ಸುದ್ದಿಗಳು

ಮಾನಹಾನಿಕರ ವರದಿ ಪ್ರಸಾರಕ್ಕೆ ತಡೆ: ನ್ಯಾಯಾಲಯದ ಮೊರೆ ಹೋದ ಆರು ಸಚಿವರು

ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಅವರು ಕೂಡ ಪ್ರತಿವಾದಿಗಳ ಪಟ್ಟಿಯಲ್ಲಿದ್ದಾರೆ. ಶನಿವಾರ ನ್ಯಾಯಾಲಯದಿಂದ ಆದೇಶ ಹೊರಬೀಳುವ ಸಾಧ್ಯತೆ ಇದೆ.

Bar & Bench

ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ಕೋರಿ ರಾಜ್ಯ ಸರ್ಕಾರದ ಆರು ಮಂದಿ ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಚಿವರಾದ ಶಿವರಾಮ್‌ ಹೆಬ್ಬಾರ್, ಕೆ ಸುಧಾಕರ್, ಎಸ್‌ ಟಿ ಸೋಮಶೇಖರ್, ಬಿ ಸಿ ಪಾಟೀಲ್‌, ಭೈರತಿ ಬಸವರಾಜು, ನಾರಾಯಣ ಗೌಡ ಅವರು ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ಗೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ.

ಲೈಂಗಿಕ ಸಿಡಿ ಹಗರಣಕ್ಕೆ ಸಂಬಂಧಿಸಿದಂತೆ ರಮೇಶ್‌ ಜಾರಕಿಹೊಳಿಯವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಬೆನ್ನಿಗೇ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರವಹಿಸಿ ಜೊತೆಯಾಗಿ ಮುಂಬೈನಲ್ಲಿ ತಂಗಿದ್ದ ಈ ಆರು ಸಚಿವರು ಮಾನಹಾನಿಕರ ಸುದ್ದಿ ಪ್ರಸಾರ ತಡೆ ಕೋರಿ ಅರ್ಜಿ ಸಲ್ಲಿಸಿರುವುದು ಕುತೂಹಲ ಹುಟ್ಟಿಸಿದೆ.

26ನೇ ಹೆಚ್ಚುವರಿ ಸೆಷನ್ಸ್‌ ಅಂಡ್‌ ಸಿವಿಲ್‌ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದ್ದು, 68 ವಿವಿಧ ಮಾಧ್ಯಮಗಳನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ರಾಷ್ಟ್ರ, ರಾಜ್ಯಮಟ್ಟದ ದಿನಪತ್ರಿಕೆಗಳು, ಟಿವಿ ಮಾಧ್ಯಮಗಳು, ವಾರಪತ್ರಿಕೆಗಳು, ಟ್ಯಾಬ್ಲಾಯ್ಡ್‌ಗಳು, ಸಾಮಾಜಿಕ ಜಾಲತಾಣಗಳು, ಸುದ್ದಿ ತಾಣಗಳು ಮಾತ್ರವಲ್ಲದೆ ಸಾಮಾಜಿಕ ಕಾರ್ಯಕರ್ತ ರಾಜಶೇಖರ್‌ ಮುಲಾಲಿ ಅವರು ಕೂಡ ಪ್ರತಿವಾದಿಗಳ ಪಟ್ಟಿಯಲ್ಲಿದ್ದಾರೆ. ಶನಿವಾರ ನ್ಯಾಯಾಲಯದಿಂದ ಆದೇಶ ಹೊರಬೀಳುವ ಸಾಧ್ಯತೆ ಇದೆ.