Supreme Court, Judicial appointments
Supreme Court, Judicial appointments 
ಸುದ್ದಿಗಳು

ಸಾಮಾಜಿಕ ಮಾಧ್ಯಮಗಳು ನ್ಯಾಯಾಧೀಶರ ಮಾತು ಕೇಳುವುದಿಲ್ಲ, ಬಲಾಢ್ಯರಿಗಷ್ಟೇ ಮನ್ನಣೆ ನೀಡುತ್ತಿವೆ: ಸುಪ್ರೀಂಕೋರ್ಟ್

Bar & Bench

ಪೋರ್ಟಲ್‌ಗಳು, ಯೂಟ್ಯೂಬ್, ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳ ಬಗ್ಗೆ ಸುಪ್ರೀಂಕೋರ್ಟ್‌ ಗುರುವಾರ ಕಳವಳ ವ್ಯಕ್ತಪಡಿಸಿದ್ದು ಸಾಮಾಜಿಕ ಮಾಧ್ಯಮ ಕಂಪೆನಿಗಳು ನ್ಯಾಯಾಧೀಶರಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.

ಇಂತಹ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳು ಕೇವಲ ಬಲಾಢ್ಯರ ಮಾತುಗಳನ್ನು ಕೇಳುತ್ತವೆ ಮತ್ತು ನ್ಯಾಯಾಂಗ ಸಂಸ್ಥೆಗಳ ಬಗ್ಗೆ ಯಾವುದೇ ಉತ್ತರಾದಾಯಿತ್ವ ಹೊಂದಿಲ್ಲ ಎಂದು ನ್ಯಾಯಾಲಯ ಹೇಳಿದೆ.

"ನಾನು ಯಾವುದೇ ಸಾರ್ವಜನಿಕ ಚಾನೆಲ್, ಟ್ವಿಟರ್, ಫೇಸ್‌ಬುಕ್ ಅಥವಾ ಯೂಟ್ಯೂಬ್ ನೋಡುವುದಿಲ್ಲ. ಅವರು ಎಂದಿಗೂ ನಮಗೆ ಪ್ರತಿಕ್ರಿಯಿಸುವುದಿಲ್ಲ ಮತ್ತು ಯಾವುದೇ ಜವಾಬ್ದಾರಿ ಹೊಂದಿಲ್ಲ. ಕೆಟ್ಟದಾಗಿ ಬರೆದಿವೆ. ಈ ಬಗ್ಗೆ ಅವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಮತ್ತು ಇದು ತಮ್ಮ ಹಕ್ಕು ಎಂದು ಭಾವಿಸಿವೆ" ಎಂಬುದಾಗಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ವೇದಿಕೆಗಳಲ್ಲಿ ಪ್ರಸಾರವಾಗುವ ಸುದ್ದಿಗಳಿಗೆ ಹಲವು ಬಾರಿ ಕೋಮು ಬಣ್ಣ ನೀಡಲಾಗುತ್ತಿದ್ದು ಇದು ದೇಶಕ್ಕೆ ಕೆಟ್ಟ ಹೆಸರು ತರುತ್ತದೆ ಎಂದು ಕೂಡ ಅವರು ಹೇಳಿದ್ದಾರೆ.

ನೀವು ಯುಟ್ಯೂಬ್ ನೋಡಿದರೆ ಅಲ್ಲಿ ಸಾಕಷ್ಟು ನಕಲಿ ಸುದ್ದಿಗಳು ಗೋಚರಿಸುತ್ತವೆ. ವೆಬ್ ಪೋರ್ಟಲ್‌ಗಳಿಗೆ ಯಾವುದೇ ನಿಯಂತ್ರಣವಿಲ್ಲ . ಸುದ್ದಿಗೆ ಕೋಮು ಬಣ್ಣವನ್ನು ನೀಡುವ ಪ್ರಯತ್ನವಿದ್ದು ಅದು ಸಮಸ್ಯೆಯಾಗಿದೆ. ಇದು ಅಂತಿಮವಾಗಿ ದೇಶಕ್ಕೆ ಕೆಟ್ಟ ಹೆಸರನ್ನು ತರುತ್ತದೆ.

ಕೋವಿಡ್‌ ಸೋಂಕು ಹರಡುವುದಕ್ಕೂ ಮಾರ್ಚ್ 2020ರಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಗೂ ಸಂಪರ್ಕ ಕಲ್ಪಿಸಿ ಮಾಧ್ಯಮಗಳು ನಕಲಿ ಸುದ್ದಿ ಹರಡುವುದಕ್ಕೆ ತಡೆ ನೀಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ನೂತನ ಮಾಹಿತಿ ತಂತ್ರಜ್ಞಾನ ನಿಯಮಾವಳಿ 2021 ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸಲು ಪ್ರಯತ್ನಿಸುತ್ತದೆ ಎಂದು ಇದೇ ವೇಳೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರತಿಕ್ರಿಯಿಸಿದರು. ಅಲ್ಲದೆ ಅವರು ಐಟಿ ನಿಯಮಾವಳಿಗಳನ್ನು ಕುರಿತು ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಬೇಕೆಂದು ಕೇಂದ್ರ ಸರ್ಕಾರ ಕೋರಿರುವ ಮನವಿಯನ್ನು ಗಣನೆಗೆ ತೆಗೆದುಕೊಳ್ಳುವಂತೆ ಅವರು ಮನವಿ ಮಾಡಿದರು. ಬೇರೆ ಬೇರೆ ಹೈಕೋರ್ಟ್‌ಗಳು ವಿಭಿನ್ನ ಆದೇಶ ನೀಡುತ್ತಿದ್ದು ಸುಪ್ರೀಂಕೋರ್ಟ್‌ನಲ್ಲಿ ಅದರ ವಿಚಾರಣೆ ನಡೆದರೆ ಸಮಗ್ರ ಚಿತ್ರಣ ದೊರೆಯುತ್ತದೆ. ಏಕೆಂದರೆ ಇದು ದೇಶವ್ಯಾಪಿ ಸಮಸ್ಯೆಯಾಗಿದೆ” ಎಂದರು.

ಇದಕ್ಕೆ ಸಮ್ಮತಿಸಿದ ಸಿಜೆಐ ಜಮೀಯತ್ ಉಲಮಾ-ಇ-ಹಿಂದ್ ಮತ್ತು ಪೀಸ್‌ ಪಾರ್ಟಿ ಸಲ್ಲಿಸಿರುವ ಪ್ರಸ್ತುತ ಅರ್ಜಿಯನ್ನು ವರ್ಗಾವಣೆ ಮನವಿಯೊಂದಿಗೆ ಪಟ್ಟಿ ಮಾಡಿದ್ದು ಆರು ವಾರಗಳ ಬಳಿಕ ಪ್ರಕರಣದ ವಿಚಾರಣೆ ನಡೆಯಲಿದೆ.