Yasin Malik, Delhi HC 
ಸುದ್ದಿಗಳು

ಕಾಶ್ಮೀರ ಸಮಸ್ಯೆ ಬಗೆಹರಿಸಲು ಆರು ಸರ್ಕಾರಗಳೊಂದಿಗೆ ಕೆಲಸ; ಗುಪ್ತಚರ ಇಲಾಖೆ ಮನವಿ ಮೇರೆಗೆ ಉಗ್ರ ಹಫೀಜ್‌ ಭೇಟಿ: ಯಾಸಿನ್

ಕಾಶ್ಮೀರಿ ಪಂಡಿತರ ನರಮೇಧ ಮತ್ತು ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎನ್ನುವ ಆರೋಪಗಳನ್ನು ಮಲಿಕ್ ನಿರಾಕರಿಸಿದರು. ಅದು ನಿಜವಾಗಿದ್ದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಹೇಳಿದರು.

Bar & Bench

ತಾನು 1990ರಲ್ಲಿ ಬಂಧನಕ್ಕೊಳಗಾದ ನಂತರ, ಪ್ರಧಾನ ಮಂತ್ರಿಗಳಾದ ವಿ ಪಿ ಸಿಂಗ್ ಅವರಿಂದ ಹಿಡಿದು ಮನಮೋಹನ್‌ ಸಿಂಗ್‌ ಅವರವರೆಗೆ ಕಾಶ್ಮೀರ ಸಮಸ್ಯೆ ಬಗೆಹರಿಸಲು ಕೇಂದ್ರದ ಆರು ಸರ್ಕಾರಗಳು ನಿರಂತರವಾಗಿ ನನ್ನನ್ನು ತೊಡಗಿಸಿದ್ದವು ಎಂದು ಕಾಶ್ಮೀರದ ಮಾಜಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.  

2006ರಲ್ಲಿ ಆಗಿನ ಗುಪ್ತಚರ ವಿಭಾಗದ  ವಿಶೇಷ ನಿರ್ದೇಶಕ ವಿ ಕೆ ಜೋಶಿ ಅವರ ಕೋರಿಕೆಯ ಮೇರೆಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಹಫೀಜ್ ಸಯೀದ್ ಮತ್ತಿತರ ಉಗ್ರರನ್ನು ಭೇಟಿಯಾಗಿದ್ದಾಗಿಯೂ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆಗಳಲ್ಲಿ ತಿಳಿಸಿದ್ದಾರೆ.

“ರಾಷ್ಟ್ರ ರಾಜಧಾನಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಉಗ್ರವಾದ ಮತ್ತು ಶಾಂತಿಯ ಸಂವಾದಗಳು ಒಂದೇ ಸಮಯದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ತಿಳಿಸಿ ಹಫೀಝ್ ಸಯೀದ್ ಮತ್ತು ಪಾಕಿಸ್ತಾನದ ಇನ್ನಿತರ ತೀವ್ರವಾದಿ ನಾಯಕರೊಂದಿಗೆ ಮಾತುಕತೆ ನಡೆಸುವಂತೆ ನನಗೆ ನಿರ್ದಿಷ್ಟವಾಗಿ ವಿನಂತಿಸಲಾಗಿತ್ತು” ಎಂದು ಅವರು ಹೇಳಿದರು.

