ಸುದ್ದಿಗಳು

ಮತದಾರರನ್ನು ತೆಗೆಯುವ ಆರೋಪ: ಬಿಜೆಪಿಯ ಇಬ್ಬರು ಬಿಎಲ್‌ಎಗಳ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಫಾರಂ-7 ಸಲ್ಲಿಕೆಯಾದ ಬಳಿಕ ಚುನಾವಣಾ ಅಧಿಕಾರಿಗಳು ಅದರ ಸತ್ಯಾಸತ್ಯತೆ ಕುರಿತು ವಿಚಾರಣೆ ನಡೆಸುವುದಿಲ್ಲವೇ? ತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದ್ದರೆ ಅದನ್ನು ಅಧಿಕಾರಿಗಳೇ ಪರಿಶೀಲಿಸಿ ತೀರ್ಮಾನಿಸಬಹುದಲ್ಲವೇ? ಎಂದು ಪ್ರಶ್ನಿಸಿದ ನ್ಯಾಯಾಲಯ.

Bar & Bench

ಮತದಾರರ ಪಟ್ಟಿಯಿಂದ ನಿರ್ದಿಷ್ಟ ಸಮುದಾಯದ ಮತದಾರರ ಹೆಸರುಗಳನ್ನು ತೆಗೆದು ಹಾಕುವ ಉದ್ದೇಶದಿಂದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ತಪ್ಪು ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಫಾರಂ-7 ಅರ್ಜಿಗಳನ್ನು ಸಲ್ಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಲ್ಲೇಶ್ವರಂನ ಜಿ ಎಸ್‌ ವಸಂತಲಕ್ಷ್ಮಿ ಮತ್ತು ಆರ್‌ ದೀಪಕ್‌ ಸಿಂಗ್‌ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಎಫ್‌ಐಆರ್‌ ರದ್ದು ಕೋರಿ ಬೆಂಗಳೂರಿನ ಗುಟ್ಟಳ್ಳಿಯ ವಸಂತಲಕ್ಷ್ಮಿ ಮತ್ತು ಯಶವಂತಪುರದ ಆರ್‌ ದೀಪಕ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ್‌ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Anant Ramanath Hegde

ಅರ್ಜಿದಾರರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು “ಅರ್ಜಿದಾರರು ಬೂತ್‌ ಮಟ್ಟದ ಏಜೆಂಟರಾಗಿ (ಬಿಎಲ್‌ಎ) ಮತದಾರರ ಪಟ್ಟಿಯಿಂದ ಅನರ್ಹರ ಹೆಸರುಗಳನ್ನು ತೆಗೆದು ಹಾಕುವಂತೆ ಕೋರಿ ಫಾರಂ-7 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆ ಅರ್ಜಿಗಳನ್ನು ಪರಿಶೀಲಿಸಿ ತೀರ್ಮಾನಿಸುವ ಅಧಿಕಾರ ಚುನಾವಣಾ ಅಧಿಕಾರಿಗಳಿಗೆ ಮಾತ್ರವೇ ಇದೆ” ಎಂದರು.

Senior Advocate M Aruna Shyam

ಅದಕ್ಕೆ ಆಕ್ಷೇಪಿಸಿದ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಅನೂಪ್‌ ಕುಮಾರ್‌ ಅವರು “ಒಬ್ಬರು ಗರಿಷ್ಠ 50 ಅರ್ಜಿಗಳನ್ನು ಸಲ್ಲಿಸಬಹುದಾದರೂ ಅರ್ಜಿದಾರರು 778 ಫಾರಂ-7 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಮತದಾರರ ಹೆಸರುಗಳನ್ನು ದುರುದ್ದೇಶಪೂರ್ವಕವಾಗಿ ಪಟ್ಟಿಯಿಂದ ತೆಗೆದು ಹಾಕಲು ಯತ್ನಿಸಿದ್ದಾರೆ” ಎಂದು ವಾದಿಸಿದರು.

ಈ ವೇಳೆ ಪೀಠವು “50ಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ಅದು ಯಾವ ಕಾಯಿದೆಯಡಿ ಅಪರಾಧವಾಗುತ್ತದೆ? ಫಾರಂ-7 ಸಲ್ಲಿಕೆಯಾದ ಬಳಿಕ ಚುನಾವಣಾ ಅಧಿಕಾರಿಗಳು ಅದರ ಸತ್ಯಾಸತ್ಯತೆ ಕುರಿತು ವಿಚಾರಣೆ ನಡೆಸುವುದಿಲ್ಲವೇ? ತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದ್ದರೆ ಅದನ್ನು ಅಧಿಕಾರಿಗಳೇ ಪರಿಶೀಲಿಸಿ ತೀರ್ಮಾನಿಸಬಹುದಲ್ಲವೇ? ಪಟ್ಟಿಯಿಂದ ಹೆಸರು ತೆಗೆದು ಹಾಕುವ ಮುನ್ನ ಸಂಬಂಧಪಟ್ಟ ಮತದಾರರಿಗೆ ನೋಟಿಸ್‌ ನೀಡಲಾಗುವುದಿಲ್ಲವೇ?” ಎಂದು ಪ್ರಶ್ನಿಸಿತು.

ದೂರುದಾರರ ಪರ ವಕೀಲ ಶತಭಿಷ್‌ ಶಿವಣ್ಣ ಅವರು “ಫಾರ್ಮ್‌ 7 ಸಲ್ಲಿಸಿರುವಾಗ ನಡೆದಿರುವ ಛದ್ಮವೇಷ ಕೃತ್ಯ ಮತ್ತು ವಂಚನೆಯನ್ನು ಬಯಲಿಗೆ ಎಳೆಯಲು ತನಿಖೆ ಅಗತ್ಯವಾಗಿದೆ. ಇತರೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಪಿತೂರಿ ಇದರ ಹಿಂದೆ ಇದೆ” ಎಂದರು.

ಪ್ರಕರಣದ ದೂರನ್ನು ಗಮನಿಸಿದ ಪೀಠವು “ಇದು ಮೇಲ್ನೋಟಕ್ಕೆ ಆತುರದಿಂದ ದಾಖಲಿಸಿದ ದೂರಿನಂತೆ ಕಾಣುತ್ತಿದೆ” ಎಂದು ಅಭಿಪ್ರಾಯಪಟ್ಟಿತು. ಅಲ್ಲದೇ, ಅರ್ಜಿದಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಿ ವಿಚಾರಣೆಯನ್ನು ಅಕ್ಟೋಬರ್‌ 27ಕ್ಕೆ ಮುಂದೂಡಿತು.