Karnataka High Court
Karnataka High Court 
ಸುದ್ದಿಗಳು

ಘನ ತ್ಯಾಜ್ಯ ನಿರ್ವಹಣೆ: ನ್ಯಾಯಾಲಯದ ಆದೇಶ ಪಾಲನೆ ಕುರಿತು ಸಮಗ್ರ ಅಫಿಡವಿಟ್‌ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್‌ ಆದೇಶ

Bar & Bench

ಬೆಂಗಳೂರಿನ ನಗರದಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಬಗ್ಗೆ ಈವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ನ್ಯಾಯಾಲಯ ಆಗಾಗ್ಗೆ ನೀಡಿರುವ ಆದೇಶಗಳನ್ನು ಪಾಲಿಸಿರುವ ಬಗ್ಗೆ ಎರಡು ವಾರಗಳಲ್ಲಿ ಹೊಸದಾಗಿ ಸಮಗ್ರವಾದ ಅಫಿಡವಿಟ್‌ ಸಲ್ಲಿಸುವಂತೆ ರಾಜ್ಯ ಸರ್ಕಾರ, ಬಿಬಿಎಂಪಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೋಮವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.

ಬೆಂಗಳೂರಿನ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 2012ರಲ್ಲಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ಪೀಠವು ಹಲವು ತಿಂಗಳ ಬಳಿಕ ಅರ್ಜಿ ವಿಚಾರಣೆಗೆ ಬಂದಿದೆ. ಬಿಬಿಎಂಪಿ ಅಫಿಡವಿಟ್‌ ಸಲ್ಲಿಸಿ, ವರ್ಷ ಕಳೆದಿದೆ. 2022ರ ಮಾರ್ಚ್‌ 17ರಂದು ಅಫಿಡವಿಟ್‌ ಸಲ್ಲಿಸಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ, ನ್ಯಾಯಾಲಯದ ಆದೇಶಗಳನ್ನು ಜಾರಿಗೆ ತರದೇ ಇರುವುದಕ್ಕೆ ಬೇಷರತ್ ಕ್ಷಮೆ ಯಾಚಿಸಿ, ನ್ಯಾಯಾಲಯದ ಆದೇಶಗಳನ್ನು ಯಥಾವತ್ತಾಗಿ ಪಾಲಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದಾದ ನಂತರದಲ್ಲಿ ಬಿಬಿಎಂಪಿ ಹಾಗೂ ಸರ್ಕಾರ ಕೈಗೊಂಡಿರುವ ಕ್ರಮಗಳಲ್ಲಿ ಹೆಚ್ಚು ಪ್ರಗತಿ ಕಾಣುತ್ತಿಲ್ಲ. ಅಲ್ಲದೇ ಬಿಬಿಎಂಪಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅರ್ಜಿದಾರರಿಗೂ ಸಮಾಧಾನ ಇಲ್ಲ. ಆದ್ದರಿಂದ ಹೊಸದಾಗಿ ವಿವರವಾರ ಅಫಿಡವಿಟ್‌ ಸಲ್ಲಿಸಲು ಬಿಬಿಎಂಪಿ, ಸರ್ಕಾರ, ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿತು.

ಅಲ್ಲದೇ, ಹಿಂದಿನ ಆದೇಶದಂತೆ ನಗರದಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕಾಲ-ಕಾಲಕ್ಕೆ ನ್ಯಾಯಾಲಯ ನೀಡಿರುವ ಆದೇಶಗಳನ್ನು ಪಾಲಿಸಿರುವ, ಇನ್ನೂ ಪಾಲಿಸಬೇಕಾದ ಆದೇಶಗಳು, ಮುಂದೆ ಅನುಸರಿಸಬಹುದಾದ ಮಾರ್ಗಗಳ ಬಗ್ಗೆ ಸಲಹೆಗಳ ಪಟ್ಟಿಯನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಲಾಗಿತ್ತು. ಅದರಂತೆ ಯಾರೆಲ್ಲಾ ಇನ್ನೂ ಸಲ್ಲಿಸಿಲ್ಲ ಅವರೂ ಸಹ ಎರಡು ವಾರಗಳಲ್ಲಿ ಪಟ್ಟಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದ ಪೀಠವು ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿತು.