ಸುದ್ದಿಗಳು

ಪತ್ರಕರ್ತೆ ಗೌರಿ ಹತ್ಯೆ: ಕೋಕಾ ಕಾಯಿದೆಯಡಿ ಆರೋಪ ಕೈ ಬಿಟ್ಟಿರುವುದನ್ನು ʼಸುಪ್ರೀಂʼನಲ್ಲಿ ಪ್ರಶ್ನಿಸಿದ ಕವಿತಾ ಲಂಕೇಶ್

Bar & Bench

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಯೋರ್ವನ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆಯಡಿ (ಕೋಕಾ) ಆರೋಪ ಕೈಬಿಟ್ಟಿರುವುದನ್ನು ಪ್ರಶ್ನಿಸಿ ಗೌರಿ ಸಹೋದರಿ, ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್‌ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು ಈ ಕುರಿತಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

ಆರೋಪಿ ಮೋಹನ್‌ ನಾಯಕ್‌ ವಿರುದ್ಧ ಕೋಕಾ ಕಾಯಿದೆಯಡಿಯ ಆರೋಪಗಳನ್ನು ಹೈಕೋರ್ಟ್ ರದ್ದುಪಡಿಸಿದ ನಂತರ ಆತ ಕಳೆದ ಕೆಲ ತಿಂಗಳಲ್ಲಿ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದಾನೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು ಆದೇಶ ನೀಡುವುದು ಬಾಕಿ ಇದೆ ಎಂದು ಮನವಿಯುಲ್ಲಿ ವಿವರಿಸಲಾಗಿದೆ.

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಅನಿರುದ್ಧ ಬೋಸ್ ಅವರ ಪೀಠ ಈ ಸಂಬಂಧ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು ಮುಂದಿನ ವಿಚಾರಣೆಗಾಗಿ ಜುಲೈ 15ಕ್ಕೆ ಪ್ರಕರಣವನ್ನು ನಿಗದಿಪಡಿಸಿದೆ.

ವಕೀಲೆ ಅಪರ್ಣಾ ಭಟ್‌ ಅವರ ಸಹಕಾರದೊಂದಿಗೆ ಹಿರಿಯ ನ್ಯಾಯವಾದಿ ಹುಜೇಫಾ ಅಹ್ಮದಿ ಅವರು ಅರ್ಜಿದಾರರನ್ನು ಪ್ರತಿನಿಧಿಸಿದರು.

2018ರಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರ ಆದೇಶವನ್ನು ಮತ್ತು ಆ ಬಳಿಕ ಸಲ್ಲಿಸಿದ ಪೂರಕ ಆರೋಪಪಟ್ಟಿಯನ್ನು 2021ರ ಏಪ್ರಿಲ್ 22ರಂದು ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿದ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ಮೋಹನ್ ನಾಯಕ್ ವಿರುದ್ಧ 2000ರ ಕೋಕಾ ಕಾಯಿದೆಯ ಸೆಕ್ಷನ್ 3 (1) (ಐ), 3 (2), 3 (3) ಮತ್ತು 3 (4) ರ ಅಡಿಯಲ್ಲಿ ಅಪರಾಧಗಳನ್ನು ಕೈಬಿಡಲಾಗಿದೆ. ಕೃತ್ಯ ಎಸಗುವ ಮೊದಲು ಮತ್ತು ನಂತರ ಕೊಲೆಗಾರರಿಗೆ ಆಶ್ರಯ ನೀಡುವಲ್ಲಿ ನಾಯಕ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎಂದು ಮೇಲ್ಮನವಿಯಲ್ಲಿ ತಿಳಿಸಲಾಗಿದೆ.

