UAPA 
ಸುದ್ದಿಗಳು

ಆರ್ಥಿಕ ಸ್ಥಿರತೆಗೆ ಧಕ್ಕೆ ತರದ ಚಿನ್ನ ಕಳ್ಳಸಾಗಣೆ ಯುಎಪಿಎ ಅಡಿ ಭಯೋತ್ಪಾದನಾ ಕೃತ್ಯವಲ್ಲ: ದೆಹಲಿ ಹೈಕೋರ್ಟ್

ನವದೆಹಲಿ ರೈಲು ನಿಲ್ದಾಣದಲ್ಲಿ 83 ಕಿಲೋಗ್ರಾಂಗಳಷ್ಟು ಚಿನ್ನದೊಂದಿಗೆ ಸಿಕ್ಕಿಬಿದ್ದ ಒಂಬತ್ತು ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತು.

Bar & Bench

ಭಾರತದ ಆರ್ಥಿಕ ಭದ್ರತೆ ಅಥವಾ ವಿತ್ತೀಯ ಸ್ಥಿರತೆಗೆ ಧಕ್ಕೆಯಾಗದಂತೆ ಚಿನ್ನ ಕಳ್ಳಸಾಗಣೆ ಮಾಡಿದ್ದರೆ ಅದು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದಕ ಕೃತ್ಯವಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.

ಆದ್ದರಿಂದ 2020ರ ಆಗಸ್ಟ್‌ನಲ್ಲಿ ನವದೆಹಲಿ ರೈಲು ನಿಲ್ದಾಣದಲ್ಲಿ 83.6 ಕೆಜಿ ತೂಕದ 500ಕ್ಕೂ ಹೆಚ್ಚು ಚಿನ್ನದ ಬಿಸ್ಕತ್ತುಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದ ಒಂಬತ್ತು ಮಂದಿಗೆ ನ್ಯಾಯಮೂರ್ತಿಗಳಾದ ಮುಕ್ತಾ ಗುಪ್ತಾ ಮತ್ತು ಮಿನಿ ಪುಷ್ಕರ್ಣ ಅವರಿದ್ದ ಪೀಠ ಜಾಮೀನು ನೀಡಿತು. ನಕಲಿ ದಾಖಲೆ ಬಳಸಿ ದಿಬ್ರುಗಢ- ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಪಯಣಿಸುತ್ತಿದ್ದ ಆರೋಪ ಅವರ ಮೇಲಿತ್ತು.

"... ನಕಲಿ ಕರೆನ್ಸಿ ಅಥವಾ ನಾಣ್ಯಗಳ ಸ್ವಾಧೀನ, ಬಳಕೆ, ಉತ್ಪಾದನೆ ಹಾಗೂ ಸಾಗಣೆಗಳು ತಮ್ಮಷ್ಟಕ್ಕೇ ಕಾನೂನುಬಾಹಿರ ಕೃತ್ಯ ಮತ್ತು ಅಪರಾಧವಾಗಿದೆ, ಆದರೆ, 'ಚಿನ್ನದ' ತಯಾರಿಕೆ, ಸ್ವಾಧೀನ, ಬಳಕೆ ಇತ್ಯಾದಿಗಳು ಕಾನೂನುಬಾಹಿರ ಅಥವಾ ಅಪರಾಧವಲ್ಲ... ಹೀಗಾಗಿ ಭಾರತದ ಆರ್ಥಿಕ ಭದ್ರತೆ ಅಥವಾ ವಿತ್ತೀಯ ಸ್ಥಿರತೆಗೆ ಧಕ್ಕೆ ತರುವುದಕ್ಕೆ ಯಾವುದೇ ಸಂಬಂಧವಿಲ್ಲದೆ ಕೇವಲ ಚಿನ್ನ ಕಳ್ಳಸಾಗಣೆ ಮಾಡುವುದು ಭಯೋತ್ಪಾದಕ ಕೃತ್ಯವಾಗಲಾರದು” ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಲಾಗಿದೆ.

ಪ್ರಕರಣದಲ್ಲಿ ಯಾವುದೇ ಸಾವು ಸಂಭವಿಸಿಲ್ಲವಾದ್ದರಿಂದ ಯುಎಪಿಎ ಸೆಕ್ಷನ್ 16ರ ಷರತ್ತು 'ಬಿ' ಅಡಿ ನೀಡಲಾಗುವ 5 ವರ್ಷಗಳ ಅವಧಿಯ ಕನಿಷ್ಠ ಜೈಲು ಶಿಕ್ಷೆಯನ್ನು ಜೀವಾವಧಿಗೆ ವಿಸ್ತರಿಸಬಹುದಾದ ಶಿಕ್ಷೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ತಿಳಿಸಿತು.

ಈ ಹಿನ್ನೆಲೆಯಲ್ಲಿ ₹ 1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಶ್ಯೂರಿಟಿಯ ಷರತ್ತು ವಿಧಿಸಿ ಅದು ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿತು. ಆರೋಪಿಗಳು ತಮ್ಮ ಪಾಸ್‌ಪೋರ್ಟ್‌ಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸಬೇಕು ಮತ್ತು ಪೂರ್ವಾನುಮತಿ ಇಲ್ಲದೆ ದೇಶ ತೊರೆಯಬಾರದು ಎಂದು ಆದೇಶಿಸಿತು.