Leh, Sonam Wangchuk 
ಸುದ್ದಿಗಳು

ಬಂಧನದಲ್ಲಿ ವಾಂಗ್‌ಚುಕ್‌: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ವಾಂಗ್‌ಚುಕ್‌ ಅವರ ಪತ್ನಿ ಗೀತಾಂಜಲಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಬಂಧನ ಖಂಡಿಸಿದರು. ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅರ್ಜಿಗೆ ವಿರೋಧ ವ್ಯಕ್ತಪಡಿಸಿದರು.

Bar & Bench

ಸಿಲಡಾಖ್‌ಗೆ ಪ್ರತ್ಯೇಕ ರಾಜ್ಯ ಸ್ಥಾನ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಚಿಂತಕ, ಪರಿಸರವಾದಿ, ಶಿಕ್ಷಣ ತಜ್ಞ ಸೋನಮ್‌ ವಾಂಗ್‌ಚುಕ್‌ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿಸಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಅವರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್ ವಿ ಅಂಜಾರಿಯಾ ಅವರಿದ್ದ ಪೀಠವು ಸಂಕ್ಷಿಪ್ತ ವಿಚಾರಣೆಯ ನಂತರ ಸರ್ಕಾರ  ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತು.

ವಾಂಗ್‌ಚುಕ್‌ ಅವರ ಪತ್ನಿ ಗೀತಾಂಜಲಿ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಬಂಧನಕ್ಕೆ ತಮ್ಮ ಕಕ್ಷಿದಾರರ ವಿರೋಧವಿದೆ ಎಂದರು. ಆದರೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಬಂಧನಕ್ಕೆ ಕಾರಣಗಳನ್ನು ವಿವರಿಸಲಾಗಿದೆ ಎಂದರು. ಆಗ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡುವಂತೆ ನಿರ್ದೇಶಿಸಿದ ಪೀಠ ಪ್ರಕರಣವನ್ನು ಮುಂದಿನ ವಾರ ಅಂದರೆ ಅಕ್ಟೋಬರ್ 13ರ ಸೋಮವಾರ ಆಲಿಸಲು  ತೀರ್ಮಾನಿಸಿತು.

ಸೆಪ್ಟೆಂಬರ್ 26 ರಂದು ಲಡಾಖ್‌ನಲ್ಲಿ ಬಂಧಿತರಾದ ವಾಂಗ್‌ಚುಕ್‌ ಪ್ರಸ್ತುತ ರಾಜಸ್ಥಾನದ ಜೋಧ್‌ಪುರದ ಜೈಲಿನಲ್ಲಿದ್ದಾರೆ. ಲಡಾಖ್‌ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡುವಂತೆ ಬೇಡಿಕೆ ಇಟ್ಟು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ನಾಲ್ವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ವಾಂಗ್‌ಚುಕ್‌ ಅವರನ್ನು ಬಂಧಿಸಲಾಗಿದೆ.

