Covid doctors  
ಸುದ್ದಿಗಳು

ವೈದ್ಯಕೀಯ ವೃತ್ತಿಪರರೊಂದಿಗೆ ನಿಲ್ಲದಿದ್ದರೆ ಸಮಾಜ ನಮ್ಮನ್ನು ಕ್ಷಮಿಸದು: ಕೋವಿಡ್ ಪರಿಹಾರ ಕುರಿತಂತೆ ಸುಪ್ರೀಂ

ಆದರೆ ತಾನು ಪ್ರತಿಯೊಂದು ಪ್ರಕರಣದಲ್ಲಿಯೂ ಪ್ರತ್ಯೇಕವಾಗಿ ತೀರ್ಪು ನೀಡುವುದಿಲ್ಲ ಬದಲಿಗೆ ಸಾಮಾನ್ಯ ಮಾರ್ಗಸೂಚಿ ಹೊರಡಿಸುವುದಾಗಿ ನ್ಯಾಯಾಲಯ ಮಂಗಳವಾರ ಹೇಳಿತು.

Bar & Bench

ವೈದ್ಯಕೀಯ ವೃತ್ತಿಪರರೊಂದಿಗೆ ಅದರಲ್ಲಿಯೂ ಕೋವಿಡ್‌ 19 ಸಾಂಕ್ರಾಮಿಕ ಸಮಯದಲ್ಲಿ ಪ್ರಾಣ ಕಳೆದುಕೊಂಡ ವೈದ್ಯಕೀಯ ವೃತ್ತಿಪರರೊಂದಿಗೆ ನಾವೆಲ್ಲಾ ನಿಲ್ಲಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

'ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆಂದು ಕೇಂದ್ರ ಸರ್ಕಾರ ರೂಪಿಸಿದ್ದ ಯೋಜನೆಗೆ ಸಂಬಂಧಿಸಿದಂತೆ ಆಗ ಸಾವನ್ನಪ್ಪಿದ್ದ ವೈದ್ಯಕೀಯ ವೃತ್ತಿಪರರ ಸಂಬಂಧಿಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಈ ವಿಚಾರ ತಿಳಿಸಿತು.

ನಾವು ನಮ್ಮ ವೈದ್ಯರ ಬಗ್ಗೆ ಕಾಳಜಿ ವಹಿಸದೇ ಇದ್ದರೆ, ಸಮಾಜ ನಮ್ಮನ್ನು ಕ್ಷಮಿಸುವುದಿಲ್ಲ. ಮಾನವ ಜೀವವನ್ನು ರಕ್ಷಿಸುವ ಆದ್ಯ ವೃತ್ತಿ ವೈದ್ಯರದ್ದು. ನಾವು ವೈದ್ಯರ ಬೆಂಬಲಕ್ಕೆ ನಿಂತು ಅವರ ಬಗ್ಗೆ ಕಾಳಜಿ ವಹಿಸದಿದ್ದರೆ ಈ ದೇಶ ನಮ್ಮನ್ನು ಕ್ಷಮಿಸದು ಎಂದು ನ್ಯಾಯಮೂರ್ತಿ ನರಸಿಂಹ ತಿಳಿಸಿದರು.

ಸಾಂಕ್ರಾಮಿಕ ರೋಗ ಹರಡಿದ್ದ ಸಮಯದಲ್ಲಿ ಔಷಧ ಮಳಿಗೆ ತೆರೆದಿರಬೇಕು ಎಂದು ಮಹಾರಾಷ್ಟ್ರ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ  ಔಷಧಾಲಯ ತೆರೆದಿದ್ದ ತಮ್ಮ ಪತಿ ಕೋವಿಡ್‌ಗೆ ಬಲಿಯಾದರು. ಆದರೆ ಅವರ ಸಾವಿಗೆ ಸಂಬಂಧಿಸಿದಂತೆ ಪರಿಹಾರ ನಿರಾಕರಿಸಲಾಗಿದೆ ಎಂದು ಮಹಿಳೆಯೊಬ್ಬರು ದೂರಿದ್ದರು. ಬಾಂಬೆ ಹೈಕೋರ್ಟ್‌ ಅರ್ಜಿ ತಿರಸ್ಕರಿಸಿದ್ದರಿಂದ ಪ್ರಕರಣ ಸರ್ವೋಚ್ಚ ನ್ಯಾಯಾಲಯದ ಅಂಗಳ ತಲುಪಿತ್ತು. ಇದು ಇಡೀ ದೇಶಕ್ಕೆ ಸಂಬಂಧಿಸಿದ್ದ ವಿಚಾರ ಎಂದು ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌ ಬಳಿಕ ಉಳಿದ ವೈದ್ಯಕೀಯ ವೃತ್ತಿಪರ ಕುಟುಂಬಗಳೂ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು.

ಆದರೆ ತಾನು ಪ್ರತಿಯೊಂದು ಪ್ರಕರಣದಲ್ಲಿಯೂ ಪ್ರತ್ಯೇಕವಾಗಿ ತೀರ್ಪು ನೀಡುವುದಿಲ್ಲ ಬದಲಿಗೆ ಸಾಮಾನ್ಯ ಮಾರ್ಗಸೂಚಿ ಹೊರಡಿಸುವುದಾಗಿ ನ್ಯಾಯಾಲಯ ಮಂಗಳವಾರ ಹೇಳಿತು.

"ಪ್ರಸ್ತುತ ಪ್ರಧಾನ ಮಂತ್ರಿ ಯೋಜನೆ ಹೊರತಾಗಿ ಲಭ್ಯವಿರುವ ಇತರ ಸಮಾನಾಂತರ ಯೋಜನೆಗಳ ಬಗೆಗಿನ ದತ್ತಾಂಶ ನಮಗೆ ನೀಡಿ. ನಾವು ಕೆಲವು ಮಾರ್ಗಸೂಚಿಗಳನ್ನು ನೀಡುತ್ತೇವೆ " ಎಂದು ನ್ಯಾಯಾಲಯ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯ ಭಾಟಿ ಅವರಿಗೆ ತಿಳಿಸಿತು.