ಈ ಸಭೆಯಿಂದ ಭಾರತಕ್ಕೆ ಹಿಂದಿರುಗಿದ ನಂತರ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಎನ್ ಕೆ ನಾರಾಯಣನ್ ಅವರನ್ನು ಭೇಟಿಯಾಗಿ ಅದರ ಬಗ್ಗೆ ವಿವರಿಸಿದೆ. ನನ್ನ ಪ್ರಯತ್ನ, ಸಮಯ, ತಾಳ್ಮೆ ಮತ್ತು ಸಮರ್ಪಣೆಗೆ ಪ್ರಧಾನಿಯವರು ಕೃತಜ್ಞತೆ ಸಲ್ಲಿಸಿದ್ದರು ಎಂದು ಸೈಯದ್‌ ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದೊಂದಿಗಿನ ತಮ್ಮ ಸಂಬಂಧ ಮತ್ತು ಆಗಿನ ಗುಪ್ತಚರ ಬ್ಯೂರೋ (ಐಬಿ) ವಿಶೇಷ ನಿರ್ದೇಶಕ ಅಜಿತ್ ದೊವಲ್‌ ಅವರೊಂದಿಗಿನ ಭೇಟಿಗಳನ್ನು ಸಹ ಮಲಿಕ್ ತಮ್ಮ ಲಿಖಿತ ಸಲ್ಲಿಕೆಗಳಲ್ಲಿ ವಿವರಿಸಿದ್ದಾರೆ. 2000ದ ದಶಕದ ಆರಂಭದಲ್ಲಿ ದೊವಲ್‌ ತಮ್ಮನ್ನು ಜೈಲಿನಲ್ಲಿ ಭೇಟಿ ಮಾಡಿ ಬಿಡುಗಡೆಯ ಸುದ್ದಿಯನ್ನು ತಿಳಿಸಿದ್ದರು ಎಂದು ಅವರು ವಿವರಿಸಿದ್ದಾರೆ.

ಇದಲ್ಲದೆ, ಕಾಶ್ಮೀರದಲ್ಲಿ ಆಗಿನ ಪ್ರಧಾನಿ ವಾಜಪೇಯಿ ಅವರ ಶಾಂತಿ ಪ್ರಕ್ರಿಯೆಗೆ ಬೆಂಬಲ ನೀಡುವಂತೆ ಕೋರಲು ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆಗಿನ ವಿರೋಧಪಕ್ಷವಾಗಿದ್ದ ಕಮ್ಯುನಿಸ್ಟ್ ನಾಯಕರನ್ನು  ಭೇಟಿಯಾಗಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ.

2004ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, 2006ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮನ್ನು ಔಪಚಾರಿಕ ಮಾತುಕತೆಗೆ ಆಹ್ವಾನಿಸಿದರು, ಅಲ್ಲಿ ಸಿಂಗ್ ಅವರು ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಬಯಸುವುದಾಗಿ ತಮಗೆ ತಿಳಿಸಿದರು ಎಂದಿದ್ದಾರೆ.

ಈ ಸಭೆಯ ನಂತರ, ಮಲಿಕ್ ಅಮೆರಿಕಕ್ಕೆ ಹೋಗಿ ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾದರು. ಆದರೆ ಶೀಘ್ರದಲ್ಲೇ ಪ್ರಧಾನಿ ಸಿಂಗ್ ವಿರುದ್ಧ ಟೀಕೆಗಳು ಕೇಳಿಬಂದು, ನಂತರ ಮಲಿಕ್ ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಪತ್ರ ಬರೆದರು.

ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಾತನಾಡಲು ಸರ್ಕಾರಗಳು ತಮ್ಮನ್ನು ಆಹ್ವಾನಿಸುತ್ತಿದ್ದವು ಎಂದು ಮಲಿಕ್ ಹೇಳಿದ್ದಾರೆ.

ತಮ್ಮ ಲಿಖಿತ ಹೇಳಿಕೆಯಲ್ಲಿ ಮಲಿಕ್‌, ಕಾಶ್ಮೀರಿ ಪಂಡಿತರ ನರಮೇಧ ಮತ್ತು ಸಾಮೂಹಿಕ ಅತ್ಯಾಚಾರದ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಅದು ನಿಜವಾಗಿದ್ದರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇದಲ್ಲದೆ, 2016ರಲ್ಲಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ನಾಯಕ ಬುರ್ಹಾನ್ ವಾನಿಯ ಎನ್‌ಕೌಂಟರ್ ನಂತರ ಕಲ್ಲು ತೂರಾಟ ನಡೆದಿದ್ದಕ್ಕೆ ತನ್ನ ಬೆಂಬಲ ಇರಲಿಲ್ಲ ಎಂತಲೂ ಮಲಿಕ್‌ ವಿವರಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್‌ನಲ್ಲಿ ನಡೆಯಲಿದೆ.