ತಮ್ಮ ಪತಿಯನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಗೀತಾಂಜಲಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ರಾಷ್ಟ್ರೀಯ ಭದ್ರತಾ ಕಾಯ್ದೆಯ ಸೆಕ್ಷನ್ 3(2) ರ ಅಡಿಯಲ್ಲಿ ತನ್ನ ಪತಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧನಲ್ಲಿರಿಸಿರುವುದು ಕಾನೂನುಬಾಹಿರ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆ ಕಾರಣಕ್ಕೆ ನಿಜವಾಗಿಯೂ ಬಂಧನವಾಗಿಲ್ಲ ಬದಲಿಗೆ ಪ್ರಜಾಪ್ರಭುತ್ವ ಮತ್ತು ಪರಿಸರ ಪರ ಧ್ವನಿ ಎತ್ತುತ್ತಿರುವ ವಾಂಗ್‌ಚುಕ್‌ ಅವರನ್ನು ದಮನಿಸಲು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಶಾಂತ ರೀತಿಯಲ್ಲಿ, ಗಾಂಧಿಮಾರ್ಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ವಾಂಗ್‌ಚುಕ್‌ ಅವರನ್ನು ಬಂಧಿಸಿರುವುದು ಸಂವಿಧಾನದ 19ನೇ ವಿಧಿಯ ಉಲ್ಲಂಘನೆ. ಇದಲ್ಲದೆ ಪ್ರಕ್ರಿಯಾತ್ಮಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಬಂಧಿಸಿರುವುದರಿಂದ ಇದು ಸಂವಿಧಾನದ  21ನೇ ವಿಧಿ (ಸ್ವಾತಂತ್ರ್ಯ) ಮತ್ತು14ನೇ ವಿಧಿಗಳ (ಸಮಾನತೆ) ಉಲ್ಲಂಘನೆಯಾಗಿದೆ. ತನಗಾಗಲೀ ತಮ್ಮ ಪತಿ ವಾಂಗ್‌ಚುಕ್‌ ಅವರಿಗಾಗಲೀ ಬಂಧನ ಆದೇಶ ಅಥವಾ ಅದರ ಕಾರಣ ಒದಗಿಸಿಲ್ಲ ಎಂದು ಗೀತಾಂಜಲಿ ದೂರಿದರು.

ಪ್ರತಿಭಟನೆ ನಡೆಯುತ್ತಿರುವ ಲಡಾಖ್‌ನಿಂದ ಸಾವಿರಾರು ಕಿಲೋಮೀಟರ್‌ ದೂರದಲ್ಲಿರುವ ರಾಜಸ್ಥಾನದ ಜೋಧ್‌ಪುರದ ಕೇಂದ್ರ ಕಾರಾಗೃಹಕ್ಕೆ ವಾಂಗ್‌ಚುಕ್ ಅವರನ್ನು ವರ್ಗಾಯಿಸಿರುವುದನ್ನು ಗೀತಾಂಜಲಿ ಪ್ರಶ್ನಿಸಿದರು.

ಕೂಡಲೇ ಅವರನ್ನು ಬಂಧನದಿಂದ ಬಿಡುಗಡೆ ಮಾಡಿ ಸುಪೀಂ ಕೋರ್ಟ್‌ ಎದುರು ಹಾಜರುಪಡಿಸಬೇಕು. ದೂರವಾಣಿ ಸೌಲಭ್ಯ ಮತ್ತು ವೈಯಕ್ತಿಕ ಭೇಟಿಗೆ ಅವಕಾಶ ಕಲ್ಪಿಸಬೇಕು. ಜೈಲಿನಲ್ಲಿ ಔಷಧ, ಬಟ್ಟೆ, ಆಹಾರ ಹಾಗೂ ಮೂಲಭೂತ ಅಗತ್ಯಗಳನ್ನು ಒದಗಿಸಲು ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ಬಂಧನ ಕಾರಣಗಳನ್ನು ಕುಟುಂಬ ಸದಸ್ಯರಿಗೆ ಒದಗಿಸಬೇಕು. ಇಂಟರ್‌ಕಾಂ ಮೂಲಕ ಮಾತ್ರ ವಾಂಗ್‌ಚುಕ್‌ ಅವರೊಂದಿಗೆ ಮಾತನಾಡಲು ಅನುಮತಿಸಲಾಗಿದೆ ಎಂದು ಸಿಬಲ್‌ ವಾದಿಸಿದರು. ಆದರೆ ಮೆಹ್ತಾ ಅವರು ವಾಂಗ್‌ಚುಕ್‌ ಪರ ವಕೀಲರು ಹಾಗೂ ಅವರ ಸಹೋದರ ಜೈಲಿಗೆ ಈಗಾಗಲೇ ಭೇಟಿ ನೀಡಿದ್ದಾರೆ ಎಂದರು. ಈ ಹಂತದಲ್ಲಿ ನ್ಯಾಯಾಲಯ ಕಾನೂನಿನ ಪ್ರಕಾರ ಪತ್ನಿಗೆ ಬಂಧನಕ್ಕೆ ಕಾರಣ ಒದಗಿಸಬೇಕಾದುದು ಅಗತ್ಯವಾದುದು ಎಂದು ಹೇಳಿತು.

