧ್ಯಸ್ಥಿಕೆ ತೀರ್ಪನ್ನು ರದ್ದುಗೊಳಿಸಿದೆ.

ವಿಶ್ವಾಸಾರ್ಹ ಮೂಲಗಳ ಪ್ರಕಾರ, ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಮಧ್ಯಸ್ಥಿಕೆ ನ್ಯಾಯಮಂಡಳಿಯ ಅಧ್ಯಕ್ಷತೆ ವಹಿಸಿದ್ದರು , ನ್ಯಾಯಮೂರ್ತಿಗಳಾದ ಆರ್. ಬಾನುಮತಿ ಮತ್ತು ಕೃಷ್ಣ ಕುಮಾರ್ ಲಹೋಟಿ ಅವರು ಸಹ-ಮಧ್ಯಸ್ಥಗಾರರಾಗಿದ್ದರು. ನ್ಯಾಯಮೂರ್ತಿ ಬಾನುಮತಿ ಅವರು ಭಿನ್ನ ತೀರ್ಪು ನೀಡಿದ್ದಾರೆ ಎಂದು ತಿಳಿದುಬಂದಿತ್ತು.

ಭಾರತದ ಇಬ್ಬರು ನಿವೃತ್ತ  ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಮಂಡಳಿಯ ಬಹುಮತದ ತೀರ್ಪು ಹಿಂದಿನ ತೀರ್ಪುಗಳ ತಾರ್ಕಿಕತೆಯನ್ನೇ ವ್ಯಾಪಕವಾಗಿ ನಕಲು ಮಾಡಿದೆ  ಎಂದು ನ್ಯಾಯಾಧೀಶ ರೋಜರ್ ಗೈಲ್ಸ್ ಅವರಿದ್ದ ಸಿಂಗಪೋರ್‌ ನ್ಯಾಯಾಲಯ ತೀರ್ಪಿತ್ತಿದೆ.  

ಕಳೆದ ತಿಂಗಳು ಕೂಡ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಮಂಡಳಿ ನೀಡಿದ್ದ ಮಧ್ಯಸ್ಥಿಕೆ ತೀರ್ಪನ್ನು ರದ್ದುಗೊಳಿಸಿದ್ದನ್ನು ಸಿಂಗಪೋರ್‌ ಸುಪ್ರೀಂ ಕೋರ್ಟ್‌ನ ಮೇಲ್ಮನವಿ ನ್ಯಾಯಾಲಯ ಎತ್ತಿಹಿಡಿದಿತ್ತು, ತೀರ್ಪಿನ 451 ಪ್ಯಾರಾಗಳಲ್ಲಿ 212 ಪ್ಯಾರಾಗಳು ಅಂದರೆ ಶೇ 47ರಷ್ಟ ಭಾಗ ಈ ಹಿಂದೆ ಅದೇ ಮಧ್ಯಸ್ಥಿಕೆದಾರರು ನೀಡಿದ್ದ ಎರಡು ತೀರ್ಪುಗಳ ಅಕ್ಷರಶಃ ನಕಲು ಎಂದು ಅದು ಹೇಳಿತ್ತು.

ಪ್ರಸ್ತುತ ಪ್ರಕರಣದಲ್ಲಿ, ಭಾರತದ ಪ್ರಮುಖ ಸರಕು ಸಾಗಣೆ ರೈಲ್ವೆ ಜಾಲವಾದ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ನ (ಡಿಎಫ್‌ಸಿ) ಒಂದು ಭಾಗದ ನಿರ್ಮಾಣಕ್ಕಾಗಿ ಭಾರತೀಯ ಸರ್ಕಾರಿ ಸ್ವಾಮ್ಯದ ವಿಶೇಷ ಉದ್ದೇಶದ ಹಕ್ಕುದಾರ ಮತ್ತು ಮೂರು ಕಂಪನಿಗಳ (ಪ್ರತಿವಾದಿಗಳು) ಒಕ್ಕೂಟದ ನಡುವೆ ನವೆಂಬರ್ 10, 2016 ರಂದು ನಡೆದ ಒಪ್ಪಂದ ಮಧ್ಯಸ್ಥಿಕೆಯ ಅಂಗಳ ತಲುಪಿತ್ತು.