AIIMS Trauma Centre 
ಸುದ್ದಿಗಳು

ಪ್ರಮಾಣಪತ್ರ ನೀಡುವಾಗ ವೈದ್ಯರು ಜಾಗರೂಕರಾಗಿರಬೇಕು, ವೈದ್ಯಕೀಯ ಪದಗಳನ್ನು ಸರಳವಾಗಿ ವಿವರಿಸಬೇಕು ಎಂದ ದೆಹಲಿ ಹೈಕೋರ್ಟ್

ಐಪಿಸಿ ಸೆಕ್ಷನ್ 192ರ ಅಡಿ ಆಕ್ಷೇಪಾರ್ಹ ದಾಖಲೆಗಳನ್ನು ಸಲ್ಲಿಸುವುದು ಅಪರಾಧ ಎಂದು ಒತ್ತಿಹೇಳಿದ ನ್ಯಾಯಾಲಯ ಭವಿಷ್ಯದಲ್ಲಿ ಸಾಕ್ಷ್ಯದ ರೂಪದಲ್ಲಿ ಪ್ರಮಾಣಪತ್ರಗಳನ್ನು ನೀಡುವಾಗ ವೈದ್ಯರು ಹೆಚ್ಚು ಜಾಗರೂಕರಾಗಿರುವಂತೆ ಸೂಚಿಸಿದೆ.

Bar & Bench

ಜಾಮೀನಿಗಾಗಿ ಖಾಸಗಿ ವೈದ್ಯರಿಂದ ಅಸ್ಪಷ್ಟವೂ ಹಾಗೂ ಅಸಂಜಸವೂ ಅದ ವೈದ್ಯಕೀಯ ದಾಖಲೆಗಳನ್ನು ಪಡೆದು ಸಲ್ಲಿಸಿದರೆ ಇನ್ನು ಮುಂದೆ ಅದನ್ನು ಪರಿಗಣಿಸುವುದಿಲ್ಲ ಮತ್ತು ಅದನ್ನು ಭಾರೀ ಶಂಕೆಯಿಂದ ನೋಡಲಾಗುತ್ತದೆ ಎಂದು ದೆಹಲಿ ಹೈಕೋರ್ಟ್‌ ಎಚ್ಚರಿಕೆ ನೀಡಿದೆ. (ಹಿಮಾಂಶು ದಬಾಸ್ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ).

ಐಪಿಸಿ ಸೆಕ್ಷನ್‌ 192ರ ಅಡಿ ಆಕ್ಷೇಪಾರ್ಹ ದಾಖಲೆಗಳನ್ನು ಸಲ್ಲಿಸುವುದು ಅಪರಾಧ ಎಂದು ಒತ್ತಿಹೇಳಿದ ನ್ಯಾಯಾಲಯ ಭವಿಷ್ಯದಲ್ಲಿ ಸಾಕ್ಷ್ಯದ ರೂಪದಲ್ಲಿ ಪ್ರಮಾಣಪತ್ರಗಳನ್ನು ನೀಡುವಾಗ ವೈದ್ಯರು ಹೆಚ್ಚು ಜಾಗರೂಕರಾಗಿರುವಂತೆ ಸೂಚಿಸಿದೆ.

ಜಾಮೀನು ಪ್ರಕರಣಗಳಲ್ಲಿ ಜೈಲಿನ ವೈದ್ಯರು ಸಲ್ಲಿಸಿದ ವರದಿಗಳು ಸ್ಪಷ್ಟವಾಗಿರಬೇಕು. ಸಂಕೀರ್ಣ ವೈದ್ಯಕೀಯ ಪದಗಳನ್ನು ಸರಳಭಾಷೆಯಲ್ಲಿ ವಿವರಿಸಬೇಕು, ಕೇವಲ ವೈದ್ಯಕೀಯ ಪರಿಭಾಷೆಯಲ್ಲಿ ಉತ್ತರಿಸುವಂತಿಲ್ಲ ಎಂದು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್‌ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.

