Chief Justice P B Varale and Justice Krishna Dixit 
ಸುದ್ದಿಗಳು

ಬ್ಯಾಕ್‌ಲಾಗ್‌ ನೇಮಕಾತಿಗೆ ಆರು ತಿಂಗಳ ಗಡುವು: ಸ್ಥಿತಿಗತಿ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸರ್ಕಾರದ ಕರ್ತವ್ಯ ಮತ್ತು ಹಾಸ್ಟೆಲ್‌ಗಳ ನಿರ್ವಹಣೆಯ ಬಗ್ಗೆಯೂ ಉಲ್ಲೇಖಿಸಲಾಗಿದೆ. ಈ ಕುರಿತೂ ರಾಜ್ಯ ಸರ್ಕಾರ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು.

Siddesh M S

“ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿಯನ್ನು ಯುದ್ದೋಪಾದಿಯಲ್ಲಿ ನಡೆಸಬೇಕು. ಗರಿಷ್ಠ ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು” ಎಂದು ಬೇರೊಂದು ಪ್ರಕರಣದಲ್ಲಿ ಮಾಡಿರುವ ಆದೇಶಕ್ಕೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ಧಾರವಾಡದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿರುವ ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿ ಮತ್ತು ಮೇಲ್ವಿಚಾರಕರ ಕೊರತೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಈ ಸಂದರ್ಭದಲ್ಲಿ ಪೀಠವು “ಎಂ ಮಂಜು ಪ್ರಸಾದ್‌ ವರ್ಸಸ್‌ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಿಗೆ ಸರ್ಕಾರದ ಎಲ್ಲಾ ಇಲಾಖೆ ಮತ್ತು ಸಂಸ್ಥೆಗಳಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಯುದ್ದೋಪಾದಿಯಲ್ಲಿ ಗರಿಷ್ಠ ಆರು ತಿಂಗಳಲ್ಲಿ ತುಂಬುವಂತೆ 2023ರ ಸೆಪ್ಟೆಂಬರ್‌ 21ರಂದು ಆದೇಶ ಮಾಡಲಾಗಿದೆ. ಇದಕ್ಕೆ ಅನುಗುಣವಾಗಿ ಏನಾದರೂ ಕ್ರಮಕೈಗೊಳ್ಳಲಾಗಿದೆಯೇ ಎಂದು ಬಯಸುವುದು ಉತ್ಪ್ರೇಕ್ಷಿತ ನಿರೀಕ್ಷೆ ಏನಲ್ಲ. ಈ ಕುರಿತು ರಾಜ್ಯ ಸರ್ಕಾರವು ಸ್ಥಿತಿಗತಿ ವರದಿ ಸಲ್ಲಿಸಬೇಕು” ಎಂದು ಆದೇಶ ಮಾಡಿದೆ.

ಇನ್ನು, “ಎಸ್‌ಸಿ/ಎಸ್‌ಟಿ ಹಾಸ್ಟೆಲ್‌ಗಳಲ್ಲಿನ ವಾರ್ಡನ್‌ ಮತ್ತು ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕಾತಿ ಆಗದಿರುವುರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ಕಳಕಳಿಯ ವಿಚಾರವಾಗಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ನಿಯಂತ್ರಕ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸರ್ಕಾರದ ಕರ್ತವ್ಯ ಮತ್ತು ಹಾಸ್ಟೆಲ್‌ಗಳ ನಿರ್ವಹಣೆಯ ಬಗ್ಗೆಯೂ ಉಲ್ಲೇಖಿಸಲಾಗಿದೆ. ಇದು ಸೂಕ್ತ ಅಂಶವಾಗಿದೆ. ಇದಕ್ಕೂ ಸಹ ರಾಜ್ಯ ಸರ್ಕಾರವು ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು” ಎಂದು ಆದೇಶಿಸಿದೆ.

ಇದಕ್ಕೂ ಮುನ್ನ ಅಮಿಕಸ್‌ ಕ್ಯೂರಿ ನಿತಿನ್‌ ರಮೇಶ್‌ ಅವರು “ಮಕ್ಕಳ ದೃಷ್ಟಿಯಿಂದ ಹುದ್ದೆ ತುಂಬುವುದು ಅಗತ್ಯ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ನಿರ್ದಿಷ್ಟವಾಗಿ ನಿಯಂತ್ರಣ ಮಾರ್ಗಸೂಚಿಗಳನ್ನು ರೂಪಿಸಿದೆ. ಹಾಸ್ಟೆಲ್‌ಗಳನ್ನು ಹೇಗೆ ನಡೆಸಬೇಕು ಎಂದು ವಿವರಿಸಿದೆ. ವಾರ್ಡನ್‌ ಮತ್ತು ವಿದ್ಯಾರ್ಥಿಗಳ ಅನುಪಾತವನ್ನು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಮಕ್ಕಳ ಆಧಾರವಿಲ್ಲದೇ ಹುದ್ದೆ ತುಂಬುವುದು ಸರಿಯಾಗುವುದಿಲ್ಲ” ಎಂದರು.

ಸರ್ಕಾರದ ವಕೀಲರು “ಹಲವು ಇಲಾಖೆಗಳಿಂದ ಸೂಚನೆ ನಿರೀಕ್ಷಿಸಲಾಗುತ್ತಿದೆ.  ಅಲ್ಲಿಂದ ಸೂಚನೆ ಬಂದ ಬಳಿಕ ಸಮಗ್ರ ಮತ್ತು ವಿಸ್ತೃತ ಆಕ್ಷೇಪಣೆ ಸಲ್ಲಿಸಲಾಗುವುದು” ಎಂದು ತಿಳಿಸಿದರು.