SG Tushar Mehta and Dushyant Dave 
ಸುದ್ದಿಗಳು

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿರಿಯ ವಕೀಲ ದುಶ್ಯಂತ್ ದವೆ ನಡುವೆ ಮಾತಿನ ಚಕಮಕಿ

ಫೋರ್ಜರಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಈ ಇಬ್ಬರು ಹಿರಿಯ ನ್ಯಾಯವಾದಿಗಳು ಹಾಜರಿದ್ದರು.

Bar & Bench

ಭಾರತದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ಹಿರಿಯ ನ್ಯಾಯವಾದಿ ಹಾಗೂ ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಮಾಜಿ ಅಧ್ಯಕ್ಷ ದುಶ್ಯಂತ್‌ ದವೆ ನಡುವೆ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು.

ಫೋರ್ಜರಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ  ಆರೋಪಿಯೊಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಈ ಇಬ್ಬರು ಹಿರಿಯ ನ್ಯಾಯವಾದಿಗಳು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಮತ್ತು ಸುಧಾಂಶು ಧುಲಿಯಾ ಅವರ ಪೀಠದ ಮುಂದೆ  ಹಾಜರಿದ್ದರು.

ಪ್ರಕರಣವನ್ನು ಕೈಗೆತ್ತಿಕೊಂಡ ಪೀಠ ಅದನ್ನು ವಕೀಲರು ಮುಂದೂಡಲು ಬಯಸುತ್ತಿದ್ದಾರೆಯೇ ಎಂದು ಕೇಳಿತು. ಆಗ ಮೆಹ್ತಾ, “ದವೆ ಅವರ ವಾದ ನೀರಸವಾಗಿರುತ್ತವೆ. ಜನ ಹೊರಗೆ ಮಾತನಾಡಿಕೊಳ್ಳುವುದನ್ನು, ನಾನು ಅವರ ಎದುರಿಗೇ ಹೇಳುತ್ತಿರುವೆ,” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ದವೆ, “ನಾನಿದನ್ನು ಬಲವಾಗಿ ಆಕ್ಷೇಪಿಸುತ್ತೇನೆ. ನೀವು ಸಾಲಿಸಿಟರ್‌ ಜನರಲ್‌ ಹುದ್ದೆಗೆ ಅಪಮಾನವಾಗಿದ್ದೀರಿ. ನೀವು ರಾಜಕೀಯಪ್ರೇರಿತವಾಗಿ ಅಧಿಕಾರಕ್ಕೇರಿ,ಅದರಂತೆಯೇ ಕೆಲಸ ಮಾಡುತ್ತಿರುವವರು” ಎಂದು ಖಾರವಾಗಿ ನುಡಿದರು.   

ಪರಿಸ್ಥಿತಿಯನ್ನು ತಿಳಿಗೊಳಿಸಲು ಪೀಠವು ಮಧ್ಯಪ್ರವೇಶಿಸಿತು. ನ್ಯಾ. ಗುಪ್ತಾ ಅವರು, "ನಿಮ್ಮ ಕೋಪತಾಪವನ್ನು ನಿಯಂತ್ರಿಸಿಕೊಳ್ಳಿ," ಎಂದು ಇಬ್ಬರಿಗೂ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ ತಾವು ಉದ್ವಿಗ್ನವಾಗಿಲ್ಲ ಎಂದರು. ಅಂತಿಮವಾಗಿ ನ್ಯಾಯಾಲಯವು ಪ್ರಕರಣವನ್ನು ಮುಂದೂಡಿತು.