ಪ್ರಜ್ವಲ್‌ ರೇವಣ್ಣ ಫೇಸ್‌ಬುಕ್‌
ಸುದ್ದಿಗಳು

[ಬ್ರೇಕಿಂಗ್‌] ಪ್ರಜ್ವಲ್‌ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲು ಅನುಮತಿ ಕೋರಿ ಎಸ್‌ಐಟಿಯಿಂದ ಅರ್ಜಿ ಸಲ್ಲಿಕೆ

“ಎಚ್‌ ಡಿ ರೇವಣ್ಣ ವಿರುದ್ಧದ ಆರೋಪವು ಜಾಮೀನು ನೀಡುವಂತಹದ್ದಾಗಿದೆ. ಅವರ ವಿರುದ್ಧ ಯಾವುದೇ ಹೆಚ್ಚಿನ ಸೆಕ್ಷನ್‌ ಅನ್ವಯಿಸಲಾಗಿಲ್ಲ. ಆದರೆ, ಪ್ರಜ್ವಲ್‌ ವಿರುದ್ಧ ಐಪಿಸಿ ಸೆಕ್ಷನ್‌ 376 ಅನ್ವಯಿಸಲು ಮನವಿ ಮಾಡಲಾಗಿದೆ” ಎಂದು ಮೂಲಗಳು ತಿಳಿಸಿವೆ.

Bar & Bench

ಲೈಂಗಿಕ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ದೇಶಾದ್ಯಂತ ಸುದ್ದಿಯ ಕೇಂದ್ರಬಿಂದುವಾಗಿರುವ ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್‌ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ (ಐಪಿಸಿ ಸೆಕ್ಷನ್‌ 376) ದಾಖಲಿಸಲು ಅನುಮತಿ ಕೋರಿ ವಿಶೇಷ ತನಿಖಾ ದಳವು (ಎಸ್‌ಐಟಿ) ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ ಎನ್ನಲಾಗಿದೆ.

“ಪ್ರಜ್ವಲ್‌ ತಂದೆ ರೇವಣ್ಣ ವಿರುದ್ಧದ ಆರೋಪವು ಜಾಮೀನು ನೀಡುವಂತಹದ್ದಾಗಿವೆ. ಅವರ ವಿರುದ್ಧ ಯಾವುದೇ ಹೆಚ್ಚಿನ ಸೆಕ್ಷನ್‌ ಅನ್ವಯಿಸಲಾಗಿಲ್ಲ. ಆದರೆ, ಪ್ರಜ್ವಲ್‌ ವಿರುದ್ಧ ಐಪಿಸಿ ಸೆಕ್ಷನ್‌ 376 ಅನ್ವಯಿಸಲು ಮನವಿ ಮಾಡಲಾಗಿದೆ” ಎಂದು ʼಬಾರ್‌ ಅಂಡ್‌ ಬೆಂಚ್‌ʼ ಮೂಲಗಳು ತಿಳಿಸಿವೆ.

ರೇವಣ್ಣ ಅವರ ಮನೆ ಕೆಲಸದ ಮಹಿಳೆ ನೀಡಿದ ದೂರಿನ ಅನ್ವಯ ಹಾಸನದ ಹೊಳೆ ನರಸೀಪುರದ ಟೌನ್‌ ಪೊಲೀಸ್‌ ಠಾಣೆಯಲ್ಲಿ ರೇವಣ್ಣ ಮತ್ತು ಪ್ರಜ್ವಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಪ್ರಕರಣದಲ್ಲಿ ಎಚ್‌ ಡಿ ರೇವಣ್ಣ ಮೊದಲ ಆರೋಪಿಯಾಗಿದ್ದು, ಪ್ರಜ್ವಲ್‌ನನ್ನು ಎರಡನೇ ಆರೋಪಿಯನ್ನಾಗಿಸಲಾಗಿದೆ.

ಏಪ್ರಿಲ್‌ 28ರಂದು ದಾಖಲಾಗಿರುವ ಎಫ್‌ಐಆರ್‌ನಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 354(ಎ), 354(ಡಿ), 506, 509 ಅಡಿ ಪ್ರಕರಣ ದಾಖಲಿಸಲಾಗಿದೆ. ಇದರ ತನಿಖೆಯನ್ನು ಹಿರಿಯ ಐಪಿಎಸ್‌ ಅಧಿಕಾರಿ ಬಿ ಕೆ ಸಿಂಗ್‌ ನೇತೃತ್ವದ ವಿಶೇಷ ತನಿಖಾ ತಂಡ ಆರಂಭಿಸಿದೆ.

ಲೋಕಸಭೆಯ ಎರಡನೇ ಹಂತದ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಪ್ರಜ್ವಲ್‌ ರೇವಣ್ಣ ಅವರದು ಎನ್ನಲಾದ ಹಲವು ಮಹಿಳೆಯರ ಜೊತೆಗಿನ ಖಾಸಗಿ ಕ್ಷಣಗಳ ವಿಡಿಯೊ, ಆಡಿಯೊಗಳನ್ನು ಒಳಗೊಂಡ ಸಾವಿರಾರು ಪೆನ್‌ಡ್ರೈವ್‌ ಹಾಸನದ ಬೀದಿಗಳಲ್ಲಿ ಪತ್ತೆಯಾಗಿದ್ದವು. ಈ ಸಂಬಂಧದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಹಲವು ಮಹಿಳೆಯರ ಗೌರವಕ್ಕೆ ಧಕ್ಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಅತ್ಯಾಚಾರ ಆರೋಪ ಸೇರ್ಪಡೆ ಮಾಡಲು ಎಸ್‌ಐಟಿ ತನಿಖಾಧಿಕಾರಿಗಳು ಕೋರಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ರೇವಣ್ಣ ವಿರುದ್ಧ ಯಾವುದೇ ಹೆಚ್ಚಿನ ಅಪರಾಧದ ಆರೋಪ ಮಾಡಿಲ್ಲವಾದ್ದರಿಂದ ಅವರು ವಿಶೇಷ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಹಿಂಪಡೆದಿದ್ದಾರೆ. ಹಗರಣ ಬೆಳಕಿಗೆ ಬರುತ್ತಲೇ ರಾಜತಾಂತ್ರಿಕ ಪಾಸ್‌ಪೋರ್ಟ್‌ ಬಳಸಿ, ಪ್ರಜ್ವಲ್‌ ವಿದೇಶಕ್ಕೆ ಹಾರಿದ್ದಾರೆ. ತನಿಖೆ ಹಾಜರಾಗುವಂತೆ ರೇವಣ್ಣ ಮತ್ತು ಪ್ರಜ್ವಲ್‌ಗೆ ಸಿಆರ್‌ಪಿಸಿ ಸೆಕ್ಷನ್‌ 41(ಎ) ಅಡಿ ನೋಟಿಸ್‌ ಸಹ ನೀಡಲಾಗಿದೆ. ಆದರೆ, ಇದಕ್ಕೆ ವಾರದ ಸಮಯ ನೀಡುವಂತೆ ಪ್ರಜ್ವಲ್‌ ಮತ್ತು ರೇವಣ್ಣ ಅವರು ತಮ್ಮ ವಕೀಲರ ಮೂಲಕ ಎಸ್‌ಐಟಿಗೆ ಕೋರಿದ್ದರು.