ex-CJI Dipak Misra  
ಸುದ್ದಿಗಳು

ನಿವೃತ್ತ ಸಿಜೆಐ ಮಿಶ್ರಾ ಸಮಿತಿಯ ಮಧ್ಯಸ್ಥಿಕೆ ತೀರ್ಪು ರದ್ದು: 'ಕಾಪಿ- ಪೇಸ್ಟ್‌' ಎಂದ ಸಿಂಗಪೋರ್ ಸುಪ್ರೀಂ ಕೋರ್ಟ್‌

ಮಾಜಿ ಸಿಜೆಐ ನೇತೃತ್ವದ ನ್ಯಾಯಮಂಡಳಿ ನೀಡಿದ್ದ 451 ಪ್ಯಾರಾಗಳ ತೀರ್ಪಿನಲ್ಲಿ ಅಂಥದ್ದೇ ತೀರ್ಪುಗಳ 212 ಪ್ಯಾರಾಗಳನ್ನು ಬಳಸಿಕೊಳ್ಳಲಾಗಿದೆ ಎಂದಿದೆ ಸಿಂಗಪೋರ್ ಸುಪ್ರೀಂ ಕೋರ್ಟ್.

Bar & Bench

ಭಾರತ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ನೇತೃತ್ವದ ನ್ಯಾಯಮಂಡಳಿ ನೀಡಿದ್ದ ಮಧ್ಯಸ್ಥಿಕೆ ತೀರ್ಪನ್ನು ರದ್ದುಗೊಳಿಸಿದ್ದನ್ನು ಸಿಂಗಪೋರ್‌ ಸುಪ್ರೀಂ ಕೋರ್ಟ್‌ನ ಮೇಲ್ಮನವಿ ನ್ಯಾಯಾಲಯ ಇತ್ತೀಚೆಗೆ ಎತ್ತಿಹಿಡಿದಿದೆ. 

ತೀರ್ಪಿನ 451 ಪ್ಯಾರಾಗಳಲ್ಲಿ 212 ಪ್ಯಾರಾಗಳು ಅಂದರೆ ಶೇ 47ರಷ್ಟ ಭಾಗ ಈ ಹಿಂದೆ ಅದೇ ಮಧ್ಯಸ್ಥಿಕೆದಾರರು ನೀಡಿದ್ದ ಎರಡು ತೀರ್ಪುಗಳ ಅಕ್ಷರಶಃ ನಕಲು ಎಂದು ಅದು ಹೇಳಿದೆ.

ಸಿಂಗಪೋರ್‌ ಅಂತಾರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯದ (ಇದು ಹೈಕೋರ್ಟ್‌ನ ಭಾಗವಾಗಿದೆ) ಆದೇಶದ ವಿರುದ್ಧದ ಮೇಲ್ಮನವಿಯನ್ನು ವಜಾಗೊಳಿಸಿದ, ಮುಖ್ಯ ನ್ಯಾಯಮೂರ್ತಿ ಸುಂದರೇಶ್ ಮೆನನ್ ಮತ್ತು ನ್ಯಾಯಮೂರ್ತಿ ಸ್ಟೀವನ್ ಚೊಂಗ್ ಅವರಿದ್ದ  ಪೀಠ ಈ ತೀರ್ಪು ನೀಡಿತು,

“ತೀರ್ಪು ನೀಡುವಾಗ ಅಂಥದ್ದೇ ತೀರ್ಪಿನ ಪ್ಯಾರಾಗಳನ್ನು ಬಹಳಷ್ಟು ಪ್ರಮಾಣದಲ್ಲಿ ಟೆಂಪ್ಲೇಟ್‌ ರೀತಿ ಬಳಸಲಾಗಿದೆ. 451 ಪ್ಯಾರಾಗಳ ತೀರ್ಪಿನಲ್ಲಿ ಅಂಥದ್ದೇ ತೀರ್ಪುಗಳ 212 ಪ್ಯಾರಾಗಳನ್ನು ಉಳಿಸಿಕೊಳ್ಳಲಾಗಿದೆ ಎಂಬುದು ನಿರ್ವಿವಾದ. ಇದು ಹಲವಾರು ಪರಿಣಾಮಗಳನ್ನು ಬೀರುವಂಥದ್ದು” ಎಂದು ನ್ಯಾಯಾಲಯ ಹೇಳಿದೆ.