ಸ್ಥಿತಿಗತಿ ವರದಿಗಳನ್ನು ಸಿದ್ಧಪಡಿಸುವ ವೈದ್ಯರು ರೋಗ ಹಾನಿಕರವಲ್ಲದ್ದೇ / ಮಾರಕವೇ / ಸಾಂಕ್ರಾಮಿಕವಾಗಿದೆಯೇ ಎಂಬುದನ್ನು ತಿಳಿಸಬೇಕು. ಜೊತೆಗೆ ಯಾವುದೇ ಜರೂರು / ತುರ್ತು ಪರಿಸ್ಥಿತಿಯನ್ನು ಪ್ರತಿಪಾದಿಸುತ್ತದೆಯೇ ಎಂಬ ಬಗ್ಗೆ ತಮ್ಮ ಅಂತಿಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ಸ್ಪಷ್ಟವಾಗಿ ನೀಡಬೇಕು ಎಂದು ನ್ಯಾಯಾಲಯ ವಿವರಿಸಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲು ಅಧೀಕ್ಷಕರು ಸಲ್ಲಿಸಿದ್ದ ವೈದ್ಯಕೀಯ ವರದಿಗಳನ್ನು ಆಧರಿಸಿ ವಿಚಾರಣಾ ನ್ಯಾಯಾಲಯ ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿದೆ. ಆದರರೆ ವೈದ್ಯಕೀಯ ವರದಿ ಸ್ಪಷ್ಟವಾಗಿಲ್ಲ ಮತ್ತು ಅದರಲ್ಲಿ ಬಳಸಿದ ವೈದ್ಯಕೀಯ ವಿಚಾರಗಳು ನ್ಯಾಯಾಧೀಶರಿಗೆ ಸುಲಭವಾಗಿ ಅರ್ಥವಾಗುವಂತಿರಲಿಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಬಲಬದಿಯ ಗೈನೆಕೋಮಾಸ್ಟಿಯಾ ಅಥವಾ ಪುರುಷ ಸ್ತನಗಳ ಹಿಗ್ಗುವಿಕೆ, ಪೈಲ್ಸ್‌ ಮಧುಮೇಹ, ರಕ್ತದೊತ್ತಡದಿಂದ ಆರೋಪಿ ಬಳಲುತ್ತಿರುವ ಬಗ್ಗೆ ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಜೈಲು ಆಸ್ಪತ್ರೆ ನಡೆಸಿದ ಫೈನ್‌ ನೀಡಲ್‌ ಆಸ್ಪಿರೇಷನ್‌ ಕೈಟೋಲಜಿ ಪರೀಕ್ಷೆಯಲ್ಲಿ ಆರೋಪಿಗೆ ಗೈನೆಕೋಮಾಸ್ಟಿಯಾ ಇದೆ ಎಂದು ಹೇಳಿದರೆ ಆರೋಪಿ ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ ತನಗೆ ಎದೆಯ ಬಳಿ ಗಡ್ಡೆ ಇದ್ದು ಉಸಿರಾಟಕ್ಕೆ ತೊಂದರೆಯಾಗಿದ್ದು ಕ್ಯಾನ್ಸರ್‌ಗೆ ತಿರುಗುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದ್ದರು.

ಆರೋಪಿ ಈಗಾಗಲೇ ಶರಣಾಗಿರುವುದರಿಂದ ಯಾವುದೇ ಕ್ರಮ ಕೈಗೊಳ್ಳಲು ನಿರಾಕರಿಸಿದ ನ್ಯಾಯಾಲಯ ವೈದ್ಯಕೀಯ ವರದಿಗಳ ಬಗ್ಗೆ ನ್ಯಾಯಾಧೀಶರಿಗೆ ಅನುಮಾನ ಮೂಡಿದಾಗಲೆಲ್ಲಾ ಸರ್ಕಾರಿ ಆಸ್ಪತ್ರೆಯ ಇಬ್ಬರು ಅಥವಾ ಮೂವರು ತಜ್ಞರನ್ನೊಳಗೊಂಡ ವೈದ್ಯಕೀಯ ಮಂಡಳಿಗೆ ಕಳುಹಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.