ಆಗ ಮೆಹ್ತಾ ಅವರು ವಾಂಗ್‌ಚುಕ್‌ ಅವರಿಗೆ ಬಂಧನದ ಕಾರಣ ಒದಗಿಸಬೇಕೆಂದು ಹೇಳುತ್ತದೆ. ಅಂತೆಯೇ ಅದನ್ನು ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು. ಪತ್ನಿಗೆ ವಿವರ ನೀಡಬಾರದು ಎಂದು ಕಾನೂನು ಹೇಳುತ್ತದೆಯೇ ಎಂದು ಪೀಠ ಪ್ರಶ್ನಿಸಿದಾಗ ಮೆಹ್ತಾ ಅವರು "ನಾವು ಅದನ್ನು ಪರಿಶೀಲಿಸುತ್ತೇವೆ. ಅಂತಹ ಯಾವುದೇ ಸಮಸ್ಯೆಗಳಿಲ್ಲ ಆದರೆ ಬಂಧನ ಆದೇಶವನ್ನು ಪ್ರಶ್ನಿಸಲು ಅವರು ಹೊಸ ನೆಲೆ ಹುಡುಕಿಕೊಳ್ಳಲು ನಾವು ಬಯಸುವುದಿಲ್ಲ" ಎಂದು ಹೇಳಿದರು. ಪತ್ನಿ ಭೇಟಿಗಾಗಿ ಮಾಡಿರುವ ಮನವಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಇದೆಲ್ಲಾ ಉತ್ಪ್ರೇಕ್ಷೆ. ವಾಂಗ್‌ಚುಕ್‌ ಅವರಿಗೆ ಔಷಧಿ ನೀಡುತ್ತಿಲ್ಲ ಮತ್ತು ಪತ್ನಿಯನ್ನು ಭೆಟ್ಟಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ಬಿಂಬಿಸಲು ಇಷ್ಟೆಲ್ಲಾ ಮಾಡಲಾಗುತ್ತಿದೆ. ಭಾವನಾತ್ಮಕ ವಾತಾವರಣ ಸೃಷ್ಟಿಸಲು ಇದನ್ನು ಮಾಡಲಾಗುತ್ತಿದೆ ಅಷ್ಟೇ.
ಎಸ್. ಜಿ ತುಷಾರ್ ಮೆಹ್ತಾ

ವಿಚಾರಣೆ ಮುಗಿಯುವ ಹಂತ ತಲುಪಿದಾಗ ಎಸ್.ಜಿ. ಮೆಹ್ತಾ ಮತ್ತು ಸಿಬಲ್ ಕೆಲಕಾಲ ವಾಗ್ವಾದದಲ್ಲಿ ತೊಡಗಿದರು. "ಏನು ನಡೆಯುತ್ತಿದೆ ಎಂದು ನಮಗೆ ಗೊತ್ತು" ಎಂದು ಎಸ್‌ಜಿ ಗಡುಸಾಗಿ ಪ್ರತಿಕ್ರಿಯಿಸಿದರು. ಅದಕ್ಕೆ ಜಗ್ಗದ ಸಿಬಲ್‌ "ಏನು ನಡೆಯುತ್ತಿದೆ ಎಂದು ನಮಗೂ ತಿಳಿದಿದೆ" ಎಂದರು. ಆಗ ಮಧ್ಯಪ್ರವೇಶಿಸಿದ ನ್ಯಾ. ಅರವಿಂದ್‌ ಕುಮಾರ್‌ ಅವರು ʼಏನು ನಡೆಯುತ್ತಿದೆ ಎಂದು ನಮಗೆ ತಿಳಿದಿಲ್ಲʼ ಎಂದು ಚಟಾಕಿ ಹಾರಿಸಿದರು.