ನಕಲಿ ಜಾತಿ ಪ್ರಮಾಣಪತ್ರ ಹಗರಣದ ಆರೋಪಿಗೆ ಸಂಬಂಧಿಸಿದ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕೆ ಎಂಬ ಬಗ್ಗೆ ಎರಡು ನ್ಯಾಯಪೀಠಗಳು ವ್ಯತಿರಿಕ್ತ ನಿಲುವು ತಳೆಯುವ ಮೂಲಕ ಕಲ್ಕತ್ತಾ ಹೈಕೋರ್ಟ್ ಬುಧವಾರ ಆಸಕ್ತಿದಾಯಕ ವಿದ್ಯಮಾನಗಳಿಗೆ ಸಾಕ್ಷಿಯಾಯಿತು (ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಇತಿಶಾ ಸೊರೆನ್ ನಡುವಣ ಪ್ರಕರಣ).
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರಿದ್ದ ಏಕಸದಸ್ಯ ಪೀಠ ಬುಧವಾರ ಬೆಳಗ್ಗೆ ಪಶ್ಚಿಮ ಬಂಗಾಳ ಪೊಲೀಸರಿಗೆ ಆದೇಶಿಸಿತ್ತು.
ಕುತೂಹಲದ ಸಂಗತಿ ಎಂದರೆ ಅದೇ ದಿನ ವಿಭಾಗೀಯ ಪೀಠ ಆದೇಶ ತಡೆಹಿಡಿಯಿತು. ಇಷ್ಟಾದರೂ, ಮಧ್ಯಾಹ್ನ ಮತ್ತೆ ವಿಚಾರಣೆ ನಡೆಸಿದ ನ್ಯಾ. ಅಭಿಜಿತ್ ಅವರು ಪ್ರಕರಣದ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸಿದರು.
ವಿಶೇಷ ಎಂದರೆ, ಏಕಸದಸ್ಯ ಪೀಠ ಮತ್ತು ವಿಭಾಗೀಯ ಪೀಠಗಳೆರಡೂ ಒಂದೇ ದಿನ ನೀಡಿದ ಬೇರೆ ಬೇರೆ ಆದೇಶಗಳಲ್ಲಿ ಮುಂದಿನ ವಿಚಾರಣೆಯನ್ನು ಇಂದಿಗೆ (ಜನವರಿ 25) ಮುಂದೂಡಿದ್ದವು.
ಏಕಸದಸ್ಯ ಪೀಠದ ಆದೇಶದಲ್ಲಿ ಏನಿದೆ?
ಆರಂಭದಲ್ಲಿ, ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಇತಿಶಾ ಸೊರೇನ್ ಎಂಬವವರು ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಆದೇಶಿಸಿದರು.
ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣಪತ್ರಗಳು ವ್ಯಾಪಕವಾಗಿದ್ದು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಹಲವಾರು ವ್ಯಕ್ತಿಗಳು ಇಂತಹ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ ಎಂದು ಸೊರೇನ್ ಆರೋಪಿಸಿದ್ದರು.
ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ಶೇಖ್ ಶಹಜಹಾನ್ ಅವರನ್ನು ಬಂಧಿಸದ ಪಶ್ಚಿಮ ಬಂಗಾಳ ಪೊಲೀಸರ ಮೇಲೆ ತನಗೆ ನಂಬಿಕೆ ಇಲ್ಲ ಎಂದು ಏಕ ಸದಸ್ಯ ಪೀಠ ಹೇಳಿತು. ಶಹಜಹಾನ್ ಅವರ ಮನೆ ಮೇಲೆ ಇ ಡಿ ದಾಳಿ ನಡೆಸಿದ್ದಾಗ ಅಧಿಕಾರಿಗಳ ಮೇಲೆ ಹಲ್ಲೆಯಾಗಿತ್ತು.
ಎಸ್ಐಟಿಗೆ ಯಾವುದೇ ಹಣದ ಜಾಡು ಸಿಕ್ಕರೆ, ಜಾರಿ ನಿರ್ದೇಶನಾಲಯವೂ ಹಣದ ಜಾಡನ್ನು ತನಿಖೆ ಮಾಡಲು ಬರುತ್ತದೆ ಎಂದ ಪೀಠ ಸಿಬಿಐ ತನಿಖೆಗೆ ಆದೇಶಿಸಿತ್ತು.
ಕುತೂಹಲದ ಸಂಗತಿ ಎಂದರೆ ಈ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಲಿರುವ ಮೇಲ್ಮನವಿ ಕುರಿತಂತೆ ಕೆಲ ಅವಲೋಕನಗಳನ್ನು ಅವರು ಮಾಡಿದರು.
"ಈ ಆದೇಶಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಮೊದಲು, ಶಿಕ್ಷಕರ ನೇಮಕಾತಿ (ಹಗರಣಕ್ಕೆ ಸಂಬಂಧಿಸಿದ) ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಮತ್ತು ಸಿಬಿಐ ತನಿಖೆಗೆ ಸಂಬಂಧಿಸಿದಂತೆ ಈ ನ್ಯಾಯಾಲಯ ನೀಡಿದ ಆದೇಶಗಳನ್ನು ವಿರೋಧಿಸಲು ಖರ್ಚು ಮಾಡಿದ ಒಟ್ಟು ಮೊತ್ತವನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಬೇಕು ಎಂದು ನಿರೀಕ್ಷಿಸುತ್ತೇನೆ," ಎಂದು ನ್ಯಾಯಮೂರ್ತಿ ಗಂಗೋಪಾಧ್ಯಾಯ ಹೇಳಿದರು.
