ಘನ ತ್ಯಾಜ್ಯ ನಿರ್ವಹಣೆ (ಎಸ್‌ಡಬ್ಲುಎಂ) ನಿಯಮಗಳನ್ನು ಉಲ್ಲಂಘಿಸುವವರಿಗೆ ವಿಧಿಸುವ ದಂಡ ಪರಿಷ್ಕರಣೆ ಪರಿಗಣಿಸುವಂತೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್ ಸಲಹೆ ನೀಡಿದೆ.
ಬೆಂಗಳೂರಿನ ಕವಿತಾ ಶಂಕರ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ಈ ವೇಳೆ 2019ರ ಸೆಪ್ಟೆಂಬರ್ 10ರಿಂದ 2023ರ ಆಗಸ್ಟ್ 31ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ 11.66 ಕೋಟಿ ರೂಪಾಯಿ ದಂಡ ಸಂಗ್ರಹಿಸಲಾಗಿದ್ದು, ನಿಯಮ ಉಲ್ಲಂಘಿಸಿದ 3.84 ಲಕ್ಷ ಮಂದಿಗೆ ದಂಡ ವಿಧಿಸಲಾಗಿದೆ ಎನ್ನುವುದನ್ನು ನ್ಯಾಯಾಲಯ ಗಮನಿಸಿತು.
“ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ ಮಾಡಿರುವುದನ್ನು ನೋಡಿದರೆ ಅದು ಅತ್ಯಂತ ಕಡಿಮೆ ಮೊತ್ತವಾಗಿದೆ. ಈ ನೆಲೆಯಲ್ಲಿ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರವು ದಂಡ ವಿಧಿಸುವ ಕ್ರಮವನ್ನು ಹೊಸದಾಗಿ ಪರಿಗಣಿಸುವ ಅವಶ್ಯಕತೆ ಇದೆ” ಎಂದು ನ್ಯಾಯಾಲಯ ಹೇಳಿದೆ.
“ಎಲ್ಲಾ ಪ್ರಕರಣಗಳಲ್ಲೂ ದಂಡ ವಿಧಿಸುವುದರಿಂದ ಉದ್ದೇಶ ಈಡೇರುವುದಿಲ್ಲ. ಇದನ್ನು ತಡೆಗಟ್ಟಲು ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದ್ದು, ಅವರು ಮತ್ತದೇ ತಪ್ಪು ಮಾಡದಂತೆ ಖಾತರಿವಹಿಸಬೇಕಿದೆ. ದಂಡದ ಮೊತ್ತ ಅತ್ಯಲ್ಪವಾಗಿರುವುದರಿಂದ ನಿಯಮ ಉಲ್ಲಂಘಿಸುವವರು ಅದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ ಐಪಿಸಿ ಅಡಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳುವುದನ್ನು ಬಿಬಿಎಂಪಿ ಪರಿಶೀಲಿಸಬೇಕು ಎಂದು ಪೀಠ ಸೂಚಿಸಿದೆ.
“ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ಗಳು ಮತ್ತು ಸಹಕಾರಿ ಗೃಹ ಸೊಸೈಟಿಗಳು ಹೇರಳವಾಗಿದ್ದು, ಅಲ್ಲಿ ಹೆಚ್ಚಿನ ಮಟ್ಟದಲ್ಲಿ ತ್ಯಾಜ್ಯ ಸಂಗ್ರಹವಾಗುತ್ತದೆ. ಇಲ್ಲಿ ತ್ಯಾಜ್ಯ ಪ್ರತ್ಯೇಕಿಸುವ ಕೆಲಸವಾಗಬೇಕಿದೆ. ಅಪಾರ್ಟ್‌ಮೆಂಟ್ ಮಾಲೀಕರು, ಫ್ಲ್ಯಾಟ್ ಮಾಲೀಕರು ಅಥವಾ ಸದಸ್ಯರು ಅಥವಾ ಸಹಕಾರಿ ಸೊಸೈಟಿಯ ಸದಸ್ಯರು ನಿಯಮ ಉಲ್ಲಂಘಿಸಿದರೆ ಅಂಥವರ ವಿರುದ್ಧ ಬಿಬಿಎಂಪಿ ಅಗತ್ಯ ಕ್ರಮಕೈಗೊಳ್ಳಬೇಕು. ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ವೈದ್ಯಕೀಯ ತ್ಯಾಜ್ಯಕ್ಕೆ ಸಂಬಂಧಿಸಿದಂತೆಯೂ ಬಿಬಿಎಂಪಿ ಕ್ರಮವಹಿಸಬೇಕು” ಎಂದು ಪೀಠ ಹೇಳಿದೆ.
ಈ ನಿಟ್ಟಿನಲ್ಲಿ ಬಿಬಿಎಂಪಿಯು ಹೊಸದಾಗಿ ವರದಿ ಸಲ್ಲಿಸಬೇಕು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗಾ ಇಡುವ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದು, ಅದು ಸಹ ತನ್ನ ನಿಲುವು ಮತ್ತು ಕ್ರಮಕೈಗೊಂಡಿರುವ ವರದಿಯನ್ನು ಅಫಿಡವಿಟ್ ಮೂಲಕ ಸಲ್ಲಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
ಘನತ್ಯಾಜ್ಯ ನಿರ್ವಹಣೆ ವಿಚಾರವಾಗಿ “ಬಿಬಿಎಂಪಿ ಮತ್ತು ಕೆಎಸ್‌ಪಿಸಿಬಿ ಮಾತ್ರ ಜವಾಬ್ದಾರರಲ್ಲ. ಜನರೂ ಸಹ ನಿಯಮಗಳನ್ನು ಪಾಲಿಸಬೇಕು. ನಗರದಲ್ಲಿ ಆರೋಗ್ಯ ಸಮಸ್ಯೆಗೆ ಕಾರಣವಾಗುವುದರ ಬಗ್ಗೆ ಜನರು ಕರ್ತವ್ಯ ಪ್ರಜ್ಞೆ ಹೊಂದಬೇಕು. ಈ ನೆಲೆಯಲ್ಲಿ ಡಿಜಿಟಲ್ ವೇದಿಕೆ, ಎಫ್‌ಎಂ ಚಾನಲ್‌ಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪ್ರತಿವಾದಿಗಳು ಮಾಡಬೇಕಿದೆ” ಎಂದು ಪೀಠ ಸಲಹೆ ನೀಡಿದೆ. ಅಂತಿಮವಾಗಿ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.