ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲರಾಗಿ 50 ವರ್ಷ ಪೂರೈಸಿದ ಕೆ ಎಸ್ ವ್ಯಾಸರಾವ್ ಅವರನ್ನು ಈಚೆಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸನ್ಮಾನಿಸಿದರು. ಭೂಸುಧಾರಣಾ ಕಾನೂನುಗಳಲ್ಲಿ ವ್ಯಾಸ ರಾವ್ ತಜ್ಞರು ಎನಿಸಿದ್ದಾರೆ.
1974ರಲ್ಲಿ ಶ್ರೀನಂದಳಿಕೆ ಬಾಲಚಂದ್ರ ರಾವ್ ಅವರ ಬಳಿ ಉಡುಪಿಯಲ್ಲಿ ಪ್ರಾಕ್ಟೀಸ್ ಆರಂಭಿಸಿದ್ದರು. ಆನಂತರ ಬೆಂಗಳೂರಿಗೆ ಪ್ರಾಕ್ಟೀಸ್ ಸ್ಥಳಾಂತರಿಸಿದ್ದ ವ್ಯಾಸರಾವ್ ಅವರು ಹಿರಿಯ ವಕೀಲ ಯು ಎಲ್ ನಾರಾಯಣ ರಾವ್ ಅವರ ಚೇಂಬರ್ಸ್‌ನಲ್ಲಿ ಪ್ರಾಕ್ಟೀಸ್ ಮುಂದುವರಿಸಿದ್ದರು. ಸಂವಿಧಾನದ 21ನೇ ವಿಧಿಯಡಿ ವಿದ್ಯುಚ್ಛಕ್ತಿ ಹಕ್ಕು ಮೂಲಭೂತ ಹಕ್ಕಿನ ಭಾಗ ಎಂದು ಘೋಷಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಅರ್ಜಿದಾರರನ್ನು ವ್ಯಾಸರಾವ್ ಪ್ರತಿನಿಧಿಸಿದ್ದರು. ಯಕ್ಷಗಾನಕ್ಕೆ ಪ್ರೋತ್ಸವ ನೀಡಿದ್ದಕ್ಕಾಗಿ ಅವರಿಗೆ ʼಕಲಾಪೋಷಕ ಪುರಷ್ಕಾರʼ ನೀಡಿ ಗೌರವಿಸಲಾಗಿದೆ. ಬೆಂಗಳೂರಿನಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.
ಹಲವಾರು ಕಾನೂನು ಪಂಡಿತರನ್ನು ವ್ಯಾಸರಾವ್ ರೂಪಿಸಿದ್ದು, ವಕೀಲರಿಗೆ ಹಲವಾರು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿದ್ದಾರೆ. ಕಾನೂನು ಕ್ಷೇತ್ರದಲ್ಲಿರುವವರಿಗೆ ಹಲವು ಬಗೆಯ ಸಹಾಯಗಳನ್ನುಮಾಡಿದ್ದಾರೆ. ಕಾನೂನು ವಕೀಲಿಕೆಯನ್ನು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಜೊತೆ ಬೆಸೆದಿರುವುದು ಸಮಾಜಕ್ಕೆ ಅವರ ಬಹುಮುಖ ಪ್ರತಿಭೆಯ ಕೊಡುಗೆಯಾಗಿದೆ.