ನಿರೀಕ್ಷೆಯಂತೆ, ರಾಜ್ಯ ಸರ್ಕಾರ ಮೇಲಿನ ಆದೇಶವನ್ನು ಸುಪ್ರೀಂ ಕೋರ್ಟ್ ಬದಲು ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ಪ್ರಶ್ನಿಸಿತು.
ವಿಭಾಗೀಯ ಪೀಠದ ಆದೇಶ
ಏಕಸದಸ್ಯ ಪೀಠ ಆದೇಶ ಹೊರಡಿಸಿದ ಕೆಲವೇ ನಿಮಿಷಗಳಲ್ಲಿ ಅಡ್ವೊಕೇಟ್ ಜನರಲ್ ಅವರು ನ್ಯಾಯಮೂರ್ತಿಗಳಾದ ಸೌಮೆನ್ ಸೇನ್ ಮತ್ತು ಉದಯ್ ಕುಮಾರ್ ಅವರಿದ್ದ ವಿಭಾಗೀಯ ಪೀಠದೆದುರು ಪ್ರಕರಣ ಪ್ರಸ್ತಾಪಿಸಿದರು.
ತನಿಖೆಗಾಗಿ ಕೈಗೊಂಡ ಕ್ರಮಗಳನ್ನು ಪರಿಣಾಮಕಾರಿಯಾಗಿ ದಾಖಲಿಸಲು ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ರಾಜ್ಯಕ್ಕೆ ಸರ್ಕಾರಕ್ಕೆ ಅವಕಾಶ ನೀಡಿಲ್ಲ ಎಂದು ಎಜಿ ದತ್ತಾ ವಿಭಾಗೀಯ ಪೀಠಕ್ಕೆ ತಿಳಿಸಿದರು.
ರಾಜ್ಯ ಸರ್ಕಾರದ ವಾದ ಪರಿಗಣಿಸಿದ ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿತು.
ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಹೊರಡಿಸಿದ ಆದೇಶವನ್ನು ಎರಡು ವಾರಗಳ ಅವಧಿಗೆ ತಡೆಹಿಡಿದ ವಿಭಾಗೀಯ ಪೀಠ ವಿಚಾರಣೆಯನ್ನು ಜನವರಿ 25ಕ್ಕೆ (ಇಂದಿಗೆ) ಮುಂದೂಡಿತು.
ದಾಖಲೆ ಹಸ್ತಾಂತರಿಸಿದ ನ್ಯಾ. ಗಂಗೋಪಾಧ್ಯಾಯ
ಇಷ್ಟಕ್ಕೇ ʼಪ್ರಕರಣʼ ಮುಗಿಯಲಿಲ್ಲ. ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಊಟದ ವಿರಾಮದ ನಂತರ ಮತ್ತೆ ವಿಚಾರಣೆ ನಡೆಸಿದರು.
ಬೆಳಿಗ್ಗೆ ನೀಡಿದ್ದ ಆದೇಶದಂತೆ ಹಾಜರಿದ್ದ ಸಿಬಿಐ ಅಧಿಕಾರಿಯೊಬ್ಬರಿಗೆ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪ್ರಕರಣದ ದಾಖಲೆಗಳನ್ನು ನ್ಯಾಯಮೂರ್ತಿಗಳು ಹಸ್ತಾಂತರಿಸಿದರು.
ಈ ಮಧ್ಯೆ ಅರ್ಜಿದಾರೆ ಇತಿಶಾ ಸೊರೆನ್ ಪರ ವಕೀಲರು ಪ್ರಕರಣವನ್ನು ಸರ್ಕಾರದ ಪರವಾಗಿ ಮೇಲ್ಮನವಿ ನ್ಯಾಯಾಲಯಕ್ಕೆ ಉಲ್ಲೇಖಿಸಿರುವುದಾಗಿ ತಿಳಿಸಿದರು. ಆದರೆ ಸರ್ಕಾರದ ಯಾರೊಬ್ಬರೂ ತನಗೆ ಈ ಮಾಹಿತಿ ನೀಡಿಲ್ಲ ಎಂದ ಏಕಸದಸ್ಯ ಪೀಠ ವಿಚಾರಣೆಯನ್ನು ಮತ್ತೆ ಗುರುವಾರ ಬೆಳಿಗ್ಗೆಗೆ ಮುಂದೂಡಿತು.
[ಏಕಸದಸ್ಯ ಪೀಠದ ಆದೇಶದ ಪ್ರತಿಯನ್ನು ಇಲ್ಲಿ ಓದಿ]
[ವಿಭಾಗೀಯ ಪೀಠದ ಆದೇಶದ ಪ್ರತಿಯನ್ನು ಇಲ್ಲಿ ಓದಿ]