ಸುದ್ದಿಗಳು

ನಾರದ ಪ್ರಕರಣದ ಆರೋಪಿ ಸುವೇಂದು ಭೇಟಿಯ ದೃಶ್ಯಗಳನ್ನು ಮೆಹ್ತಾ ಬಹಿರಂಗಗೊಳಿಸಲಿ: ರಾಷ್ಟ್ರಪತಿಗೆ ಟಿಎಂಸಿ ಸಂಸದರ ಪತ್ರ

Bar & Bench

ನಾರದ ಪ್ರಕರಣದ ಆರೋಪಿ ಹಾಗೂ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರೊಂದಿಗೆ ಸಭೆ ನಡೆಸಿದ ಸಾಲಿಸಿಟರ್‌ ಜನರಲ್‌ (ಎಸ್‌ಜಿ) ತುಷಾರ್‌ ಮೆಹ್ತಾ ಅವರನ್ನು ತಮ್ಮ ಹುದ್ದೆಯಿಂದ ತೆಗೆದು ಹಾಕುವಂತೆ ಕೋರಿ ತೃಣಮೂಲ ಕಾಂಗ್ರೆಸ್‌ನ ಇಬ್ಬರು ಸಂಸದರು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ “ನಂದಿಗ್ರಾಮ ಶಾಸಕರಾಗಿರುವ ಸುವೇಂದು ಅಧಿಕಾರಿ ಅವರು ತಮಗೆ ತಿಳಿಸದೆ ಮನೆಗೆ ಬಂದಿದ್ದರು. ಅವರನ್ನು ತಾನು ಭೇಟಿಯಾಗಲಿಲ್ಲ. ಬದಲಿಗೆ ಸುವೇಂದು ಅವರಿಗೆ ತಮ್ಮ ಕಚೇರಿಯ ಸಿಬ್ಬಂದಿ ಚಹಾ ನೀಡಿ ತಮ್ಮನ್ನು ಭೇಟಿಯಾಗಲು ಸಾಧ್ಯವಾಗದ ವಿಚಾರವನ್ನು ತಿಳಿಸಿದರು. ಬಳಿಕ ಸುವೇಂದು ಹೊರ ನಡೆದರು ಎಂಬುದಾಗಿ ಮೆಹ್ತಾ ಹೇಳುತ್ತಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಬಹಿರಂಗಗೊಳಿಸಿದರೆ ಮಾತ್ರ ಮೆಹ್ತಾ ಮಾತಿಗೆ ಬೆಲೆ ಬರುತ್ತದೆ” ಎಂದು ಸಂಸದರಾದ ಮಹುವಾ ಮೊಯಿತ್ರಾ ಮತ್ತು ಸುಖೇಂದು ಶೇಖರ್‌ ರಾಯ್‌ ತಿಳಿಸಿದ್ದಾರೆ.

ಸುವೇಂದು ಅವರು ಮೂವತ್ತು ನಿಮಿಷಗಳ ಕಾಲ ಸಾಲಿಸಿಟರ್‌ ಜನರಲ್‌ ಅವರ ನಿವಾಸದಲ್ಲಿ ಇದ್ದುದರಿಂದ ಈ ರಹಸ್ಯ ಸಭೆ ಕುರಿತಾದ ಊಹಾಪೋಹಗಳನ್ನು ತಳ್ಳಿಹಾಕಲು ಸಾಲಿಸಿಟರ್‌ ಜನರಲ್‌ ಅವರು ಈ ಭೇಟಿಯ ಸಿಸಿಟಿವಿ ದೃಶ್ಯಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು. ಆಗ ಅವರ ಮಾತಿಗೆ ಬೆಲೆ ಬರುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಮೆಹ್ತಾ ಅವರನ್ನು ಸಾಲಿಸಿಟರ್‌ ಜನರಲ್‌ ಹುದ್ದೆಯಿಂದ ತೆಗೆದುಹಾಕಬೇಕೆಂದು ಆಗ್ರಹಿಸಿ ಸಂಸದರು ಈ ಹಿಂದೆ ಪ್ರಧಾನಿ ಅವರಿಗೆ ಪತ್ರ ಬರೆದಿದ್ದರು. ಆದರೆ ಅವರನ್ನು ತಾವು ಭೇಟಿಯಾಗಿಲ್ಲ ಎಂದು ಎಸ್‌ಜಿ ಈ ಹಿಂದೆ ಕೂಡ ಪ್ರತಿಕ್ರಿಯಿಸಿದ್ದರು.

ಮೆಹ್ತಾ ಅವರ ದೆಹಲಿ ನಿವಾಸಕ್ಕೆ ಸುವೇಂದು ಅಧಿಕಾರಿ ಭೇಟಿ ನೀಡಿರುವ ಕುರಿತು ವಿಡಿಯೋದೊಂದಿಗೆ ಸುದ್ದಿಗಳು ಪ್ರಸಾರವಾಗಿವೆ. ವಂಚನೆ, ಅಕ್ರಮ ಆಸ್ತಿ ಗಳಿಕೆ ಹಾಗೂ ಲಂಚ ಪಡೆದ ಪ್ರಕರಣಗಳಲ್ಲಿ ಸುವೇಂದು ಆರೋಪಿಯಾಗಿದ್ದು ನಾರದ ಕುಟುಕು ಕಾರ್ಯಾಚರಣೆಯಲ್ಲಿ ಅವರು ಲಂಚ ಪಡೆಯುತ್ತಿರುವುದು ಕ್ಯಾಮೆರಾದಲ್ಲಿ ದಾಖಲಾಗಿದೆ. ಸಾಲಿಸಿಟರ್‌ ಜನರಲ್‌ ಅವರು ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾಗಿದ್ದು ಸಿಬಿಐ ತನಿಖೆ ನಡೆಸುತ್ತಿರುವ ನಾರದ ಪ್ರಕರಣವೂ ಸೇರಿದಂತೆ ಮಹತ್ವದ ಪ್ರಕರಣಗಳಲ್ಲಿ ಸರ್ಕಾರಕ್ಕೆ ಮತ್ತು ಅದರ ಅಂಗಸಂಸ್ಥೆಗಳಿಗೆ ಕಾನೂನು ಸಲಹೆ ನೀಡುತ್ತಾರೆ ಎಂಬುದಾಗಿ ಸಂಸದರು ಪತ್ರದಲ್ಲಿ ವಿವರಿಸಿದ್ದರು.

ಆ ಪ್ರಕರಣದಲ್ಲಿ ಆರೋಪಿಯಾಗಿರುವವರನ್ನು ಭೇಟಿಯಾಗುವುದರಿಂದ ಸಾಲಿಸಿಟರ್‌ ಜನರಲ್‌ ಅವರ ಶಾಸನಬದ್ಧ ಕರ್ತವ್ಯಗಳೊಂದಿಗೆ ಹಿತಾಸಕ್ತಿಯ ಸಂಘರ್ಷ ಏರ್ಪಡುತ್ತದೆ. ಎಸ್‌ಜಿ ಅವರ ನಡವಳಿಕೆಯನ್ನು ತನಿಖೆ ಮಾಡಬೇಕಿದ್ದು ಹೀಗಿರುವಾಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.