ಭಾರತದಲ್ಲಿ ಸರಕು ಸಾಗಣೆ ಕಾರಿಡಾರ್‌ಗಳನ್ನು ನಿರ್ವಹಿಸುವ ವಿಶೇಷ ಉದ್ದೇಶ ಘಟಕ ಮತ್ತು ಮೂಲಸೌಕರ್ಯ ಯೋಜನೆಗಳಲ್ಲಿ ತೊಡಗಿರುವ ಮೂರು ಕಂಪನಿಗಳ ಒಕ್ಕೂಟದ ನಡುವಿನ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿತ್ತು. 2017ರ ಭಾರತ ಸರ್ಕಾರದ ಅಧಿಸೂಚನೆಯಿಂದಾಗಿ ಕನಿಷ್ಠ ವೇತನ ಹೆಚ್ಚಳ ಮಾಡಬೇಕಾಗಿರುವುದರಿಂದ ಒಕ್ಕೂಟವು ತಮ್ಮ ಒಪ್ಪಂದದ ಅಡಿಯಲ್ಲಿ ಹೆಚ್ಚುವರಿ ಪಾವತಿ ಪಡೆಯಬಹುದೇ ಎಂಬುದರ ಮೇಲೆ ಭಿನ್ನಾಭಿಪ್ರಾಯ ಉಂಟಾಗಿತ್ತು.

ಮಾತುಕತೆಗಳು ವಿಫಲವಾದಾಗ, ಪ್ರಕರಣ ಅಂತಾರಾಷ್ಟ್ರೀಯ ವಾಣಿಜ್ಯ ಮಂಡಳಿ (ಐಸಿಸಿ) ನಿಯಮಗಳ ಅಡಿಯಲ್ಲಿ ಮಧ್ಯಸ್ಥಿಕೆಗಾಗಿ ಸಿಂಗಪೋರ್‌ ಅಂತಾರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯದ ಅಂಗಳ ತಲುಪಿತು. ಮಧ್ಯಪ್ರದೇಶದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಕುಮಾರ್ ಲಹೋಟಿ,  ಜಮ್ಮು ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರನ್ನು ಒಳಗೊಂಡ ನ್ಯಾಯಮಂಡಳಿ ನವೆಂಬರ್ 2023ರಲ್ಲಿ ಒಕ್ಕೂಟದ ಪರವಾಗಿ ತೀರ್ಪು ನೀಡಿತ್ತು.

ಆದರೆ, ಪ್ರಸ್ತುತ ತೀರ್ಪನ್ನು ಇದೇ ಮಧ್ಯಸ್ಥಿಕೆದಾರರು ಇತ್ಯರ್ಥಪಡಿಸಿದ್ದ ಬೇರೆ ಎರಡು ಮಧ್ಯಸ್ಥಿಕೆ ಪ್ರಕರಣದ ತೀರ್ಪುಗಳಿಂದ ವ್ಯಾಪಕವಾಗಿ ನಕಲು ಮಾಡಲಾಗಿದೆ ಎಂದು ಸಿಂಗಪೋರ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಯಿತು. ಅಂತೆಯೇ ಪಕ್ಷಕಾರರ ವಾದಗಳನ್ನು ಸ್ವತಂತ್ರವಾಗಿ ನಿರ್ಣಯಿಸದೆ ಇರುವುದು ಇತ್ಯಾದಿ ಕಾರಣ ನೀಡಿ ತೀರ್ಪು ಸ್ವಾಭಾವಿಕ ನ್ಯಾಯ ಕಲ್ಪನೆಯನ್ನು ಉಲ್ಲಂಘಿಸಿದೆ ಎಂದು ಹೈಕೋರ್ಟ್‌ ಹೇಳಿತು.

ಸಿಂಗಪೋರ್‌ ಸುಪ್ರೀಂ ಕೋರ್ಟ್‌ನ ಮೇಲ್ಮನವಿ ನ್ಯಾಯಾಲಯ ಹೈಕೋರ್ಟ್‌ ತೀರ್ಪನ್ನು ಎತ್ತಿಹಿಡಿದಿದ್ದು ಮಧ್ಯಸ್ಥಿಕೆದಾರರು ಎರಡು ಸಂಬಂಧಿತ ವಿವಾದಗಳ ಕುರಿತು ಒಂದೇ ರೀತಿಯ ತೀರ್ಪು ನೀಡುವುದು ತಪ್ಪಲ್ಲವಾದರೂ ಪ್ರಸ್ತುತ ಮೂರು ಪ್ರಕರಣಗಳಲ್ಲಿಯೂ ವ್ಯತ್ಯಾಸ ಇರುವುದರಿಂದ ಬೇರೆ ತೀರ್ಪುಗಳನ್ನು ಯಥಾವತ್‌ ಬಳಸುವುದು ಸಲ್ಲದು ಎಂದಿದೆ.