"ಅಪರಾಧಕ್ಕೆ ಮೊದಲು ಮತ್ತು ನಂತರ ಕೊಲೆಗಾರರಿಗೆ ಆಶ್ರಯ ನೀಡುವಲ್ಲಿ ನಾಯಕ್ ಸಕ್ರಿಯವಾಗಿದ್ದ ಮತ್ತು ಕೃತ್ಯ ಎಸಗಿದ ಬಳಿಕ ಹಲವಾರು ಪಿತೂರಿ, ದುಷ್ಪ್ರೇರಣೆ, ಸಂಚು, ತಂತ್ರಗಾರಿಕೆಯಲ್ಲಿ ತೊಡಗಿಕೊಂಡಿದ್ದ ಎಂಬುದು ತನಿಖೆಯಿಂದ ಸಾಬೀತುಪಡಿಸಿದೆ. ಆದ್ದರಿಂದ, ಆತ ನಿರಂತರವಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಗೌರಿ ಲಂಕೇಶ್ ಅವರ ಹತ್ಯೆಯಲ್ಲಿ ಪ್ರತಿವಾದಿ ನಂ. 6 ಭಾಗಿಯಾಗಿರುವುದಕ್ಕೆ ಮತ್ತು ಆರಂಭದಿಂದಲೂ ಸಂಘಟಿತ ಅಪರಾಧ ಗುಂಪಿನ ಭಾಗವಾದ ಒಂದನೇ ಆರೋಪಿ ಅಮೋಲ್‌ ಕಾಳೆ ಜೊತೆ ಹಾಗೂ ಎಂಟನೇ ಆರೋಪಿ ಶಸ್ತ್ರಾಸ್ತ್ರ ತರಬೇತುದಾರ ರಾಜೇಶ್‌ ಡಿ ಬಂಗೇರ ಜೊತೆ ನಿಕಟ ಸಂಪರ್ಕದಲ್ಲಿದ್ದು, ಆತ ಪ್ರಕರಣದೊಂದಿಗೆ ನಂಟು ಹೊಂದಿರುವುದನ್ನು ಸಾಬೀತುಪಡಿಸಲು ತನಿಖಾ ಸಂಸ್ಥೆ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೋಕಾ ಕಾಯಿದೆ 2000ರ ಸೆಕ್ಷನ್ 24ನ್ನು ಪರಿಶೀಲಿಸದೆ ಹೈಕೋರ್ಟ್‌ ತಪ್ಪೆಸಗಿದೆ ಎಂದು ಕೂಡ ಅರ್ಜಿ ತಿಳಿಸಿದೆ. ಕಾಯಿದೆ ಪ್ರಕಾರ ಎಡಿಜಿಪಿ ಶ್ರೇಣಿಗಿಂತ ಕೆಳಗಿರುವ ಯಾವುದೇ ಅಧಿಕಾರಿ ಪೂರ್ವಾನುಮತಿ ನೀಡಬಾರದು ಎನ್ನಲಾಗಿದ್ದು ಇದನ್ನು ಪ್ರಸ್ತುತ ಪ್ರಕರಣದಲ್ಲಿ ಅನುಸರಿಸಲಾಗಿದೆ ಎಂದು ಹೇಳಲಾಗಿದೆ.

ಗೌರಿ ಹತ್ಯೆ ಮಾತ್ರವಲ್ಲದೆ ಅನೇಕ ಸಂಘಟಿತ ಅಪರಾಧಗಳನ್ನು ಎಸಗಿದ ಅಮೋಲ್‌ ಕಾಳೆ ನೇತೃತ್ವದ ಗುಂಪಿನೊಂದಿಗೆ ಮೋಹನ್‌ ನಾಯಕ್‌ ನಂಟು ಹೊಂದಿದ್ದ ಎಂದು ಎಸ್‌ಐಟಿ ಕೈಗೊಂಡ ತನಿಖೆಯಿಂದ ತಿಳಿದು ಬಂದಿದೆ ಎಂಬುದಾಗಿ ಅರ್ಜಿಯಲ್ಲಿ ವಿವರಿಸಲಾಗಿದ್ದು ಆ ಅಪರಾಧಗಳ ಪಟ್ಟಿ ಹೀಗಿದೆ:

ಎ. ಮಹಾರಾಷ್ಟ್ರದ ಪುಣೆಯಲ್ಲಿ 2013 ರಲ್ಲಿ ಡಾ.ನರೇಂದ್ರ ದಾಬೋಲ್ಕರ್ ಅವರ ಹತ್ಯೆ.

ಬಿ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ 2015 ರಲ್ಲಿ ಗೋವಿಂದ ಪನ್ಸಾರೆ ಅವರ ಕಗ್ಗೊಲೆ.

ಸಿ. 2015ರ ಆಗಸ್ಟ್‌ 30ರಂದು ಗುಂಡಿಕ್ಕಿ ಡಾ.ಎಂ.ಎಂ ಕಲಬುರ್ಗಿ ಅವರ ಹತ್ಯೆ.

ಡಿ. 2018ರಲ್ಲಿ ಮೈಸೂರಿನ ಪ್ರೊ. ಕೆ ಎಸ್‌ ಭಾಗವನ್ ಅವರ ಹತ್ಯೆಗೆ ಸಂಚು.