ಹೆತ್ತವರು ಬದುಕಿರುವಾಗ ಅವರ ಒಡೆತನದ ಫ್ಲಾಟ್‌ಗಳ ಮೇಲೆ ಮಗ ಹಕ್ಕು, ಒಡೆತನ, ಅಥವಾ ಲಾಭಾಂಶ ಪಡೆಯಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ. [ಸೋನಿಯಾ ಫಜಲ್ ಖಾನ್ ಇತರರು ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ದೀರ್ಘಕಾಲದಿಂದ ಹಾಸಿಗೆ ಹಿಡಿದಿರುವ ತನ್ನ ಪತಿಯ ಒಡೆತನದ ಎಲ್ಲಾ ಆಸ್ತಿಗಳಿಗೆ ಅವರನ್ನು ಕಾನೂನುಬದ್ಧ ರಕ್ಷಕ ಎಂದು ಘೋಷಿಸಬೇಕೆಂದು ಕೋರಿ ಸೋನಿಯಾ ಖಾನ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿದ್ದ ಅವರ ಮಗ ಆಸಿಫ್ ಖಾನ್ ತಾನು ತನ್ನ ತಂದೆಯ ವಾಸ್ತವಿಕ ರಕ್ಷಕ ಎಂದು ಹೇಳಿಕೊಂಡಿದ್ದರು. ಪೋಷಕರು ಜೀವಂತವಾಗಿ ಇದ್ದರೂ ಅವರ ಎರಡು ಫ್ಲಾಟ್‌ಗಳು ʼಹಂಚಿಕೊಂಡ ಮನೆʼಗಳಾಗಿದ್ದು ಇವುಗಳಲ್ಲಿ ಒಂದು ಅಥವಾ ಎರಡರ ಮೇಲೆ ತನಗೆ ಕಾನೂನುಬದ್ಧ ಹಕ್ಕು ಇದೆ ಎಂದು ಅವರು ವಾದಿಸಿದ್ದರು.
ಆದರೆ ಈ ವಾದ ಆಧಾರರಹಿತ ಮತ್ತು ಅತಾರ್ಕಿಕ ಎಂದು ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಮಾಧವ್ ಜಾಮದಾರ್ ಅವರಿದ್ದ ಪೀಠ ತಿಳಿಸಿತು. ಉತ್ತರಾಧಿಕಾರದ ಕಾನೂನಿನ ಅಡಿಯಲ್ಲಿ ಪೋಷಕರು ಜೀವಂತವಾಗಿರುವವರೆಗೆ ಪೋಷಕರ ಆಸ್ತಿಯಲ್ಲಿ ಹಕ್ಕು ಅಥವಾ ಒಡೆತನ ಪಡೆಯಲು ಯಾವುದೇ ಸಮುದಾಯಕ್ಕೆ ಸೇರಿದ ಮಗನಿಗೆ ಅವಕಾಶವಿಲ್ಲ ಎಂದು ನ್ಯಾಯಾಲಯ ವಿವರಿಸಿತು.
ತನ್ನ ಪೋಷಕರ ಫ್ಲಾಟ್‌ಗಳು 'ಹಂಚಿಕೊಂಡ ಮನೆ'ಯಾಗಿದ್ದು ತನಗೆ ಜಾರಿಗೊಳಿಸಬಹುದಾದ ಹಕ್ಕನ್ನು ನೀಡುತ್ತದೆ ಎನ್ನುವ ಮಗನ ಹೇಳಿಕೆ ಅತಾರ್ಕಿಕ ಮತ್ತು ಹಾಸ್ಯಾಸ್ಪದವಾಗಿದೆ ಎಂದು ನ್ಯಾಯಾಲಯ ಹೇಳಿತು. ಇದೇ ಸಂದರ್ಭದಲ್ಲಿ ತಾನು ತನ್ನ ತಂದೆಯ ಪಾಲಕನೆಂಬ ಆಸಿಫ್ ಅವರ ಹೇಳಿಕೆಯನ್ನು ಮತ್ತು ತಾಯಿಗೆ ಪರ್ಯಾಯ ಪರಿಹಾರ ನೀಡಬಹುದು ಎಂಬ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.
“ಆಸಿಫ್‌ಗೆ ತನ್ನ ತಂದೆಯ ಫ್ಲಾಟ್‌ಗಳ ಮೇಲೆ ಯಾವುದೇ ಹಕ್ಕು ಇಲ್ಲ. ತನ್ನ ತಂದೆ ಬಗ್ಗೆ ಕಾಳಜಿ ವಹಿಸಿದ್ದಾನೆಂದು ಸಾಬೀತುಪಡಿಸುವ ಯಾವುದೇ ಅಂಶ ಆತನ ಬಳಿ ಇಲ್ಲ. ತನ್ನ ತಾಯಿಗೆ 'ಪರ್ಯಾಯ ಪರಿಹಾರ' ಇದೆ ಎಂಬ ಅವರ ವಾದವನ್ನು ನಾವು ತಿರಸ್ಕರಿಸುತ್ತೇವೆ. ಈ ವಾದವೇ ನಮಗೆ ಸಂಪೂರ್ಣ ಹೃದಯಹೀನ ಮತ್ತು ದುರಾಸೆಯಿಂದ ಕೂಡಿದ ಆಸಿಫ್ ಅವರ ನಿಜವಾದ ಸ್ವಭಾವವನ್ನು ತೋರಿಸುತ್ತದೆ. ಅವರ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ಪೀಠ ಹೇಳಿದೆ.
ಇದೇ ವೇಳೆ “ಆಸಿಫ್ ತಾಯಿ ಜಂಟಿ ಖಾತೆಯನ್ನು ನಿರ್ವಹಿಸಬಹುದು. ತನ್ನ ಪತಿಯ ಚಿಕಿತ್ಸೆಗಾಗಿ ಆಸ್ತಿಯನ್ನು ಮಾರಾಟ ಮಾಡಬಹುದು. ಮಾರಾಟ ಮಾಡಿದ ವಿವರಗಳನ್ನು ಪ್ರತ್ಯೇಕ ಅರ್ಜಿಯೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಪೀಠ ತಿಳಿಸಿತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: